ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟಾಳ್ ರವರಿಗೆ ಬೂಟ್ಸ್ ಏಟು 47

By Staff
|
Google Oneindia Kannada News

ಬೆಂಗಳೂರು, ಸೆ.29: ಜಾತಿ ವೈಷಮ್ಯವನ್ನು ಹೆಚ್ಚಿಸುವ ಮತೀಯವಾದದ ಹೋರಾಟಗಳು ಕನ್ನಡಕ್ಕೆ ಬೇಕಿಲ್ಲ ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿಸೋಮವಾರ ಅಭಿಪ್ರಾಯಪಟ್ಟಿದ್ದಾರೆ.

'ವಾಟಾಳ್ ರವರಿಗೆ ಬೂಟ್ಸ್ ಏಟು 47' ವಿಶಿಷ್ಟ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅನಂತಮೂರ್ತಿ, ಕನ್ನಡ ಹೋರಾಟಗಳು ತಾತ್ವಿಕ ಹೋರಾಟಗಳಾಗಬೇಕೆ ಹೊರತು ಶಿವಸೇನೆಯ ಹೋರಾಟಗಳಾಗಬಾರದು. ವಾಟಾಳ್ ನಾಗರಾಜ್ ಮತೀಯ ವಾದದ ಹೋರಾಟಕ್ಕೆ ಎಂದೂ ಬೆಲೆ ಕೊಟ್ಟವರಲ್ಲ. ಅವರಿಂದಾಗಿ ನಾವು ಇಲ್ಲಿ ಕನ್ನಡ ನಾಮಫಲಕಗಳನ್ನು ನೋಡುವಂತಾಗಿದೆ ಎಂದರು. ಪೊಲೀಸರ ದೌರ್ಜನ್ಯಕ್ಕೆ ವಾಟಾಳ್ ನಾಗರಾಜ್ ತುತ್ತಾಗಿ 47 ವರ್ಷಗಳು ಸಂದಿವೆ. ಅಂದು ಅವರು ಖಾಕಿ ಧಾರಿಗಳಿಂದ ಬೂಟಿನ ಏಟು ತಿಂದ ದಿವಸವನ್ನು ವಾಟಾಳ್ ಕರಾಳ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.

ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ಕನ್ನಡ ಉಳಿದಿದೆ ಎಂದರೆ ಅದಕ್ಕೆ ವಾಟಾಳ್ ನಾಗರಾಜ್ ಅವರ ಹೋರಾಟವೆ ಕಾರಣ. ಕನ್ನಡ ಪರ ಹೋರಾಟಗಳು, ಚಳವಳಿಗಳು ವಿಶಾಲ ಹೃದಯವನ್ನಿಟ್ಟುಕೊಂಡು ಎಲ್ಲ ಧರ್ಮಗಳನ್ನು ಗಣನೆಗೆ ತೆಗೆದುಕೊಂಡು ಕನ್ನಡವನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಆಳುವ ಸರ್ಕಾರಗಳು ಎಲ್ಲ ವ್ಯವಹಾರಗಳನ್ನು ಇಂಗ್ಲಿಷ್ ನಲ್ಲಿ ಮಾಡುತ್ತಿದ್ದರೆ ಕನ್ನಡ ಅಡಿಗೆ ಮನೆ ಭಾಷೆಯಾಗಿ ಉಳಿದು ಬಿಡುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, ಕನ್ನಡ ಭಾಷೆಯ ರಕ್ಷಣೆಗಾಗಿ 5 ದಶಕಗಳಿಗೂ ಹೆಚ್ಚಿನ ಕಾಲ ಹೋರಾಟ ಮಾಡಿದ ಧೀಮಂತ ವ್ಯಕ್ತಿ ವಾಟಾಳ್ ನಾಗರಾಜ್. ಇಂತಹ ವ್ಯಕ್ತಿ ಬೇರೆ ಯಾವುದೇ ಭಾಷೆಯಲ್ಲೂ ಸಿಗಲಾರರು ಎಂದರು. ಕಾರ್ಯಕ್ರಮದಲ್ಲಿ ಎನ್.ಮೂರ್ತಿ, ಮುದ್ದೇಗೌಡ ಮತ್ತಿತರರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X