ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ದೆಹಲಿ ಹೂಮಾರುಕಟ್ಟೆಯಲ್ಲಿ ರಕ್ತದೋಕುಳಿ

By Staff
|
Google Oneindia Kannada News

Mehrauli area in New Delhiನವದೆಹಲಿ, ಸೆ. 27 : ನಗರದ ದಕ್ಷಿಣ ಭಾಗದ ಕುತುಬ್ ಮಿನಾರ್ ಬಳಿಯಿರುವ ಮೆಹರೌಲಿ ಹೂವಿನ ಮಾರುಕಟ್ಟೆಯಲ್ಲಿ ಇಂದು ಮಧ್ಯಾಹ್ನ ಭಯೋತ್ಪಾದಕರು ಮತ್ತೆ ರಕ್ತದೋಕುಳಿಯಾಡಿದ್ದು ಐದಕ್ಕೂ ಹೆಚ್ಚಿನ ಜನ ಸ್ಥಳದಲ್ಲೇ ಸಾವಿಗೀಡಾಗಿದ್ದು, ದೆಹಲಿ ಜನತೆಯನ್ನು ಮತ್ತೆ ಭೀತರನ್ನಾಗಿ ಮಾಡಿದೆ.

ಸೆಪ್ಟೆಂಬರ್ 13ರ ಸರಣಿ ಸ್ಫೋಟದ ನಂತರ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದನೆ ಸಂಘಟನೆಯ ಹಲವಾರು ಜನರನ್ನು ಬಂಧಿಸಲಾಗಿದ್ದರೂ ರಾಷ್ಟ್ರ ರಾಜಧಾನಿಯಲ್ಲಿ ಭಯೋತ್ಪಾದಕರು ಈ ಸ್ಫೋಟದ ಮುಖಾಂತರ ತಮ್ಮ ಇರುವನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ. ಪ್ರತಿಬಾರಿ ಈ ಮೇಲ್ ಕಳಿಸುವ ಮೂಲಕ ಮುನ್ನೆಚ್ಚರಿಕೆ ನೀಡಿ ಸ್ಫೋಟಿಸುತ್ತಿದ್ದ ಭಯೋತ್ಪಾದಕರು ಈ ಬಾರಿ ಯಾವ ಎಚ್ಚರಿಕೆಯೂ ಇಲ್ಲದೆ ಈ ಕೃತ್ಯ ಎಸಗಿದ್ದಾರೆ. ಯಾವ ಸಂಘಟನೆಯೂ ಈ ಸ್ಫೋಟದ ಹೊಣೆ ಹೊತ್ತಿರದಿದ್ದರೂ ಇದು ಭಯೋತ್ಪಾದಕ ದಾಳಿಯೇ ಎಂದು ಪೊಲೀಸರು ಖಾತ್ರಿಪಡಿಸಿದ್ದಾರೆ.

ಬೈಕಿನಲ್ಲಿ ಬಂದ 20 ಅಥವಾ 25 ವರ್ಷ ವಯಸ್ಸಿನ ಇಬ್ಬರು ಟಿಫಿನ್ ಕ್ಯಾರಿಯರನ್ನು ಎಸೆದು ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದಾರೆ. ಟಿಫಿನ್ ಕ್ಯಾರಿಯರನ್ನು ಬಾಲಕನೊಬ್ಬ ಎತ್ತಿ ನೋಡಲು ಪ್ರಯತ್ನಿಸಿದಾಗ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆ ಯಾವ ಮಟ್ಟದ್ದಿತ್ತೆಂದರೆ ಬಾಲಕನ ರುಂಡ ಮುಂಡದಿಂದ ಬೇರ್ಪಡೆಯಾಗಿದೆ. ಬಾಲಕ ಸೇರಿದಂತೆ ಐವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸುತ್ತಲಿನ ಅಂಗಡಿಗಳ ಗಾಜಿನ ಕಿಟಕಿಗಳು ಮತ್ತು ಬೋರ್ಡ್ ಗಳು ಛಿದ್ರವಾಗಿವೆ. ಸ್ಫೋಟದಲ್ಲಿ 20ಕ್ಕೂ ಹೆಚ್ಚಿನ ಜನ ಗಾಯಗೊಂಡಿದ್ದು, ಇವರಲ್ಲಿ ಆರು ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಭಯೋತ್ಪಾದಕರು ಜನನಿಬಿಡ ಪ್ರದೇಶವಾದ ಮೆಹರೌಲಿ ಹೂವಿನ ಮಾರುಕಟ್ಟೆಯನ್ನೇ ಆಯ್ದುಕೊಂಡಿದ್ದಾರೆ. ಕೆಲ ಪ್ರತ್ಯಕ್ಷದರ್ಶಿಗಳು ಭಯೋತ್ಪಾದಕರು ಬೈಕಿನಲ್ಲಿ ಬಂದು ಊಟದ ಡಬ್ಬಿಯನ್ನು ಎಸೆದಿದ್ದನ್ನು ನೋಡಿದ್ದಾರೆ. ಅವರಿಬ್ಬರು ಹೆಲ್ಮೆಟ್ ಧರಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ತಡವಾಗಿ ಆಗಮಿಸಿದ ಪೊಲೀಸರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಲ್ ಇಂಡಿಯಾ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X