ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೋಮ್ ಬ್ರೌಸರ್ : ಮೂಷಿಕವಿಲ್ಲದ ಗಣೇಶ!

By Staff
|
Google Oneindia Kannada News

Chrome takes the fight to IEಸ್ಯಾನ್ ಫ್ರಾನ್ಸಿಸ್ಕೋ, ಸೆ. 4 : 'ಕ್ರೋಮ್' ಎಂಬ ಹೊಸ ಬ್ರೌಸರ್ ಅನ್ನು ಗೂಗಲ್ ಸೆಪ್ಟೆಂಬರ್ 2ರಂದು ಬಿಡುಗಡೆಮಾಡಿದೆ. ಈ ಬ್ರೌಸರ್ ಮೈಕ್ರೋಸಾಫ್ಟ್‌ನ ಇಂಟರ್ನೆಟ್ ಎಕ್ಸ್‌ಪ್ಲೋರರ್ ಸಾರ್ವಭೌಮತ್ವಕ್ಕೆ ಸಂಚಕಾರ ತರಲು ಸೆಡ್ಡುಹೊಡೆದು ನಿಂತಿದೆ. ಕ್ರೋಮ್‌ನ ಬೀಟಾ ಆವೃತ್ತಿ ಗೂಗಲ್ ಅಂತರ್ಜಾಲ ತಾಣದಲ್ಲಿ ಈಗಾಗಲೆ ಲಭ್ಯವಿದೆ. ಅಂತರ್ಜಾಲಿಗರು ಉಚಿತವಾಗಿ ಈ ಬ್ರೌಸರನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ವೆಬ್‌ಸೈಟ್, ಚಿತ್ರಗಳ ಹುಡುಕುವಿಕೆ, ವಿಡಿಯೋ ಸ್ಟ್ರೀಮಿಂಗ್, ಈಮೇಲ್, ಸೋಷಿಯಲ್ ನೆಟ್ವರ್ಕಿಂಗ್‌ನಲ್ಲಿ ಎಲ್ಲರನ್ನೂ ಸೈಡ್ ಹೊಡೆದಿರುವ ಗೂಗಲ್ ಬ್ರೌಸರ್ ಈಗ ಅಪ್ಲಿಕೇಶನ್‌ಗೂ ಕೈಹಾಕಿದೆ. ಈ ಬ್ರೌಸರ್ ಅಧಿಕೃತವಾಗಿ ಗೌರಿ ಹಬ್ಬ(ಸೆಪ್ಟೆಂಬರ್ 1, ಮಂಗಳವಾರ)ದಂದು ಬಿಡುಗಡೆಯಾದರೂ ಭಾರತೀಯರಿಗೆ ದಕ್ಕಿದ್ದು ಭಾದ್ರಪದ ಶುದ್ಧ ಚೌತಿಯ ಗಣೇಶ ಹಬ್ಬದಂದು. ಮೌಸ್ ಬಳಸದೆಯೂ ಬ್ರೌಸ್ ಮಾಡಬಹುದಾಗಿರುವುದರಿಂದ ಕ್ರೋಮ್ ಬ್ರೌಸರನ್ನು ಮೂಷಿಕವಿಲ್ಲದೆ ಬಂದ ಗಣೇಶ ಅಂತನೂ ಕರೆಯಬಹುದೆ?

ಅನಭಿಷಿಕ್ತ ದೊರೆಯಂತೆ ಆಳುತ್ತಿದ್ದ ಇಂಟರ್ನೆಟ್ ಎಕ್ಸ್‌ಪ್ಲೋರರ್ (ಐಇ) ಜನಪ್ರಿಯತೆ ಫೈರ್‌ಫಾಕ್ಸ್ ಬ್ರೌಸರ್ ಬಂದನಂತರ ನಿಧಾನವಾಗಿ ಕುಸಿಯುತ್ತಿದೆ. ಫೈರ್‌ಫಾಕ್ಸ್ ಬರುವ ಮೊದಲು ಶೇ.90ರಷ್ಟಿದ್ದ ಐಇ ಬಳಕೆ ಆಗಸ್ಟ್ 2008ರ ಹೊತ್ತಿಗೆ ಶೇ.73ಕ್ಕೆ ಬಂದು ಕುಳಿತಿದೆ. ಅದರ ಹಿಂದೆಯೇ ಫೈರ್‌ಫಾಕ್ಸ್ ಬಂದು ನಿಂತಿದೆ. ಅದರ ಬಳಕೆ ಶೇ. 20ರಷ್ಟಿದೆ. ಸಫಾರಿ ಮತ್ತು ಓಪೆರಾ ನಂತರದ ಸ್ಥಾನದಲ್ಲಿವೆ. ಕ್ರೋಮ್ ಸೇರಿದಂತೆ ಅನೇಕ ಬ್ರೌಸರ್‌ಗಳು ಡೌನ್‌ಲೋಡ್‌ಗೆ ಲಭ್ಯವಿವೆ.

ಅತಿ ಕಡಿಮೆ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಕ್ರೋಮ್ ಬ್ರೌಸರ್‌ನಲ್ಲಿ ಅಂತರ್ಜಾಲದಲ್ಲಿ ವೇಗವಾಗಿ ವಿಹರಿಸಬಹುದು ಮತ್ತು ಬ್ರೌಸಿಂಗ್ ಸರಳ ಮತ್ತು ಸುರಕ್ಷಿತವಾಗಿದೆ ಎಂದು ಗೂಗಲ್ ಹೇಳಿಕೊಂಡಿದೆ. ಸದ್ಯಕ್ಕೆ ಕ್ರೋಮ್ ಬ್ರೌಸರ್ ವಿಂಡೋಸ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಮ್ಯಾಕಿಂಟೋಶ್ ಮತ್ತು ಲೈನಕ್ಸ್ ಬಳಕೆದಾರರಿಗೂ ಶೀಘ್ರದಲ್ಲಿ ಲಭ್ಯವಾಗಲಿದೆ ಎಂದು ಗೂಗಲ್ ತಿಳಿಸಿದೆ. ಕ್ರೋಮ್‌ನ ವಿಶೇಷತೆಯೇನೆಂದರೆ, ಟ್ಯಾಬನ್ನು ಎಳೆದು ಹೊಸ ವಿಂಡೋ ಮಾಡಲು ಆಸ್ಪದವಿದ್ದು, ಒಂದು ಟ್ಯಾಬ್ ಕ್ರಾಶ್ ಆದರೂ ಬ್ರೌಸರ್ ಕುಸಿಯುವುದಿಲ್ಲ ಎನ್ನುವುದು ತಜ್ಞರ ಅಭಿಮತ.

ವಿಶ್ವದಾದ್ಯಂತ ಅಂತರ್ಜಾಲಿಗರು ಈ ಬ್ರೌಸರನ ವಿಶೇಷತೆ, ಅದರ ಆಕಾರ, ಉಪಯುಕ್ತತೆ, ಅದರಲ್ಲಿರುವ ಕೊಂಕು, ಅಂಕು-ಡೊಂಕುಗಳನ್ನೆಲ್ಲ ಅಳೆಯಲು ಪ್ರಾರಂಭಿಸಿದ್ದಾರೆ. ಕ್ರೋಮ್ ಅನ್ನು ಇಂಟರ್ನೆಟ್ ಎಕ್ಸ್‌ಪ್ಲೋರರ್‌ಗೆ ಬದಲಿಯಾಗಿ ಸ್ವೀಕರಿಸುತ್ತಾರೋ, ಅಥವಾ ಗಣೇಶನ ಹಬ್ಬದಂದೇ ದಕ್ಕಿದ ಬ್ರೌಸರನ್ನು ಗಣೇಶನಂತೆಯೇ ವಿಸರ್ಜನೆ ಮಾಡುತ್ತಾರೋ ಕಾಲವೇ ನಿರ್ಧರಿಸಲಿದೆ.

(ದಟ್ಸ್ ಕನ್ನಡ ವಾರ್ತೆ)

Google Chrome released on Ganesh Chaturthi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X