ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಧಿಗೆ ಮುಂಚೆ ಸರ್ಕಾರ ಆತ್ಮಹತ್ಯೆ ಮಾಡಿಕೊಳ್ಳಲಿದೆ

By Staff
|
Google Oneindia Kannada News

Former Chief Minister of Karnataka H.D. Kumarswamyಬೆಂಗಳೂರು, ಸೆ. 18 : ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅವಧಿ ಮುಂಚೆಯೇ ಆತ್ಮಹತ್ಯೆ ಮಾಡಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಗುರುವಾರ ಪಕ್ಷದ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸರ್ಕಾರದ ವಿರುದ್ಧದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಮಂಗಳೂರು ಕೋಮು ಗಲಭೆಗೆ ಸರ್ಕಾರವೇ ನೇರ ಕಾರಣ ಎಂದರು. ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಅರಾಜಕತೆ ಉಂಟಾಗಿದೆ. ಅಲ್ಪಸಂಖ್ಯಾತರು ಭಯದ ನೆರಳಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದ ಅವರು, ಮಂಗಳೂರು ಚರ್ಚ್ ಮೇಲಿನ ದಾಳಿಯನ್ನು ಮಾಡಿರುವುದನ್ನು ಭಜರಂಗದಳ ಕಾರ್ಯಕರ್ತರು ಹೊಣೆ ಹೊತ್ತುಕೊಂಡಿದ್ದರೂ, ಅವರನ್ನು ಬಂಧಿಸಲು ಸರ್ಕಾರ ಮೀನಮೇಷ ಎಣಿಸುತ್ತಿರುವ ಮರ್ಮವಾದರೂ ಏನು ಎಂದು ಪ್ರಶ್ನಿಸಿದರು. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡುವುದರಲ್ಲಿ ಸಂಶಯವೇ ಇಲ್ಲ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಉಂಟಾಗಿರುವ ಅರಾಜಕತೆ ಶಮನಗೊಳಿಸಲು ರಾಷ್ಟ್ರಪತಿಯವರು ಕೂಡಲೇ ಮಧ್ಯೆ ಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದ ಅವರು, ಈ ಸಂಬಂಧ ಮನವಿ ಪತ್ರವನ್ನು ರಾಜ್ಯಪಾಲರ ಮೂಲಕ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಕಳುಹಿಸಲಾಗುವುದು ಎಂದು ಹೇಳಿದರು. ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ರೈತರಿಗೆ ಆಗುತ್ತಿರುವ ಅನ್ಯಾಯ, ಚರ್ಚ್ ಗಳ ಮೇಲೆ ದಾಳಿ, ರೈತರ ಮೇಲಿನ ಗೋಲಿಬಾರ್, ಶಾಸಕರ ಖರೀದಿ ಹೀಗೆ ಹತ್ತು-ಹಲವು ದುರಾಡಳಿತ ನಡೆಸಿರುವ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ತಮಗಿರುವ ಪರಮಾಧಿಕಾರ ಬಳಸಿ ಎಚ್ಚರಿಕೆ ನೀಡಬೇಕೆಂದು ಮನವಿ ಪತ್ರದ ಪ್ರಮುಖ ಅಂಶವಾಗಿದೆ ಎಂದರು.

ರಾಜ್ಯದಲ್ಲಿ ಸಂಘ ಪರಿವಾರದ ಕೈವಾಡವಿರುವುದು ನಿಜ. ಸರ್ಕಾರವೇ ನೇರವಾಗಿ ಕುಮ್ಮಕ್ಕು ನೀಡುವ ಮೂಲಕ ಇಂತಹ ಗಲಭೆಯನ್ನು ಮಾಡಿಸುತ್ತಿದೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದ ಎಲ್ಲ ಘಟನೆಗೆ ಸರ್ಕಾರವನ್ನೇ ಹೊಣೆ ಮಾಡಬೇಕು .ಗಲಭೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸಿದರೆ ಮಾತ್ರ, ನ್ಯಾಯಯುತ ಪರಿಹಾರ ಸಾಧ್ಯ ಎಂದರು.

ಬಿಜೆಪಿ 100 ದಿನ ಸಂಭ್ರಮ ಹಿಂದಿನ ದಿನ ಅಂದರೆ ಸೆ. 8 ರಂದು ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಇಂದು ಎರಡನೇ ಬೃಹತ್ ಪ್ರತಿಭಟನಾ ಸಭೆ ಇದಾಗಿದ್ದು, ಅಕ್ಟೋಬರ್ 2 ರಿಂದ ರಾಜ್ಯಾದ್ಯಂತ ಮೂರನೇ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಘೋಷಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್, ಮಾಜಿ ಸಚಿವ ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪೂರ್, ಬಾಲಕೃಷ್ಣ, ಎಂ.ಸಿ.ನಾಣಯ್ಯ ಮತ್ತಿತರರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ಮಂಗಳೂರು ಗಲಭೆ : ಸಿಓಡಿ ತನಿಖೆಗೆ ಸಂಪುಟ ಅಸ್ತು
ಮಂಗಳೂರು ಗಲಭೆ ರಾಕ್ಷಸೀ ಕೃತ್ಯ : ಮೊಯ್ಲಿ
ಹಿಂದು ಸಂಘಟನೆ ನಿಷೇಧಿಸುವ ಪ್ರಶ್ನೆಯೇ ಇಲ್ಲ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X