ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗಜ್ಯೋತಿ ಬಸವಣ್ಣನ ಮೂಲ ಯಾವುದು?

By Staff
|
Google Oneindia Kannada News

Basavannaಧಾರವಾಡ, ಜು. 11 : ಹನ್ನೆರಡನೆ ಶತಮಾನದ ದಾರ್ಶನಿಕ ಜಗಜ್ಯೋತಿ ಬಸವಣ್ಣನ ಮೂಲ ಯಾವುದು? ಮಹಾಮಹಿಮರ ಮೂಲ ಕೆದಕಿ ನೋಡುವ ಚಾಳಿಗೆ ಈಗ ಮತ್ತೆ ಚಾಲ್ತಿಗೆ ಬಂದಿದೆ. ಬಸವಣ್ಣನ ಜಾತಿಯ ಬಗ್ಗೆ ಇತ್ತೀಚೆಗೆ ಹೊಸ ಹೊಸ ವಿವಾದಗಳು ಹುಟ್ಟಿಕೊಂಡು ಮತ್ತೆ ಮತ್ತೆ ಸಾರ್ವಜನಿಕ ಚರ್ಚೆಗೆ ಕಾರಣವಾಗತೊಡಗಿವೆ. ಕಳೆದ ವರ್ಷ ಬಸವಣ್ಣ ಮೂಲ ಜಾತಿ ಬಗ್ಗೆ ಡಾ. ಬಂಜಗೆರೆ ಜಯಪ್ರಕಾಶ್ ಅವರ ಬರೆದ 'ಆನುದೇವಾ ಹೊರಗಣವನು' ಕೃತಿ ಸಾಕಷ್ಟು ವಿವಾದ ಹುಟ್ಟುಹಾಕಿ ಚರ್ಚೆ, ಪ್ರತಿಭಟನೆ, ಪರ ವಿರೋಧಗಳು ಕೇಳಿ ಬಂದಿದ್ದವು.

ಈ ವಿವಾದ ಮಾಸಿಹೋಯಿತು ಎಂದು ಭಾವಿಸುತ್ತಿರುವಾಗಲೇ ಬಸವಣ್ಣನ ಕುರಿತಾದ ಮತ್ತೊಂದು ಜಿಜ್ಞಾಸೆ ಬೆಳಕಿಗೆ ಬಂದಿದೆ. ಬಂಜಗೆರೆ ಅವರ ವ್ಯಾಖ್ಯಾನವನ್ನು ತಿರುವು ಮುರುವು ಮಾಡುವಂತಹ ಶಾಸನವನ್ನು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಬನ್ನೂರು ಎಂಬ ಗ್ರಾಮದಲ್ಲಿ ಕರ್ನಾಟಕ ವಿವಿಯ ಪಿಎಚ್ ಡಿ ವಿದ್ಯಾರ್ಥಿ ಪಿ.ಕೆ.ಕರಭಾರಿ ಪತ್ತೆ ಹಚ್ಚಿದ್ದಾರೆ.

ಈವರೆಗಿನ ದಾಖಲೆ ಪ್ರಕಾರ ಬಸವಣ್ಣನ ತಂದೆಯ ಹೆಸರು ಮಾದರಸ ಎಂಬುದಾಗಿದೆ. ಆದರೆ, ರಾಮದುರ್ಗ ತಾಲ್ಲೂಕಿನಲ್ಲಿ ದೊರತ ಈ ಶಾಸನದಲ್ಲಿ ಬಸವಣ್ಣನ ತಂದೆಯ ಹೆಸರು ರುದ್ರಭಟ್ಟ ಎಂದು ಇದೆ. ಬಸವಣ್ಣ ಹೆಸರು ಬಸವಣ್ಣ ಭಟ್ಟನಂದೂ ಉಲ್ಲೇಖಿಸಲಾಗಿದೆ. ಈ ಮೂಲಕ ಬಸವಣ್ಣನ ಮೂಲ ಜಾತಿ ಬ್ರಾಹ್ಮಣ ಎಂದು ಸಂಶೋಧಕ ವಿದ್ಯಾರ್ಥಿ ಪಿ.ಕೆ.ಕರಭಾರಿ ಪ್ರತಿಪಾದಿಸುತ್ತಿದ್ದಾರೆ.

