ಉತ್ತರ ಕರ್ನಾಟಕವನ್ನು ನಡುಗಿಸಿದ ಹುಸಿ ಭೂಕಂಪ
ಗುಲ್ಬರ್ಗ,ಆ.22: ಇಷ್ಟು ದಿನ ಹುಸಿ ಬಾಂಬ್ ಕರೆಗಳನ್ನು ಮಾಡಿ ಸಾರ್ವಜನಿಕರಲ್ಲಿ ಜೀವ ಭಯ ಉಂಟು ಮಾಡುತ್ತಿದ್ದ ಕಿಡಿಗೇಡಿಗಳು ಈಗ ಭೂಕಂಪವನ್ನು ಆಯ್ಕೆ ಮಾಡಿಕೊಂಡು ಜನರಲ್ಲಿ ಆತಂಕ ಹುಟ್ಟಿಸುತ್ತಿದ್ದಾರೆ.
''ಭೂಕಂಪ ಸಂಭವಿಸಲಿದೆ ,ಯಾವುದಕ್ಕೂ ಎಚ್ಚರವಾಗಿರಿ''ಎಂಬ ಸಂದೇಶವನ್ನು ಮೊಬೈಲ್ ಫೋನ್‌ಗಳ ಮೂಲಕ ಕಳುಹಿಸಿ ಕರ್ನಾಟಕ ಮತ್ತು ಹೈದರಾಬಾದ್‌ನ ಒಟ್ಟು 5 ಜಿಲ್ಲೆಗಳ ಜನರ ನಿದ್ದೆ,ನೆಮ್ಮದಿ ಎಲ್ಲವನ್ನೂ ಕೆಡಿಸಿದ್ದಾರೆ.ಮೊಬೈಲ್‌ಗಳಲ್ಲಿ ಈ ಸಂದೇಶ ಬಿತ್ತರವಾಗುತ್ತಿದ್ದಂತೆ ಗುಲ್ಬರ್ಗ,ರಾಯಚೂರು,ಬೀದರ್,ಕೊಪ್ಪಳ ಮತ್ತು ಬಿಜಾಪುರದ ನಾಗರಿಕರು ಮನೆಗಳಿಂದ ಹೊರ ಕ್ಕೆ ಓಡಿ ಬಂದು ಮೂರು ಗಂಟೆಗೂ ಅಧಿಕ ಕಾಲ ತಮ್ಮ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಹೊರಗೇ ಕಳೆದರು. ಯಾವಾಗ ಏನು ಸಂಭವಿಸುತ್ತದೋ ಎಂದು ಅನ್ನ,ನೀರು ಬಿಟ್ಟು ವನವಾಸ ಅನುಭವಿಸಿದರು.
ಭೂಕಂಪದ ಬಗ್ಗೆ ನಮಗೆಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಉಪ ಪೊಲೀಸ್ ಆಯುಕ್ತ ಕೆ.ಎಸ್.ಸತ್ಯನಾರಾಯಣ ಮತ್ತು ಪೊಲೀಸ್ ಸೂಪರಿಂಟೆಂಡೆಂಟ್ ದೇವಜ್ಯೋತಿ ರೆ ತಿಳಿಸಿದ್ದಾರೆ. ಕೆಲವು ಕಿಡಿಗೇಡಿಗಳು ಹೀಗೆ ವದಂತಿಗಳನ್ನು ಹಬ್ಬಿಸಿ ಜನರನ್ನು ಭಯಭೀತಗೊಳಿಸಿದ್ದಾರೆ. ಇಂತಹ ಯಾವುದೇ ವದಂತಿಗಳಿಗೆ ಕಿವಿಗೊಡ ಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ರೀತಿ ತಪ್ಪು ಸಂದೇಶಗಳನ್ನು ಕಳುಹಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಭೂಕಂಪದ ಬಗ್ಗೆ ಅಧಿಕೃತ ಮಾಹಿತಿ ಸಂಗ್ರಹಿಸಲು ಜಿಲ್ಲಾ ಮಟ್ಟದಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications