ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಲ್ಲಿಯಲ್ಲಿ ಸಾಕು ನಾಯಿಗಳಿಗೆ ಕಂಕಣಬಲ

By Staff
|
Google Oneindia Kannada News

ನವದೆಹಲಿ,ಆ.27: ಬೀದಿ ನಾಯಿಗಳಿಗೆ ಸಂಸಾರದ ಹಂಗಿಲ್ಲ. ಒಂದು ಕ್ಷಣ ಮಿಲನ ಮತ್ತೊಂದು ಕ್ಷಣ ವಿಚ್ಛೇದನವೇ ಅವುಗಳ ಬದುಕು. ಆದರೆ ಕೊರಳಿಗೆ ಪಟ್ಟಿ ಕಚ್ಚಿಸಿಕೊಂಡ ಸಾಕು ನಾಯಿಗಳ ಗತಿಯೇನು? ಅವುಗಳ ಪಾಡು, ಯಾತನೆ, ಪರಾವಲಂಬನೆ ನಾರಾಯಣನಿಗೇ ಪ್ರೀತಿ. ಅವುಗಳಿಗೆ ಸೂಕ್ತ ಸಂಗಾತಿ ಹುಡುಕುವ ಜವಾಬ್ದಾರಿಯನ್ನು ಯಜಮಾನನೇ ವಹಿಸಬೇಕಾಗುತ್ತದೆ. ಯಜಮಾನ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಅಂದರೆ ನಿಜಕ್ಕೂ ಅವುಗಳ ಪಾಡು ದುಸ್ತರ.

ಸಾಕುನಾಯಿಗಳ ಜೀವನ ಈ ರೀತಿ ಆಗದಿರಲಿ ಎಂದು ದೆಹಲಿಯ ನಾಗರೀಕರು ಆಶಿಸುತ್ತಿದ್ದಾರೆ. ಇಲ್ಲಿನ ಅನ್ಸಾಲ್ ಪ್ಲಾಜಾದಲ್ಲಿ ನಾಯಿಗಳಿಗೋಸ್ಕರ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದೇ ಸೆ.30ರಂದು 100ಕ್ಕೂ ಅಧಿಕ ಶ್ವಾನಗಳು ಶುಭ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಲಿವೆ. ಈ ಬೃಹತ್ ಶ್ವಾನಗಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಪ್ರಾಣಿ ಹಕ್ಕು ಪ್ರತಿಪಾದಕರು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಗಾತಿಯನ್ನು ಹುಡುಕಿಕೊಳ್ಳುವ ಆಯ್ಕೆ ಶ್ವಾನಗಳಿಗೆ ಇಲ್ಲ. ಏನಿದ್ದರೂ ತಮ್ಮ ಯಜಮಾನರು ಹುಡುಕಿದ ಸಂಗಾತಿಯನ್ನು ತೆಪ್ಪಗೆ ಬಾಲ ಅಲ್ಲಾಡಿಸುತ್ತಾ ಸ್ವೀಕರಿಸಬೇಕಷ್ಟೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ಶ್ವಾನಗಳ ಬೃಹತ್ ಸಾಮೂಹಿಕ ವಿವಾಹ ಕಾರ್ಯಕ್ರಮ ಇದಾಗಿದ್ದು ಶ್ವಾನ ಪ್ರಿಯರನ್ನು ಬಹಳಷ್ಟು ಆಕರ್ಷಿಸಿದೆ. "ಈ ರೀತಿಯ ಒಂದು ಕಾರ್ಯಕ್ರಮಕ್ಕಾಗಿ ಎದುರು ನೋಡುತ್ತಿದ್ದೆ. ನಾಯಿಗಳಿಗೂ ಒಂದು ಸಾಮಾಜಿಕ ಜೀವನ ಕಲ್ಪಿಸುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗುತ್ತಿದೆ" ಎನ್ನುತ್ತಾರೆ 14 ಶ್ವಾನಗಳ ಒಡೆಯರಾದ ವಿ.ಕೆ.ಗುಪ್ತಾ.ನನ್ನ ಗೆಳೆಯ ಮೂಲಕ ಈ ಸಾಮೂಹಿಕ ವಿವಾಹದ ವಿಷಯ ತಿಳಿಯಿತು.ಆದರೆ ನಾವು ಹುಡುಕಿದ ಬಾಳ ಸಂಗಾತಿಯನ್ನು ಶ್ವಾನಗಳು ಎಷ್ಟು ನೆಚ್ಚಿಕೊಳ್ಳುತ್ತವೆ ಎನ್ನುವುದು ಗೊತ್ತಿಲ್ಲ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ಇದೆಲ್ಲಾ ಮಾಲ್‌ಗಳ ಪ್ರಚಾರದ ಗಿಮಿಕ್ಕಾ ಎಂದು ಪ್ರಶ್ನಿಸಿದರೆ, "ಯಾವುದೇ ದಾಖಲೆಯನ್ನು ಮುರಿಯುವುದಕ್ಕಾಗಲಿ ಅಥವಾ ಪ್ರಚಾರ ಪಡೆಯಲು ಈ ಕಾರ್ಯಕ್ರಮವನ್ನು ಆಯೋಜಿಸಿಲ್ಲ. ನಮ್ಮ ಹಲವಾರು ಚಟುವಟಿಕೆಗಳ ಭಾಗವಾಗಿ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಿದ್ದೇವೆ ಅಷ್ಟೆ. ಪ್ರಾಣಿಗಳ ಬಗ್ಗೆ ಒಂದು ಸ್ನೇಹಪೂರ್ವಕ ಸಂದೇಶ ಬಿತ್ತರಿಸುವುದಷ್ಟೇ ನಮ್ಮ ಕೆಲಸ" ಎನ್ನುತ್ತಾರೆ ದೆಹಲಿಯ ಅನ್ಸಲ್ ಪ್ಲಾಜಾದ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಅಭಿಜಿತ್ ದಾಸ್.

