ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸಿಗರಿಗೆ ಕಾದಿದೆ ತಕ್ಕ ಶಾಸ್ತಿ: ಕಾಂಗ್ರೆಸ್

By Staff
|
Google Oneindia Kannada News

ಬೆಂಗಳೂರು, ಜು. 10 : ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಲು ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಜನಜಾಗೃತಿ ಸಭೆ ನಡೆಸುವುದು. ಶತಾಯ ಗತಾಯ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಏಕೈಕ ಗುರಿ ಹಾಗೂ ಭಾರತೀಯ ಜನತಾಪಕ್ಷ ಕುದುರೆ ವ್ಯಾಪಾರಕ್ಕೆ ಇಳಿದಿದ್ದು ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವುದು. ಇದು ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ನಾಯಕರು ತಗೆದುಕೊಂಡ ಒಕ್ಕೊರಲಿನ ನಿರ್ಧಾರಗಳು.

ಈ ಕುರಿತು ಕೆಪಿಸಿಸಿ ಅಧ್ಯಕ್ಷ ಹಾಗೂ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಸಿದರು. ಗುರುವಾರ ನಡೆದ ಶಾಸಕಾಂಗ ಸಭೆಯಲ್ಲಿ ಈ ಮಾತು ಎಲ್ಲ ಮುಖಂಡರ ಮತ್ತು ಶಾಸಕರಿಂದ ಒಕ್ಕೊರಲ ಧ್ವನಿಯಾಗಿ ಕೇಳಿ ಬಂದಿತು. ಆಡಳಿತಾರೂಢ ಬಿಜೆಪಿಗೆ ಕಾಂಗ್ರೆಸ್ ನಿಂದ ಶಾಸಕರು ರಾಜೀನಾಮೆ ನೀಡುತ್ತಿರುವದರ ಕಾರಣ ತಿಳಿಯುವುದು ಹಾಗೂ ಶಾಸಕರ ಭಾವನೆಗಳಿಗೆ ಕಿವಿಯಾಗುವ ಸಲವಾಗಿ ಸಭೆ ಕರೆಯಲಾಗಿತ್ತು. ಆದರೆ ಈ ಸಭೆಯಲ್ಲಿ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಬಿಟ್ಟರೇ ಮತ್ತೇನೂ ಸಾಧ್ಯವಾಗಲಿಲ್ಲ.

ಶಾಸಕಾಂಗ ಸಭೆ ಮಹತ್ವದ್ದು ಎಂದು ಪರಿಗಣಿಸಲಾಗಿತ್ತಾದರೂ, ಶಾಸಕರ ಸಂಖ್ಯೆ ಗಮನಾರ್ಹವಾಗಿ ಕಡಿಮೆ ಪ್ರಮಾಣದಲ್ಲಿತ್ತು. ಕಾಂಗ್ರೆಸ್ ನಲ್ಲಿ ಸದ್ಯ 78 ಮಂದಿ ಶಾಸಕರಿದ್ದಾರೆ. ಅದರಲ್ಲಿ 39 ಜನ ಶಾಸಕರು ಮತ್ತು 14 ಮಂದಿ ವಿಧಾನ ಪರಿಷತ್ ಸದಸ್ಯರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದರು. ಉಳಿದ ಶಾಸಕರು ವಿವಿಧ ಕಾರಣಗಳನ್ನು ನೀಡಿ ಸಭೆಗೆ ಗೈರು ಹಾಜರಾಗಿದ್ದಾರೆ. ಇದು ಕೂಡಾ ಸಾಕಷ್ಟು ಅನುಮಾನ ಮತ್ತು ಕುತೂಹಲಕ್ಕೆ ಎಡೆಮಾಡಿಕೊಟ್ಟಿತು.

ತಂಡತಂಡವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಶಾಸಕರು ಬಿಜೆಪಿಗೆ ವಲಸೆ ಹೋಗುತ್ತಿರುವುದು ಉಭಯ ಪಕ್ಷಗಳ ನಾಯಕರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಶಾಸಕರು ಪಕ್ಷ ತೊರೆಯುವುದನ್ನು ನಿಯಂತ್ರಿಸಲು ಈ ಸಭೆಯಲ್ಲಿ ಗಂಭೀರ ಚಿಂತನೆ ನಡೆಸಲಾಯಿತು. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಬೇಕು ಎನ್ನುವ ಸಲಹೆ ಶಾಸಕರಿಂದ ವ್ಯಕ್ತವಾಯಿತು.

ತುರುವೇಕೆರೆ ಶಾಸಕ ಜಗ್ಗೇಶ್ ಪಕ್ಷ ತೊರೆಯುವ ವಿಷಯ ತಿಳಿದ ಕೂಡಲೇ ಖರ್ಗೆ ಶಾಸಕಾಂಗ ಸಭೆ ಕರೆಯಲು ಅಣಿಯಾದರು. ಜು. 15 ಕ್ಕೆ ಶಾಸಕಾಂಗ ಸಭೆ ಕರೆಯುವ ಎಂದು ಲೆಕ್ಕಾಚಾರದಲ್ಲಿದ್ದ ಖರ್ಗೆಗೆ ಶಾಸಕ ವಲಸೆ ದೃಷ್ಟಿಯಿಂದ ಗುರುವಾರವೇ ಸಭೆ ಕರೆದು ಅವರ ಅನಿಸಿಕೆ ಅಭಿಪ್ರಾಯವನ್ನು ಸಂಗ್ರಹಿಸಿದರು.ಬಿಜೆಪಿ ಸೇರ್ಪಡೆಯ ಸುದ್ದಿಯಲ್ಲಿರುವ ವಿ.ಸೋಮಣ್ಣ, ಬಿ.ಸಿ.ಪಾಟೀಲ್, ಸಿದ್ದರಾಮಯ್ಯ ಅವರ ಬೆಂಬಲಿಗರು ಯಾರು ಕೂಡಾ ಸಭೆಯಲ್ಲಿ ಕಾಣಿಸಲಿಲ್ಲ.ಪ್ರಸ್ತುತ ಸಿದ್ದರಾಮಯ್ಯ ವಿದೇಶ ಪ್ರವಾಸದಲ್ಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X