ರಾಷ್ಟ್ರಪತಿ ಕೈ ಸೇರಿದ ಬೆಂಬಲ ವಾಪಸ್ಸು ಪತ್ರ
ನವದೆಹಲಿ, ಜು.9: ನಾಲ್ಕು ಎಡ ಪಕ್ಷಗಳಾದ ಸಿಪಿಐ, ಸಿಪಿಐಎಂ, ಫಾರ್ವರ್ಡ್ ಬ್ಲಾಕ್ ಹಾಗೂ ಆರ್‌ಎಸ್‌ಪಿ ಪಕ್ಷಗಳು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಬುಧವಾರ ಮಧ್ಯಾಹ್ನ ಭೇಟಿ ಮಾಡಿ ಕೇಂದ್ರ ಸರ್ಕಾರಕ್ಕೆ ಕೊಟ್ಟ ಬೆಂಬಲ ವಾಪಸ್ಸು ಪತ್ರಗಳನ್ನು ಸಲ್ಲಿಸಿದರು. ಈ ವಿಷಯವನ್ನು ಸಿಪಿಐಎಂ ನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಪತ್ರಿಕಾಗೋಷ್ಠಿಯಲ್ಲಿ ಇಂದು ದೃಢಪಡಿಸಿದರು.
ಪ್ರಧಾನಿ ಮನಮೋಹನ್ ಸಿಂಗ್ ಅವರು ಜಿ-8 ಶೃಂಗಸಭೆಯಿಂದ ಹಿಂತಿರುಗಿದ ನಂತರ ಶೀಘ್ರವಾಗಿ ಲೋಕಸಭೆ ಸಮಾವೇಶವನ್ನು ಆಯೋಜಿಸಿ ವಿಶ್ವಾಮತ ಯಾಚಿಸಬೇಕು ಎಂದು ರಾಷ್ಟ್ರಪತಿಗೆ ಸಲ್ಲಿಸುವ ಮತ್ತೊಂದು ಪತ್ರದಲ್ಲಿ ಎಡಪಕ್ಷಗಳು ಕೋರಿವೆ. ಎಡ ಪಕ್ಷಗಳ 59 ಮಂದಿ ಸದಸ್ಯರು ಸಹಿ ಹಾಕಿರುವ ಬೆಂಬಲ ವಾಪಸ್ಸು ಪತ್ರ ಹಾಗೂ ಲೋಕಸಭೆಯಲ್ಲಿ ಯುಪಿಎ ಸರ್ಕಾರ ವಿಶ್ವಾಸಮತ ಯಾಚಿಸಬೇಕು ಎಂಬ ಮತ್ತೊಂದು ಪತ್ರವನ್ನು ರಾಷ್ಟ್ರಪತಿಗೆ ಸಲ್ಲಿಸಿದರು.
ಕೇಂದ್ರದ ಯುಪಿಎ ಸರ್ಕಾರ ಭಾರತ-ಅಮೆರಿಕಾ ಅಣು ಒಪ್ಪಂದದ ಬಗ್ಗೆ ಇಬ್ಬಗೆ ನೀತಿಯನ್ನು ಅನುಸರಿಸುತ್ತಿದ್ದು ಒಂದೆಡೆ ಎಡಪಕ್ಷಗಳೊಂದಿಗೆ ಚರ್ಚಿಸುತ್ತಿಲ್ಲ ಮತ್ತೊಂದೆಡೆ ಅಣು ಒಪ್ಪಂದಕ್ಕ್ಕೆ ಸಹಿ ಹಾಕುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಜಪಾನ್‌ನಲ್ಲಿ ಪ್ರಕಟಿಸಿದ್ದಾರೆ ಎಂದು ಎಡ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿ ಬೆಂಬಲ ವಾಪಸ್ಸು ಪಡೆಯುತ್ತಿರುವುದಾಗಿ ತಿಳಿಸಿವೆ.
(ಏಜೆನ್ಸೀಸ್)












Click it and Unblock the Notifications