ಮಂಗಳೂರು ಗಲಭೆ ರಾಕ್ಷಸೀ ಕೃತ್ಯ : ಮೊಯ್ಲಿ
ಮಂಗಳೂರು, ಸೆ. 18 : ಮಂಗಳೂರು ಗಲಭೆ ಜನಪ್ರತಿನಿಧಿಗಳಿಗೆ ರಾಜಕೀಯ ದಾಳವಾಗಿ ಪರಿಣಮಿಸಿದೆ. 'ಉರಿಯುವ ಮನೆಯಲ್ಲಿ ಗಳ ಹಿರಿಯುವ ಕೆಲಸ'ವನ್ನು ನಮ್ಮ ರಾಜಕಾರಣಿಗಳು ಕೈಹಾಕಿರುವುದು ಸ್ಪಷ್ಟವಾಗಿದೆ. ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಂ.ಪಿ.ಪ್ರಕಾಶ್, ಸಿದ್ದರಾಮಯ್ಯ, ವೀರಪ್ಪ ಮೂಯ್ಲಿ, ಧರ್ಮಸಿಂಗ್ ಹೀಗೆ ಪ್ರತಿ ನಾಯಕರು ಸರ್ಕಾರವನ್ನು ಹಿಗ್ಗಾಮುಗ್ಗಾ ಟೀಕಿಸತೊಡಗಿದ್ದಾರೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಇನ್ನಿಲ್ಲದ ಪ್ರಯತ್ನ ನಡೆದಿರುವುದು ದುರದೃಷ್ಟಕರ ಸಂಗತಿ.
ನಿನ್ನೆ ತಾನೇ ಹಿಂದುಪರ ಸಂಘಟನೆಗಳನ್ನು ನಿಷೇಧಿಸುವ ಕುರಿತು ಮಾತನಾಡಿದ್ದ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ, ಇಂದು ಗಲಭೆ ಪೀಡಿತ ಮಂಗಳೂರು ನಗರಕ್ಕೆ ಭೇಟಿ ನೀಡಿ ದಾಳಿಗೊಳಗಾದ ಚರ್ಚ್ ಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸರ್ಕಾರದ ವರ್ತನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, ಇದೊಂದು ರಾಕ್ಷಸೀ ಕೃತ್ಯ ಎಂದು ಹರಿಹಾಯ್ದರು. ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳು ತೆಗೆದುಕೊಂಡಿರುವ ಏಕಪಕ್ಷೀಯ ನಿರ್ಧಾರಗಳೇ ಈ ಗಲಭೆಗೆ ಕಾರಣವಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಗಲಭೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ನ್ಯಾಯಾಂಗ ತನಿಖೆಗೆ ವಹಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಗುಡುಗಿದರು.
ಚರ್ಚ್ ಮೇಲಿನ ದಾಳಿಯನ್ನು ತೀವ್ರ ಖಂಡಿಸಿದ ಅವರು, ಚರ್ಚ್ ನಲ್ಲಿ ಏಸು ಮೂರ್ತಿ, ಪವಿತ್ರ ಗ್ರಂಥ ಬೈಬಲ್ ಪುಸ್ತಕವನ್ನು ಸುಟ್ಟ ಹಾಕುವುದರ ಜತೆಗೆ ಚರ್ಚ್ ನಲ್ಲಿರುವ ಸಿಸ್ಟರ್ ಗಳ ಮೇಲೆ ದಾಳಿ ಮಾಡುವುದು ಅತ್ಯಂತ ಅಮಾನವೀಯ ಕೃತ್ಯ. ಸಿಸ್ಟರ್ ಗಳ ಮೇಲೆ ದಾಳಿ ನಡೆಸುವವರು ಬಹುಶಃ ಮನುಷ್ಯರೇ ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಭಜರಂಗದಳ ನಿಷೇಧಕ್ಕೆ ಧರಂಸಿಂಗ್ ಆಗ್ರಹ
ಮಂಗಳೂರಿನಲ್ಲಿ ನಡೆದಿರುವ ಕೋಮು ಗಲಭೆಗೆ ಸರ್ಕಾರದ ಕೃಪಾಪೋಷಿತ ನಾಟಕ. ರಾಜ್ಯದ ಗೃಹ ಸಚಿವರೇ ಗಲಭೆಗೆ ಕುಮ್ಮುಕ್ಕು ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಆರೋಪಿಸಿದ್ದಾರೆ. ಗಲಭೆಗೆ ಕಾರಣವಾಗಿರುವ ಭಜರಂಗದಳವನ್ನು ನಿಷೇಧಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿರುವ ಅವರು, ಪ್ರಕರಣವನ್ನು ನ್ಯಾಯಾಂಗ ತನಿಖೆ ಇಲ್ಲವೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗನಿಂದಲೂ ಕೋಮು ಗಲಭೆಗಳು ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಹೀಗೆ ಮುಂದುವರೆದಲ್ಲಿ ಸರ್ಕಾರದ ಧೋರಣೆ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.
ಈ ಎಲ್ಲ ಘಟನೆಗಳ ಹೊರತಾಗಿಯೂ ಮಂಗಳೂರು ಸಹಜ ಸ್ಥಿತಿಗೆ ಮರಳತೊಡಗಿದೆ. ಶಾಲಾ ಕಾಲೇಜು, ರಸ್ತೆ ಸಂಚಾರ ಸುಗಮವಾಗಿದೆ. ಪೊಲೀಸ್ ಬಂದೋಬಸ್ತ್ ಮುಂದುವರೆದಿದೆ.
(ದಟ್ಸ್ ಕನ್ನಡ ವಾರ್ತೆ)
ಹಿಂದು ಸಂಘಟನೆ ನಿಷೇಧಿಸುವ ಪ್ರಶ್ನೆಯೇ ಇಲ್ಲ
ಮಂಗಳೂರು ಗಲಭೆ : ಸಚಿವರಿಗೆ ಮುತ್ತಿಗೆ
ಅಗತ್ಯ ಬಿದ್ದರೆ ಹಿಂದುಪರ ಸಂಘಟನೆಗಳ ನಿಷೇಧ












Click it and Unblock the Notifications