ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲವಾಡಗಿಯಲ್ಲಿ ಅಪರೂಪದ ವೀರಗಲ್ಲು ಪತ್ತೆ

By Staff
|
Google Oneindia Kannada News

Veeragallu found near Talikotiತಾಳಿಕೋಟಿ, ಸೆ. 18 : ತಾಳಿಕೋಟಿ ಸಮೀಪದ ಬಂಡೆಪ್ಪನಹಳ್ಳಿ ಸಾಲವಾಡಗಿಯಲ್ಲಿ ಇತ್ತೀಚೆಗೆ ಅಪರೂಪದ ವೀರಗಲ್ಲೊಂದನ್ನು ಪತ್ತೆ ಹಚ್ಚಲಾಗಿದೆ. ನಗರದ ಶ್ರೀ ಖಾಸ್ಗತೇಶ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರಾದ ಶೇಷಾಚಲ ಹವಾಲ್ದಾರ ಮತ್ತು ಕನ್ನಡ ಪ್ರಾಧ್ಯಾಪಕರಾದ ಚಂದ್ರಗೌಡ ಕುಲಕರ್ಣಿ ಇವರು ಆ ಗ್ರಾಮದ ವಿದ್ಯಾರ್ಥಿಗಳ ಸಹಾಯದಿಂದ ವಿಶಿಷ್ಟವಾದ ಐತಿಹಾಸಿಕ ಮಹತ್ವ ಸಾರುವ ದಾಖಲೆಯೊಂದನ್ನು ಸಂಶೋಧಿಸಿ ಬೆಳಕಿಗೆ ತಂದಿದ್ದಾರೆ.

ನಾಲ್ಕು ಅಡಿ ಎತ್ತರವಿರುವ ಈ ವೀರಗಲ್ಲು ಎರಡು ಅಡಿಗಿಂತಲೂ ಅಗಲವಿದೆ. ಹೋರಾಡುವ ವೀರರಲ್ಲಿ ಇಬ್ಬರು ಪ್ರಮುಖರು ಧನಸ್ಸನ್ನು ಹಿಡಿದಿದ್ದಾರೆ, ಇಬ್ಬರ ಭುಜದ ಮೇಲೂ ಬತ್ತಳಿಕೆ ಇವೆ; ಮುಡಿ ಕಟ್ಟಿದ್ದಾರೆ. ಒಬ್ಬನ ತಲೆಯ ಮೇಲೆ ಸತ್ತಿಗೆ ಇದೆ. ಇನ್ನೊಬ್ಬ ವೀರ ಕೈಯಲ್ಲಿ ಖಡ್ಗ , ಗುರಾಣಿ ಹಿಡಿದಿದ್ದಾನೆ. ಮತ್ತೊಬ್ಬ ವೀರನ ಚಿತ್ರ ಅಸ್ಪಷ್ಟವಾಗಿದೆ. ಪುರಾತನ ಮುನೇಶ್ವರ ದೇಗಲದ ಎದುರಿನ ಗೋಡೆಯ ತಳಭಾಗಕ್ಕೆ ಹೊಂದಿಕೊಂಡು ಗೋಡೆಯ ಒಂದು ಭಾಗವೇ ಆಗಿದೆ.

ಸಾಮನ್ಯವಾಗಿ ವೀರಗಲ್ಲುಗಳಲ್ಲಿ ಇರುವಂತೆ ಇಲ್ಲಿಯೂ ಮೂರು ಪಟ್ಟಿಕೆಗಳಿವೆ. ಕೆಳ ಪಟ್ಟಿಕೆಯಲ್ಲಿ ಹೋರಾಟಗಾರರ ಚಿತ್ರಣವಿದೆ. ಆದರೆ ಈ ವೀರಗಲ್ಲಿನ ವಿಶೇಷವೆಂದರೆ ಎರಡನೆಯ ಪಟ್ಟಿಕೆಯಲ್ಲಿ ನಾಲ್ಕು ಜನ ಸುರಾಂಗನೆಯರು ಇಬ್ಬರೂ ವೀರರನ್ನು ಕರೆದೊಯ್ಯುವ ಚಿತ್ರವಿರುವುದು. ಮತ್ತು ಮೂರನೆಯ ಪಟ್ಟಿಕೆಯಲ್ಲಿ ಇಬ್ಬರೂ ವೀರರು ಏಕಕಾಲಕ್ಕೆ ಸಾಯುಜ್ಯ ಪದವಿ ಪಡೆದಿರುವುದು. ವೀರಗಲ್ಲುಗಳ ತಜ್ಞರಾದ ಅನಂತಪುರಂನ ಡಾ. ಆರ್. ಶೇಷಶಾಸ್ತ್ರಿಯವರನ್ನು , ಡಾ. ವೀರೇಶ ಬಡಿಗೇರ ಅವರನ್ನು ಮತ್ತು ಹವ್ಯಾಸಿ ಸಂಶೋಧಕರಾದ ಶಿವಣ್ಣ ನೀರಲಗಿ ಅವರನ್ನು ಸಂಪರ್ಕಿಸಿ ವಿಶೇಷತೆಯ ಮಹತ್ವವನ್ನು ಮನವರಿಕೆ ಮಾಡಿಕೊಳ್ಳಲಾಗಿದೆಯೆಂದು ಸಂಶೋಧಕರಿಬ್ಬರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮೊದಲ ಮತ್ತು ಎರಡನೆಯ ಪಟ್ಟಿಕೆಯ ನಡುವೆ ಇರುವ ಚಿಕ್ಕ ಜಾಗೆಯಲ್ಲಿ ಕಂಡುಬರುವ ಗೋವುಗಳ ಉಬ್ಬು ಚಿತ್ರಗಳು ಇದು ಗೋಗ್ರಹಣ ವೀರಗಲ್ಲೆಂಬುದಕ್ಕೆ ಸಾಕ್ಷಿ ನುಡಿಯುತ್ತದೆ. ಐತಿಹಾಸಿಕ ಮತ್ತು ಪ್ರಕೃತಿಕ ಮಹತ್ವ ಪಡೆದ ಸಾಲವಾಡಗಿ ಸಮೀಪದ ಎಲ್ಲಮ್ಮನಕೊಳ್ಳ ಹಾಗೂ ಬಂಡೆಪ್ಪನಹಳ್ಳಿಯ ಎಂದೂ ಬತ್ತದ ನೀರಿನ ಚಿಕ್ಕಹೊಂಡಗಳು ವಿಸ್ಮಯವನ್ನು ಸಾರುತ್ತವೆ.

ಸರಕಾರ ತುರ್ತಾಗಿ ಈ ವೀರಗಲ್ಲಿನ ಸಂರಕ್ಷಣೆ ಮಾಡಲು ಇತ್ತಕಡೆ ಗಮನ ಹರಿಸಬೇಕಾಗಿದೆ. ಊರಿನವರು ಈ ಅಮೂಲ್ಯ ಸಾಂಸ್ಕೃತಿಕ ಸಂಪತ್ತನ್ನು ರಕ್ಷಿಸಲು ಮುಂದಾಗಬೇಕಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಓದುಗರೇ, ಇಂಥ ವರದಿಗಳನ್ನು ದಟ್ಸ್ ಕನ್ನಡಕ್ಕೆ ನೀವೂ ಕಳಿಸಬಹುದು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X