ಶಾಸನದಲ್ಲೇನಿದೆ : ಬೆಳಗಾವಿ ಜಿಲ್ಲೆಯ ಬನ್ನೂರಿನಲ್ಲಿ ದೊರೆತಿರುವ ಈ ಶಾಸನ ಕ್ರಿ.ಶ 1179-1180 ರ ಕಾಲದ್ದಾಗಿದೆ. ಈ ಪ್ರದೇಶವನ್ನು ಆಳುತ್ತಿದ್ದ ಸೂರಯ್ಯ ನಾಯಕ ಎಂಬುವವನು ದೇವರಿಗಾಗಿ ಭೂಮಿಯನ್ನು ದತ್ತಿ ನೀಡಿದ್ದಕ್ಕಾಗಿ ಶಾಸನದಲ್ಲಿ "ಇಂಗಳೇಶ್ವರ ಬಾಗವಾಡಿಯ ಕಾಶ್ಯಪ ಗೋತ್ರದ ರುದ್ರಭಟ್ಟರಂಗಳ ಪುತ್ರಂ ಬಸವಣ್ಣಭಟ್ಟರ ವರಪುತ್ರನ ಕಾಲಂ ತೊಳೆದಾರ ಪೂರ್ವಕಂ ಮಾಡಿ ಬಿಟ್ಟ ಭೂಮಿ" ಎಂಬ ಉಲ್ಲೇಖವಿದೆ. ಅಂದರೆ ಇಂಗಳೇಶ್ವರ ಬಾಗವಾಡಿಯ ಕಾಶ್ಯಪ ಗೋತ್ರದ ರುದ್ರಭಟ್ಟನ ಪುತ್ರ ಬಸವಣ್ಣ ಭಟ್ಟ ಪಾದ ತೊಳೆದು ದತ್ತಿ ನೀಡಲಾಯಿತು ಎನ್ನುವುದು ಇದರ ಅರ್ಥ.

ಈ ಬಗ್ಗೆ ಸಮಗ್ರ ಚರ್ಚೆಯಾಗಲಿ ಎಂದು ಪಿ.ಕೆ.ಕರಭಾರಿ ಅವರ ಮಾರ್ಗದರ್ಶಕ ಕರ್ನಾಟಕ ವಿವಿಯ ಪ್ರಾಧ್ಯಾಪಕ ಪ್ರೊ. ಆರ್.ಎಂ.ಷಡಕ್ಷರಯ್ಯ ಹೇಳಿದ್ದಾರೆ. ಬಸವಣ್ಣ ಮೂಲ ಕುರಿತು ಡಾ. ಬಂಜಗೆರೆ ಪ್ರಕಾಶ್ ಬರೆದಿದ್ದ 'ಆನುದೇವಾ ಹೊರಗಣವನು 'ಕೃತಿ ರಾಜ್ಯಾದ್ಯಂತ ಸಾಕಷ್ಟು ವಿವಾದವನ್ನು ಹುಟ್ಟಿಹಾಕಿತ್ತು. ಬಸವಣ್ಣ ಹಿಂದುಳಿದ ಜಾತಿಗೆ ಸೇರಿದವರು ಎಂದು ಕೃತಿಯ ಸಮರ್ಥನೆಯಾಗಿತ್ತು. ಇದನ್ನು ವಿರೋಧಿಸಿ ಅನೇಕ ವೀರಶೈವ ಸಂಘಟನೆಗಳು ಮತ್ತು ಜಗದ್ಗುರುಗಳು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X