ಸೈಫ್ ನಿಂದ ದೆಹಲಿ ಸ್ಫೋಟದ ಪ್ರಮುಖ ಮಾಹಿತಿ
ನವದೆಹಲಿ, ಸೆ.20: ದೆಹಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ಸಿಕ್ಕಿದೆ. ಜಾಮಿಯಾ ನಗರ್ ನಲ್ಲಿ ಶುಕ್ರವಾರ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕ ಮೊಹಮದ್ ಸೈಫ್ ಎಂಬ ಉಗ್ರ ಸೆ.13ರ ದೆಹಲಿ ಸರಣಿ ಸ್ಫೋಟದಲ್ಲಿ ಭಾಗಿಯಾಗಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಶುಕ್ರವಾರದ ಎನ್ ಕೌಂಟರ್ ನಲ್ಲಿ ಮೃತಪಟ್ಟ ಅತೀಫ್ ಅಲಿಯಾಸ್ ಬಕ್ಷಿ ದೆಹಲಿ ಸ್ಫೋಟದ ಪ್ರಧಾನ ಸೂತ್ರಧಾರಿ ಹಾಗೂ ಇಂಡಿಯನ್ ಮುಜಾಹಿದ್ದೀನ್ ಉಗ್ರವಾದ ಸಂಘಟನೆಯ ಮುಖ್ಯಸ್ಥ ಎಂದು ಸೈಫ್ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ಭಾವಿಸಿರುವಂತೆ ಅಬ್ದುಲ್ ಸುಭಾನ್ ಕ್ಯುರೇಷಿ ಅಲಿಯಾಸ್ ತೌಕ್ಯುರ್ ದೆಹಲಿ ಸ್ಫೋಟದ ರೂವಾರಿಗಳು ಅಲ್ಲ ಎಂದು ಆತ ಪೊಲೀಸರಿಗೆ ಸ್ಪಷ್ಟಪಡಿಸಿದ್ದಾನೆ.
ದೆಹಲಿಯ ಖಲೀಲ್ ಮಸೀದಿ ಪಕ್ಕದಲ್ಲಿರುವ ಮನೆಯೊಂದರಲ್ಲಿ ಉಗ್ರರು ಅವಿತಿರುವ ಬಗ್ಗೆ ಮಾಹಿತಿ ಸಿಕ್ಕ ಪೊಲೀಸರು ಎನ್ ಕೌಂಟರ್ ಮಾಡಿ ಶುಕ್ರವಾರ ಇಬ್ಬರ ಹೆಣ ಉರುಳಿಸಿದರು. ಮೃತಪಟ್ಟ ಅತೀಫ್ ಹಾಗೂ ಫಕ್ರುದ್ದೀನ್ ಎಂಬ ಉಗ್ರರು ಇಂಡಿಯನ್ ಮುಜಾಹಿದ್ದೀನ್ ಗೆ ಸೇರಿದವರಾಗಿದ್ದಾರೆ. ಎನ್ ಕೌಂಟರ್ ನಲ್ಲಿ ಬಂಧಿಸಲಾದ ಮತ್ತೊಬ್ಬ ಉಗ್ರ ಝೀಶಾನ್ ಬಗೆಗೂ ತೀವ್ರ ವಿಚಾರಣೆ ನಡೆದಿದೆ. ಈ ಇಬ್ಬರು ಉಗ್ರರು ದೆಹಲಿ ಸರಣಿ ಸ್ಫೋಟದಲ್ಲಿ ಭಾಗಿಯಾಗಿ ಸ್ವತಃ ತಾವೇ ಬಾಂಬ್ ಗಳನ್ನು ಇಟ್ಟಿದ್ದಾಗಿ ಸೈಫ್ ತಿಳಿಸಿದ್ದಾನೆ.
ಶುಕ್ರವಾರ ಸೈಫ್ ನನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಂತರ ಆತನನ್ನು 14 ದಿನಗಳ ಕಾಲ ಪೊಲೀಸ್ ಬಂಧನಕ್ಕೆ ಆದೇಶಿಸಲಾಯಿತು.ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಇನ್ನೂ ಆರು ಮಂದಿ ಉಗ್ರರ ಬಗ್ಗೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಸ್ಫೋಟಕ್ಕೆ ಸಂಬಂಧಿಸಿದಂತೆ ಇದುವರೆಗೂ ಉತ್ತರ ಪ್ರದೇಶದಲ್ಲಿ ಮೂವರು, ಮಧ್ಯಪ್ರದೇಶದಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಸೆ.13ರಂದು ಜನಜಂಗುಳಿ ಅಧಿಕವಾಗಿರುವ ದೆಹಲಿಯ ಮಾರುಕಟ್ಟೆ ಪ್ರದೇಶಗಳಲ್ಲಿ ಸರಣಿ ಸ್ಫೋಟ ಸಂಭವಿಸಿ 24 ಮಂದಿ ಮೃತಪಟ್ಟು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
(ಏಜೆನ್ಸೀಸ್)
ದಿಲ್ಲಿಯಲ್ಲಿ ಉಗ್ರರೊಂದಿಗೆ ಎನ್ ಕೌಂಟರ್












Click it and Unblock the Notifications