ಜು.22ರಂದು ಯುಪಿಎ ವಿಶ್ವಾಸಮತ ಸಾಬೀತು
ನವದೆಹಲಿ, ಜು. 11 : ಲೋಕಸಭೆಯಲ್ಲಿ ಜು. 22 ರಂದು ವಿಶ್ವಾಸಮತವನ್ನು ಪ್ರದರ್ಶಿಸುವುದಾಗಿ ಯುಪಿಎ ಪ್ರಕಟಿಸಿದೆ. ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ನೇತೃತ್ವದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಮುಖಂಡರ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಜು. 21 ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದ್ದು, ಜು. 22 ರಂದು ವಿಶ್ವಾಸಮತವನ್ನು ಪ್ರದರ್ಶಿಸುವುದಾಗಿ ಕಾಂಗ್ರೆಸ್ ತಿಳಿಸಿದೆ. ಎಐಸಿಸಿ ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಿದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ವಿಶ್ವಾಸಮತ ಪ್ರದರ್ಶಿಸುವ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು. ಲೋಕಸಭೆಯಲ್ಲಿ ವಿಶ್ವಾಸಮತ ಗಳಿಸಿದ ನಂತರವಷ್ಟೇ ಪರಮಾಣು ಒಪ್ಪಂದ ಕುರಿತ ಮುಂದಿನ ಕಾರ್ಯಗಳಿಗೆ ಹೆಜ್ಜೆ ಇಡುವ ನಿರ್ಧಾರವನ್ನು ಕೈಗೊಳ್ಳಲಾಯಿತು.
ಲೋಕಸಭೆಯಲ್ಲಿ ಸಂಖ್ಯೆಗಳ ಬಲಾಬಲ ಪ್ರದರ್ಶನ ಮಾಡುವುದು ನಮ್ಮ ಮುಂದಿರುವ ಬಹುದೊಡ್ಡ ಸವಾಲು. ಮ್ಯಾಜಿಕ್ ಸಂಖ್ಯೆ ಕೂಡಿಸುವಲ್ಲಿ ನಾಯಕರು ಭಾರಿ ಲೆಕ್ಕಾಚಾರದ ಮೂಲಕ ಗಹನ ಚರ್ಚೆಯಲ್ಲಿ ಮಗ್ನರಾಗಿದ್ದರು. ಪ್ರಥಮ ಬಾರಿಗೆ ಮೌನ ಮುರಿದು ಮಾತನಾಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅಣು ಒಪ್ಪಂದ ಕುರಿತು ಪ್ರಧಾನಮಂತ್ರಿ ತಳೆದಿರುವ ನಿಲುವಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಅಣುಒಪ್ಪಂದ ಕುರಿತು ಸೋನಿಯಾ ಗಾಂಧಿ ದೇಶದಲ್ಲಿ ಅನೇಕ ಬೆಳವಣಿಗೆಗಳು ನಡೆದರೂ ತುಟಿಬಿಚ್ಚಿರಲಿಲ್ಲ.
ಅಣುಒಪ್ಪಂದ ವಿರೋಧಿಸಿ ಬೆಂಬಲ ಹಿಂತೆಗೆದುಕೊಂಡಿರುವ ಎಡಪಕ್ಷಗಳ ಸ್ಥಾನದಲ್ಲಿ ಸಮಾಜವಾದಿ ಪಕ್ಷ ಕುಳಿತಿದೆ. ಇದೀಗ ಸಮಾಜವಾದಿ ಪಕ್ಷ ಯುಪಿಎ ಸರ್ಕಾರದ ಮಿತ್ರಪಕ್ಷವಾಗಿದೆ ಎಂದು ಅವರು ಹೇಳಿದರು. ವಿಶ್ವಾಸಮತದ ಪರೀಕ್ಷೆಯಲ್ಲಿ ಯುಪಿಎ ಪಾಸಾಗಲಿದೆ ಎಂದು ಸೋನಿಯಾ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ವಿಶ್ವಾಸಮತ ಯಾಚನೆಗೆ ಸಿದ್ಧ ಮನಮೋಹನ್ ಸಿಂಗ್
ಅಣು ಒಪ್ಪಂದ ದೇಶ ದ್ರೋಹದ ಕೆಲಸ: ಕಾರಟ್












Click it and Unblock the Notifications