ಪ್ರಥಮ ಮಹಿಳಾ ಐಪಿಎಸ್ ಕಿರಣ್ ಬೇಡಿಗೆ 'ಬಸವಶ್ರೀ'
ಚಿತ್ರದುರ್ಗ, ಸೆ. 16 : ಬೃಹನ್ಮಠದದಿಂದ ನೀಡಲಾಗುವ ಪ್ರಸಕ್ತ ಸಾಲಿನ 'ಬಸವಶ್ರೀ' ಪ್ರಶಸ್ತಿಗೆ ನಿವೃತ್ತ ಪೊಲೀಸ್ ಅಧಿಕಾರಿ ಡಾ. ಕಿರಣ್ ಬೇಡಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 1 ಲಕ್ಷ ರುಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
'ಬಸವಶ್ರೀ' ಪ್ರಶಸ್ತಿಗೆ ಕಿರಣ್ ಬೇಡಿ ಅವರನ್ನು ಆಯ್ಕೆ ಮಾಡಿರುವ ವಿಷಯವನ್ನು ಸೋಮವಾರ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಕರ್ತವ್ಯನಿಷ್ಠೆ, ಸಾಮಾಜಿಕ ಬದ್ಧತೆ, ನಿಸ್ಪೃಹಸೇವೆ ಮತ್ತು ಸಮಾಜ ಸುಧಾರಣಾ ಕಾರ್ಯ ಚಟುವಟಿಕೆಗಳನ್ನು ಪ್ರಶಸ್ತಿಗಾಗಿ ಪರಿಗಣಿಸಲಾಯಿತು ಎಂದು ಅವರು ಹೇಳಿದರು.
ಅ. 3 ರಂದು ಇಲ್ಲಿನ ಹಳೆ ಮಾಧ್ಯಮಿಕ ಶಾಲೆಯ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. 1997ರಲ್ಲಿ ಸ್ಥಾಪಿಸಲಾಗಿರುವ ಪ್ರಶಸ್ತಿಯನ್ನು ಈವರೆಗೆ ಬೆಲ್ದಾಳ್ ಶರಣರು, ದಿ. ಹಿರೇಮಲ್ಲೂರು ಈಶ್ವರನ್, ಡಾ. ಎಚ್.ಸುದರ್ಶನ್, ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಬೌದ್ಧ ಗುರು ದಲೈಲಾಮಾ, ಕ್ರಾಂತಿಕವಿ ಗದ್ದರ್, ಡಾ. ವಂದನಾ ಶಿವ, ನೈಸರ್ಗಿಕ ಕೃಷಿ ಹರಿಕಾರ ಸುಭಾಷ್ ಪಾಳೇಕಾರ, ನಟಿ ಶಬನಾ ಅಜ್ಮಿ ಹಾಗೂ ಸ್ವಾಮಿ ಅಗ್ನಿವೇಶ್ ಪಡೆದುಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications