ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ 'ಅತಿ ಹೆಚ್ಚು ಭ್ರಷ್ಟಾಚಾರ' ಪೀಡಿತ ರಾಜ್ಯ

By Staff
|
Google Oneindia Kannada News

ನವದೆಹಲಿ, ಸೆ.1: ದೇಶದ ರಾಜಧಾನಿ ನವದೆಹಲಿ ಭ್ರಷ್ಟಾಚಾರದಲ್ಲಿ ಅಪಾಯದ ಮಟ್ಟ ತಲುಪಿದೆ ಎಂದು ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಷನಲ್ ಎಂಬ ಸಂಸ್ಥೆಯ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಭ್ರಷ್ಟಾಚಾರದಲ್ಲಿ ಯಾವ ರಾಜ್ಯಗಳು ಯಾವ ಸ್ಥಾನದಲ್ಲಿವೆ ಎಂಬುದನ್ನು ಸಮೀಕ್ಷೆ ಪಟ್ಟಿ ಮಾಡಿ ಕೊಟ್ಟಿದೆ.

ನವದೆಹಲಿಯ ಜೊತೆಗೆ ಜಮ್ಮು ಮತ್ತು ಕಾಶ್ಮೀರ, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳು ಭ್ರಷ್ಟಾಚಾರದಲ್ಲಿ 'ಅಪಾಯ ಮಟ್ಟ'ವನ್ನು ತಲುಪಿವೆ. ಕರ್ನಾಟಕ, ತಮಿಳುನಾಡು ಮತ್ತು ರಾಜಸ್ಥಾನ ರಾಜ್ಯಗಳನ್ನು 'ಅತಿ ಹೆಚ್ಚು ಭ್ರಷ್ಟಾಚಾರ' ಪೀಡಿತ ರಾಜ್ಯಗಳೆಂದು ಸಮೀಕ್ಷೆ ವರದಿ ಮಾಡಿದೆ. ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಷನ್ ಸಂಸ್ಥೆ 2005ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ 17ನೇ ಸ್ಥಾನದಲ್ಲಿತ್ತು. ಈಗಿನ ಸಮೀಕ್ಷೆಯಲ್ಲಿ ಮತ್ತ್ತಷ್ಟು ಮುಂದಿದೆ.

ಚತ್ತೀಸ್‌ಗಡ, ದೆಹಲಿ, ಗುಜರಾತ್, ಜಾರ್ಖಂಡ್, ಕೇರಳ ಹಾಗೂ ಒರಿಸ್ಸಾ ರಾಜ್ಯಗಳು 'ಹೆಚ್ಚು ಭ್ರಷ್ಟಾಚಾರ' ಪೀಡಿತ ಸ್ಥಾನದಲ್ಲಿವೆ.ಆಂಧ್ರಪ್ರದೇಶ, ಹರ್ಯಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಉತ್ತರಖಂಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಭ್ರಷ್ಟಾಚಾರ 'ಮಧ್ಯಮ ಪ್ರಮಾಣ'ದಲ್ಲಿ ತಾಂಡವವಾಡುತ್ತಿದೆ ಎಂದು ಸಮೀಕ್ಷೆ ದೃಢಪಡಿಸಿದೆ. ಸರ್ಕಾರಿ ವಲಯದಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆಯನ್ನು ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ಕೆಲಸವನ್ನು ಸಮೀಕ್ಷೆಯ ಭಾಗವಾಗಿ ಹಮ್ಮಿಕೊಳ್ಳಲಾಗಿತ್ತು.

ಬಡತನ ರೇಖೆಗಿಂತಲೂ ಕೆಳಗಿರುವ 22,728 ಮಂದಿಯನ್ನು ಬೆಂಗಳೂರು, ಬೀದರ್, ರಾಯಚೂರು ಮತ್ತು ಚಿತ್ರದುರ್ಗ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಯ್ಕೆ ಮಾಡಿಕೊಂಡು ಸಮೀಕ್ಷೆ ನಿರ್ವಹಿಸಲಾಗಿತ್ತು. ಎಲ್ಲ ರಾಜ್ಯಗಳಲ್ಲೂ ಪೊಲೀಸ್ ಇಲಾಖೆ ಭ್ರಷ್ಟಾಚಾರದಲ್ಲಿ ಮುಂದಿದ್ದು ನಂತರದ ಸ್ಥಾನಗಳಲ್ಲಿ ಅರಣ್ಯ ಇಲಾಖೆ, ಭೂ ದಾಖಲೆ/ನೋಂದಣಿ ಮತ್ತು ವಸತಿ ಇಲಾಖೆಗಳು ಇವೆ ಎಂಬ ಮಹತ್ವದ ಅಂಶ ಬೆಳಕು ಕಂಡಿದೆ.

ವಿದ್ಯುಚ್ಛಕ್ತಿ, ಬ್ಯಾಂಕಿಂಗ್, ಶಿಕ್ಷಣ, ನೀರು ಸರಬರಾಜು ಮತ್ತು ರಾಷ್ಟೀಯ ಉದ್ಯೋಗ ಖಾತರಿ ಯೋಜನೆಯಂತ ಸೇವೆಗಳು ಭ್ರಷ್ಟವಾಗಿವೆ ಎಂದು ಸಮೀಕ್ಷೆ ತಿಳಿಸಿದೆ. ಈ ಸರ್ಕಾರಿ ಸೇವೆಗಳನ್ನು ಪಡೆಯಲು ಬಡತನ ರೇಖೆಗಿಂತಲೂ ಕೆಳಗಿರುವರು 2007ನೇ ವರ್ಷದಲ್ಲಿ 883 ಕೋಟಿ ರು.ಗಳನ್ನು ಲಂಚವಾಗಿ ಕೊಟ್ಟಿದ್ದಾರೆ. ಪಡಿತರ ಚೀಟಿ ಪಡೆಯಲು, ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಇಷ್ಟು ಹಣ ಲಂಚದ ರೂಪದಲ್ಲಿ ಚಲಾವಣೆಯಾಗಿದೆ. ಪೊಲೀಸ್ ಇಲಾಖೆಯಂತೂ ಲಂಚಾವತಾರದಲ್ಲಿ ಅತೀ ಮುಂದಿದ್ದು 2007ರಲ್ಲಿ ಒಟ್ಟು 214.8 ಕೋಟಿ ರು.ಗಳನ್ನು ನುಂಗಿ ನೀರು ಕುಡಿದಿದೆ ಎಂದು ಬೆಚ್ಚಿ ಬೀಳಿಸುವ ಅಂಶಗಳನ್ನು ಸಮೀಕ್ಷೆಯ ವರದಿ ಮಾಡಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X