ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ನಿಗ್ರಹಕ್ಕೆ ನೂತನ ಕಾಯ್ದೆ ಬೇಕು : ಮೊಯ್ಲಿ

By Staff
|
Google Oneindia Kannada News

ನವದೆಹಲಿ, ಸೆ. 16 : ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವ ಗಾದೆಗೆ ತಕ್ಕಂತೆ ವರ್ತಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದೀಗ ಉಗ್ರರ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಒಲವು ತೋರಿಸಿದೆ. ದೇಶದಲ್ಲಿ ನಡೆಯುತ್ತಿರುವ ಉಗ್ರರ ವಿಧ್ವಂಸಕರ ಕೃತ್ಯಗಳನ್ನು ತಡೆಯಲು ವಿಶೇಷ ಕಾಯ್ದೆ ಅನಿವಾರ್ಯಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿಯು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ಚಿಂತನ-ಮಂಥನ ಕಾರ್ಯ ಯುಪಿಎ ವಲಯದಲ್ಲಿ ನಡೆದಿದೆ ಎನ್ನಲಾಗಿದೆ.

ಕಳೆದ ಎರಡು ಮೂರು ವರ್ಷಗಳಲ್ಲಿ ದೇಶ ಉಗ್ರರ ಅಟ್ಟಹಾಸದಿಂದ ಅಕ್ಷರಶಃ ನಲುಗಿದೆ. ಜೈಪುರ, ಹೈದರಾಬಾದ್, ಬೆಂಗಳೂರು, ಮುಂಬೈ, ಅಹಮದಾಬಾದ್, ಇತ್ತೀಚಿನ ದಿಲ್ಲಿ ಸ್ಫೋಟಕ್ಕೆ ನೂರಾರು ಅಮಾಯಕರು ಪ್ರಾಣತೆತ್ತಿದ್ದಾರೆ. ಸ್ಫೋಟಗೊಳಿಸಿ ಪ್ರಾಣ ಹಾನಿ ಮಾಡುವುದಲ್ಲದೇ, ಸವಾಲಿನ ರೀತಿಯಲ್ಲಿ ವರ್ತಿಸುತ್ತಿರುವ ಉಗ್ರರ ವರ್ತನೆ ಸರ್ಕಾರದ ನಿದ್ದೆಗೆಡಿಸಿದೆ. ಈ ಎಲ್ಲ ಅಗುಹೋಗುಗಳನ್ನು ಅವಲೋಕಿಸಿರುವ ಸಮಿತಿ ಉಗ್ರರ ನಿಗ್ರಹಕ್ಕೆ ನೂತನ ಕಾನೂನು ಅಗತ್ಯ ಎಂದು ಪ್ರತಿಪಾದಿಸಿದೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಮುಖ್ಯಸ್ಥ ವೀರಪ್ಪ ಮೊಯ್ಲಿ, ಈಗಿರುವ ಕಾನೂನಿನಲ್ಲಿ ಉಗ್ರರನ್ನು ಮಟ್ಟಹಾಕಲು ಸಾಧ್ಯವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಉಗ್ರ ಹಾವಳಿಯಿಂದ ದೇಶ ಸಂಕಷ್ಟದಲ್ಲಿ ನರಳತೊಡಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ದೇಶದ ಸಾರ್ವಭೌಮತೆಯನ್ನು ಕಾಪಾಡುವ ನಿಟ್ಟಿನಲ್ಲಿ ನೂತನ ಕಾಯ್ದೆ ಜಾರಿಗೊಂಡರೆ ತಕ್ಕ ಮಟ್ಟಿಗೆ ಸುಧಾರಣೆ ಕಾಣಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

185 ಪುಟಗಳ ಸಮಗ್ರ ವರದಿಯನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡಿಬಿಡಿಯಾಗಿ ಬಿಚ್ಚಿಟ್ಟ ಅವರು, 1980ರ ದೇಶದ ಭದ್ರತಾ ಕಾಯ್ದೆಗೆ ತಿದ್ದುಪಡಿ ಅನಿವಾರ್ಯ. ಉಗ್ರರಿಗೆ ಕಡಿವಾಣ ಹಾಕಲು ಈ ಕಾಯ್ದೆ ಅಷ್ಟೊಂದು ಸಮರ್ಥವಾಗಿಲ್ಲ. ಕೂಡಲೇ ಸರ್ಕಾರ ಇದರ ಸಾಧಕ ಬಾಧಕಗಳನ್ನು ಚರ್ಚಿಸಿ ಶೀಘ್ರದಲ್ಲಿ ಸೂಕ್ತ ತೀರ್ಮಾನಕ್ಕೆ ಬರಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. ಈ ಮಧ್ಯೆ ಗೃಹ ಸಚಿವ ಶಿವರಾಜ್ ಪಾಟೀಲ್ ಕೂಡಾ ವೀರಪ್ಪ ಮೊಯ್ಲಿ ಅವರ ಒತ್ತಾಯಕ್ಕೆ ಧ್ವನಿಗೂಡಿಸಿರುವುದು ನೂತನ ಕಾಯ್ದೆ ಜಾರಿಯಾಗುವುದು ನಿಚ್ಚಳ ಎನ್ನಲಾಗಿದೆ.

ಸಮಿತಿಯ ವರದಿಯಿಂದ ಎಚ್ಚೆತ್ತುಕೊಂಡಿರುವ ಯುಪಿಎ ಕೊನೆಗೂ ಉಗ್ರರ ಕಾಯ್ದೆ ರಚನೆಗೆ ಮುಂದಾಗುವ ಸಾಧ್ಯತೆಗಳಿವೆ. ಅಲ್ಲದೇ ದಿಲ್ಲಿ ಸ್ಫೋಟದ ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, 1980ರ ಕಾಯ್ದೆಗೆ ಕೆಲ ತಿದ್ದುಪಡಿ ಮಾಡುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿವೆ. ಅಲ್ಲದೇ ಪ್ರತಿಪಕ್ಷಗಳ ನಾಯಕ ಎಲ್.ಕೆ.ಅಡ್ವಾಣಿ ಉಗ್ರರ ನಿಗ್ರಹ ಕಾಯ್ದೆ ರಚಿಸುವಂತೆ ಅನೇಕ ಭಾರಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು. ಒಟ್ಟಿನಲ್ಲಿ ಕೆಟ್ಟ ಮೇಲೆ ಬುದ್ಧಿ ಬಂದಿರುವುದು ಸುಳ್ಳಲ್ಲ.

(ದಟ್ಸ್ ಕನ್ನಡ ವಾರ್ತೆ)

ಹರಕೆಯ ಕುರಿಯಾಗಲು ಸಿದ್ಧವಾದ ಪಾಟೀಲ್!
ದಿಲ್ಲಿ ಸ್ಫೋಟ : 10 ಶಂಕಿತ ವ್ಯಕ್ತಿಗಳ ವಿಚಾರಣೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X