ಮದುವೆಗೆ ಇದುವರೆಗೂ 70 ಶ್ವಾನಗಳ ಹೆಸರನ್ನು ನೋಂದಾಯಿಸಲಾಗಿದೆ. ನೋಂದಣಿಗೆ ಯಾವುದೇ ಶುಲ್ಕ ಭರಿಸಬೇಕಿಲ್ಲ ಇದು ಸಂಪೂರ್ಣ ಉಚಿತ. ಶ್ವಾನಗಳ ಮಾಲೀಕರು ತಮ್ಮ ನೆಚ್ಚಿನ ನಾಯಿಗಳ ಛಾಯಾಚಿತ್ರವನ್ನು ( ಜಾತಕ) ಕಳುಹಿಸಬೇಕು. ನಂತರ ಮಾಲೀಕರಿಗೆ ಇಷ್ಟವಾದ ನಾಯಿಯನ್ನು ಛಾಯಾಚಿತ್ರಗಳ ಮೂಲಕ ಆಯ್ಕೆ ಮಾಡಿಕೊಳ್ಳಬಹುದು. ಈಗಾಗಲೇ ತಮ್ಮ ನಾಯಿಗಳಿಗೆ ಸಂಗಾತಿ ಹುಡುಕಲು ಶ್ವಾನಪ್ರಿಯರು ಮುಗಿಬಿದ್ದಿದ್ದಾರೆ. ನಾಯಿಗಳ ಮದುವೆ ವಿಜೃಂಭಣೆಯಿಂದ ನೆರವೇರಲಿ. ಮೂಕ ಪ್ರಾಣಿಗಳ ದಾಂಪತ್ಯ ಜೀವನ ಹಸನಾಗಿರಲಿ. ಮನಸ್ತಾಪ, ವಿಚ್ಛೇದನದಂತಹ ಸಂಸಾರ ಹಾಳುಗೆಡಹುವ ವಿಷಕ್ಷಣಗಳು ಅವುಗಳ ಬಾಳಿನಲ್ಲಿ ಇಣುಕದಿರಲಿ !

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X