ಸಹಜ ಸ್ಥಿತಿಯತ್ತ ಜಮ್ಮು : ನಿಷೇಧಾಜ್ಞೆ ಹಿಂದಕ್ಕೆ
ಜಮ್ಮ, ಆ. 22 : ಅಮರನಾಥ ಭೂವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳಿನಿಂದ ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಹಿಂಸಾಚಾರ ಕಡಿಮೆಯಾಗಿ ನಿಧಾನವಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಗುರುವಾರ ಭಾಗಶಃ ಹತೋಟಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ 17 ಗಂಟೆಗಳ ಕಾಲ ನಿಷೇಧಾಜ್ಞೆಯನ್ನು ಹಿಂದಕ್ಕೆ ಪಡೆಯಲಾಗಿದೆ.
ಅಮರನಾಥ್ ಸಂಘರ್ಷ ಸಮಿತಿ ಹಾಗೂ ಕಾಶ್ಮೀರ ಪ್ರತ್ಯೇಕತಾವಾದಿಗಳು ಪರ ಹಾಗೂ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ಅಗಸ್ಟ್ ಒಂದರಿಂದ ಜಮ್ಮು ಸೇರಿದಂತೆ ಮತ್ತಿತರರ ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು. ಅನೇಕ ಕಸರತ್ತು ನಡೆಸಿರುವ ಪೊಲೀಸರು ಹದಗೆಟ್ಟಿದ್ದ ವಾತಾವರಣವನ್ನು ಸಹಜಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಜನಸಾಮಾನ್ಯರ ಜೀವನ ಎಂದಿನಂತೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಸಾರ್ವಜನಿಕರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿಕೊಂಡಿರುವ ಪೊಲೀಸರು, ಸಾಮರಸ್ಯ ಕದಡುವಂಥ ಕೆಲಸ ಮಾಡುವವರಿಗೆ ತಕ್ಕ ಶಾಸ್ತಿ ನೀಡುವುದಾಗಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಗುರುವಾರ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ಈ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ಸಾಮಾನ್ಯರಲ್ಲಿ ಶಾಂತಿ ಕಾಪಾಡುವಂತೆ ಅನೇಕ ಸಲ ಮನವಿ ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ. ಅಮರನಾಥ ದೇವಾಲಯಕ್ಕೆ ನೀಡಿದ್ದ 100 ಎಕರೆ ಭೂಮಿಯನ್ನು ಸರ್ಕಾರ ಹಿಂದಕ್ಕೆ ಪಡೆದಿತ್ತು. ಸರ್ಕಾರ ದ್ವಂದ್ವ ನಿಲುವು ಖಂಡಿಸಿ ಹಿಂದುಪರ ಸಂಘಟನೆಗಳು ಉಗ್ರ ಪ್ರತಿಭಟನೆ ನಡೆಸಿ ಸರ್ಕಾರದ ಧೋರಣೆಯನ್ನು ಖಂಡಿಸಿದ್ದರು. ಇನ್ನೊಂದಡೆ ಸರ್ಕಾರಿ ಭೂಮಿಯನ್ನು ದೇವಾಲಯಕ್ಕೆ ನೀಡಿರುವ ಕ್ರಮವನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಹಾಗೂ ಕಾಶ್ಮೀರಿ ಪ್ರತ್ಯೇಕತಾವಾದಿಗಳು ಚಳವಳಿ ಹಮ್ಮಿಕೊಂಡಿದ್ದರು. ಪ್ರತಿಭಟನೆ ಹಾಗೂ ಚಳವಳಿಗಳು ಹಿಂಸಾರೂಪಕ್ಕೆ ತಿರುಗಿದ್ದವು.
(ದಟ್ಸ್ ಕನ್ನಡ ವಾರ್ತೆ)
ಶ್ರೀನಗರ-ಮುಜಫರಬಾದ್ ಬಸ್ ಸಂಚಾರ ಆರಂಭ
ಅಮರನಾಥ ವಿವಾದ ಮುಕ್ತಿಗೆ ಭದ್ರತಾ ಸಲಹೆಗಾರ ಭೇಟಿ












Click it and Unblock the Notifications