ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಪೇಟೆಗೆ ಬಂದು ಸಾವಪ್ಪಿದ ಚಿರತೆ

By Staff
|
Google Oneindia Kannada News

ವರದಿ: ಸುಕುಮಾರ್, ಮೈಸೂರು

ಮೈಸೂರು, ಸೆ. 16 : ಕಾಡಿನಿಂದ ನಾಡಿಗೆ ಬಂದು ನಾನಾ ಸಂಕಷ್ಟಗಳನ್ನು ಎದುರಿಸಿ ಜನರನ್ನು ತಬ್ಬಿಬ್ಬುಗೊಳಿಸಿ ಕಡೆಗೆ ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಬಲಿಯಾದ ಒಂದುನತದೃಷ್ಟ ಚಿರತೆ ಕಥೆ ಇಲ್ಲಿದೆ. ದುಷ್ಟ ಜನರ ಕೈಗೆ ಸಿಕ್ಕಿ ಬಲಿಯಾದ ಚಿರತೆಯ ಕಥೆಯಿದು.

ಮಂಗಳವಾರ ಬೆಳಗ್ಗೆ ನಗರದ ಕೆ.ಸಿ.ನಗರದ ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಇದ್ದಕ್ಕಿದ್ದ ಹಾಗೆ ಚಿರತೆ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಸೃಷ್ಟಿಸಿತು. ಈ ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ಹರಸಾಹಸ ಮಾಡಬೇಕಾಯಿತು. ಈ ಸಂದರ್ಭದಲ್ಲಿ ಚಿರತೆಯು ಐದು ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಸತತ ಮೂರು ಗಂಟೆಗಳ ಕಾಲ ನಡೆದ ಕಾರ್ಯಚರಣೆಯಲ್ಲಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಬಲೆಗೆ ಸಿಕ್ಕಿ ತನ್ನ ಪ್ರಾಣವ ಬಿಟ್ಟಿತು
ಚಿರತೆ ಮೊದಲು ಚಾಮುಂಡಿ ಬೆಟ್ಟದ ಸಮೀಪ ಇರುವ ಸಂಗೊಳ್ಳಿ ರಾಯಣ್ಣ ವೃತ್ತದ ಪೊದೆಯೊಂದರ ಬಳಿ ಬೆಳಗಿನ ಜಾವ 6.40ರ ಸುಮಾರಿನಲ್ಲಿ ಒಂದಿಬ್ಬರ ಕಣ್ಣ್ಣಿಗೆ ಬಿತ್ತು. ಚಿರತೆಯನ್ನು ನೋಡಲು ಮತ್ತೊಂದಿಷ್ಟು ಜನ ಜಮಾಯಿಸಿದರು. ಹೀಗೇ ಸುದ್ದಿ ಎಲ್ಲೆಡೆಯೂ ಹಬ್ಬಿ ಚಿರತೆಯನ್ನು ನೋಡಲು ಜನಜಂಗುಳಿಯೇ ಆಗಮಿಸಿತು. ಮಾಧ್ಯಮದವರು ಕ್ಯಾಮೆರಾಗಳಿಂದ ಶೂಟ್ ಮಾಡಲು ಚಿರತೆ ಹಾಗೂ ಜನರಹಿಂದೆ ಬಿದ್ದರು. ಇಷ್ಟೊಂದು ಜನರನ್ನು ಕಂಡ ಚಿರತೆ ಗಲಿಬಿಲಿಗೊಂಡಿತು. ತನ್ನನ್ನು ಹಿಡಿಯಲು ಬಂದವರ ಮೇಲೆ ಆಗಾಗ ಎರಗಿ ಘಾಸಿಗೊಳಿಸುತ್ತಿತ್ತು.

ಗಂಟೆ 8.45ಕ್ಕೆ ಸರಿಯಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಯತೀಶ್ ಕುಮಾರ್ ಸ್ಥಳಕ್ಕೆ ತರಾತುರಿಯಲ್ಲಿ ಧಾವಿಸಿದರು. ಅವರ ಹಿಂದೆ ಜಿಲ್ಲಾ ಪೊಲೀಸ್ ಅಧಿಕಾರಿಗಳಾದ ಡಿ"ಸೋಜಾ, ಎಸ್.ಡಿ.ಜವಾಹರ್ ಲಾಲ್ ಹಾಗೂ 500 ಪೋಲೀಸರ ತಂಡ ಸಹ ಆಗಮಿಸಿತು. ಈ ಮಧ್ಯೆ ಅರಣ್ಯಾಧಿಕಾರಿಗಳು ಗನ್ ಮೂಲಕ ಸಿಡಿಸಿದ ಅರವಳಿಕೆ ಸೂಜಿಗಳು ಗುರಿ ತಪ್ಪಿದವು. ತಾ ಮುಂದು ನಾ ಮುಂದು ಎಂದು ಓಡುತ್ತಿದ್ದ ಇಬ್ಬರು ಛಾಯಾಗ್ರಾಹಕರ ಮೇಲೆ ಚಿರತೆ ಎರಗಿ ಗಾಯಗೊಳಿಸಿತು.ಒಟ್ಟಿನಲ್ಲಿ ಚಿರತೆಯನ್ನು ಹಿಡಿಯುವ ದೃಶ್ಯ ಹೇಗಿತ್ತೆಂದರೆ, ಅರಣ್ಯಾಧಿಕಾರಿಗಳಿಗೆ ಚೆಲ್ಲಾಟ ಚಿರತೆಗೆ ಪ್ರಾಣ ಸಂಕಟ ಎಂಬಂತಾಗಿತ್ತು. ಕಟ್ಟಕಡೆಗೆ ಇಲಿ ಬೋನಿಗೆ ಬಿದ್ದಂತೆ ಚಿರತೆ ಬೆಳಗ್ಗೆ 11.20ಕ್ಕೆ ಸರಿಯಾಗಿ ಬಲೆ ಬಿತ್ತು.

ಕಾರ್ಯಚರಣೆಯ ವೇಳೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.ದೊಣ್ಣೆ ಹಾಗೂ ಇತರ ಆಯುಧಗಳ ಮೂಲಕ ಕಾರ್ಯಚರಣೆ ನಡೆಸಿದ್ದರಿಂದ ಚಿರತೆ ಗಾಯಗೊಂಡಿತ್ತು. ತಲೆಗೆ ಬಲವಾದ ಪೆಟ್ಟು ಬಿದ್ದು ನರಳುತ್ತಿತ್ತು. ಮೈಸೂರು ಮೃಗಾಲಯದಲ್ಲಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು, ಆದರೆ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸದ ಚಿರತೆ ತನ್ನ ಪ್ರಾಣವ ಬಿಟ್ಟಿತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X