ಚಿರಂಜೀವಿ ಪಕ್ಷ ಉದ್ಘಾಟನೆ:ತಿರುಪತಿ ಸಜ್ಜು
ತಿರುಪತಿ, ಆ. 24 : ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಆ. 26ರಂದು ಅಧಿಕೃತವಾಗಿ ತಮ್ಮ ನೂತನ ಪಕ್ಷದ ಘೋಷಣೆಯ ಜತೆಗೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ತಿರುಪತಿ ನಗರ ನವನಧುವಿನಂತೆ ಕಂಗೊಳಿಸತೊಡಗಿದೆ. ಚಿರೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ನೂತನ ಪಕ್ಷವನ್ನು ಭವ್ಯವಾಗಿ ಸ್ವಾಗತಿಸುವ ಸಲುವಾಗಿ ಚಿರಂಜೀವಿಯವರ ದೊಡ್ಡ ದೊಡ್ಡ ಕಟೌಟ್ ಗಳನ್ನು ನಿಲ್ಲಿಸಿದ್ದಾರೆ. ನಗರದಾದ್ಯಂತ ತಳಿರು ತೋರಣದಿಂದ ಶೃಂಗಾರಗೊಳಿಸಿದ್ದಾರೆ.
ಚಿರಂಜೀವಿ ಅಳಿಯ ಅಲ್ಲು ಅರ್ಜುನ್ ಸಮಾರಂಭದ ಹೊಣೆ ಹೊತ್ತಿದ್ದು. ಕಾರ್ಯಕ್ರಮಕ್ಕೆ ಬೇಕಿರುವ ಎಲ್ಲ ಸಿದ್ಧತೆಯಲ್ಲಿ ಅವರು ತೊಡಗಿದ್ದಾರೆ. ಟಿಡಿಪಿ ಪಕ್ಷದಿಂದ ಅಮಾನತುಗೊಂಡಿರುವ ಮಾಜಿ ಶಾಸಕ ಎನ್.ವಿ.ಪ್ರಸಾದ್ ಕಾರ್ಯಕ್ರಮದ ಉತ್ಸುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. 500 ಅಡಿ ಉದ್ದ ಹಾಗೂ 15 ಅಡಿ ಎತ್ತರದ ಭವ್ಯವಾದ ವೇದಿಕೆಯನ್ನು ನಿರ್ಮಿಸಲಾಗಿದೆ. ವಿಶ್ವದ ಅನೇಕ ಕಡೆಗೆ ನೆಲೆಸಿರುವ ಚಿರೂ ಅಭಿಮಾನಿಗಳು ಕಾರ್ಯಕ್ರಮಕ್ಕೆ ಹಾಜರಾಗಲಿದ್ದು, ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಅತ್ಯಧಿಕ ಅಭಿಮಾನಿಗಳನ್ನು ಹೊಂದಿರುವ ಚಿರಂಜೀವಿ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರ ಆಗಮಿಸುವ ನಿರೀಕ್ಷೆ ಇರುವುದರಿಂದ ತಿರುಪತಿಗೆ ಹೆಚ್ಚುವರಿ 18 ರೈಲುಗಳನ್ನು ಓಡಿಸಲಾಗುತ್ತಿದೆ. ತೆಲುಗು ರಾಜ್ಯ ಸಾರಿಗೆ ಇಲಾಖೆ ನೂರಾರು ಬಸ್ಸುಗಳು ತಿರುಪತಿಗೆ ಸಂಚರಿಸಲಿವೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆ. 26ರಂದು ತಿರುಪತಿಗೆ ಚಲಿಸುವ ಎಲ್ಲ ರೈಲುಗಳ ಟಿಕೆಟ್ ಈಗಾಗಲೇ ಬುಕ್ ಆಗಿವೆ. ಖಾಸಗಿ ವಿಮಾನ ಸಂಸ್ಥೆಗಳಾದ ಕಿಂಗ್ ಫಿಷರ್ ಹಾಗೂ ಏರ್ ಡೆಕ್ಕನ್ ವಿಮಾನಗಳ ಟಿಕೆಟ್ ಮಾರಾಟವಾಗಿವೆ ಎನ್ನಲಾಗಿದೆ. 3 ಸಾವಿರ ಪೊಲೀಸರನ್ನು ನಿಯೋಜಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ನಟ ಚಿರಂಜೀವಿಗೆ 20ಕ್ಕೂ ಹೆಚ್ಚು ಜನ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications