ಉರ್ದು ಪತ್ರಿಕೆಗೆ ಮುಸ್ಲಿಂ ರಾಜಕಾರಣಿ ಬೆದರಿಕೆ
ಗುಲ್ಬರ್ಗ, ಸೆ.16: ಕರ್ನಾಟಕದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಖಮರುಲ್ ಇಸ್ಲಾಂ ವಿರುದ್ಧ 'ಇನ್ ಕ್ವಿಲಾಬಿ-ಇ-ಡೆಕ್ಕನ್' ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕ ಮೊಯಿದ್ದೀನ್ ಪಾಷಾ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಮರ್ ಉಲ್ ವಿರುದ್ಧ ಪತ್ರಿಕೆಯು ಒಂದು ವರದಿ ಪ್ರಕಟಿಸಿತ್ತು. ಅದರಿಂದ ಕುಪಿತರಾದ ಖಮರುಲ್ ಪತ್ರಿಕೆಯ ಸಂಪಾದಕ ಪಾಷಾ ಅವರಿಗೆ ಪ್ರಾಣ ಬೆದರಿಕೆ ಒಡ್ಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪಾಷಾ ಅವರು ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಹಾಗೂ ವಿಧಾನ ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರಿಗೂ ಪತ್ರ ಬರೆದಿದ್ದಾರೆ. ಚೆಕ್ ಬೌನ್ಸ್ ಕೇಸಿಗೆ ಸಂಬಂಧಿಸಿದಂತೆ ಹೈದರಾಬಾದ್ ನ್ಯಾಯಾಲಯ ಸೆ.5ರಂದು ಖಮರುಲ್ ವಿರುದ್ಧ ಬಂಧನದ ಆದೇಶ ಹೊರಡಿಸಿತ್ತು. ಸಯೀದ್ ಅಕ್ಬರ್ ಎನ್ನುವವರಿಗೆ ಖಮರುಲ್ ಕೊಟ್ಟಿದ್ದ 42 ಕೋಟಿ ರು.ಗಳ ಚೆಕ್ ಬೌನ್ಸ್ ಆಗಿತ್ತು.
ಈ ಬಗೆಗಿನ ವರದಿಯನ್ನು ಇನ್ ಕ್ವಿಲಾಬಿ ಇ ಡೆಕ್ಕನ್ ಪತ್ರಿಕೆ ಪ್ರಕಟಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಖಮರುಲ್ ಬೆಂಬಲಿಗರು ಪತ್ರಿಕೆಯನ್ನು ಸುಟ್ಟು ಹಾಕಿದ್ದಷ್ಟೇ ಅಲ್ಲದೆ ಸಂಪಾದಕರಿಗೆ ಬೆದರಿಕೆ ಪತ್ರಗಳನ್ನು ಬರೆದಿದ್ದಾರೆ. ''ಪರಿಸ್ಥಿತಿ ಹೀಗಾದರೆ ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ'' ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
(ಯುಎನ್ ಐ)












Click it and Unblock the Notifications