ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಕುದುರೆಯ ಸಮರ್ಥ ತರಬೇತುದಾರ ಅರುಣ್ ಜೈಟ್ಲಿ

By Staff
|
Google Oneindia Kannada News

Ace political strategist Arun Jaitleyಭಾರತೀಯ ಜನತಾಪಕ್ಷದ ಹೊಸ ತಲೆಮಾರಿನ ನಾಯಕರಲ್ಲಿ ಅರುಣ್ ಜೈಟ್ಲಿ ಅಗ್ರಗಣ್ಯ. ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವಲ್ಲಿ ಸಿದ್ಧಹಸ್ತ ಮತ್ತು ರಾಜ್ಯದ ನಾಯಕರುಗಳಿಗೆ ಗೆಲುವಿನ ಮಂತ್ರ ಹೇಳಿಕೊಡುವುದರಲ್ಲಿ ಕುಶಲಮತಿ ಎಂದು ಅವರು ಪ್ರಸಿದ್ಧಿ. ರಾಜಕೀಯದ ಕುದುರೆ ರೇಸಿನಲ್ಲಿ ಬಿಜೆಪಿಯನ್ನು ಗೆಲುವಿನ ಸ್ಥಂಭದತನಕ ತರುವ ಅವರ ಜಾಣ್ಮೆ ಮತ್ತು ತಂತ್ರಗಾರಿಕೆಯ ಕುರಿತು ಒಂದು ಅವಲೋಕನ.

ಲೇಖಕ : ಮದ್ದೂರು ಸುಧೀಂದ್ರ ಬುದ್ಯ, ಬೆಂಗಳೂರು

"ನಾನು ಶಾಲಾ ದಿನಗಳಿಂದಲೂ ರಾಜಕೀಯದ ಬಗ್ಗೆ ಆಕರ್ಷಿತನಾಗಿದ್ದೆ. ಆದರೆ ಎಂದಿಗೂ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ಕಳೆದುಕೊಳ್ಳಲಿಲ್ಲ. ಪ್ರತಿ ತರಗತಿಯಲ್ಲೂ ನಾನೇ ಮುಂದು. ಉತ್ತಮ ಅಂಕಗಳನ್ನ ಪಡೆದುಕೊಂಡು ತೇರ್ಗಡೆ ಹೊಂದುತ್ತಿದ್ದೆ. ವಕೀಲನಾಗಬೇಕೆಂಬ ಆಸೆಯಿಂದ ಕಾನೂನು ಅಧ್ಯಯನ ಮಾಡಿದೆ. ಉತ್ತಮ ವಕೀಲನೆಂದು ಜನ ಹೊಗಳುವಷ್ಟು ಹೆಸರು ಮಾಡಿದೆ. ಬಹುಶಃ ನಾ ಪಡೆದುಕೊಂಡ ಜ್ಞಾನ ನನ್ನ ರಾಜಕೀಯ ಜೀವನದಲ್ಲಿ ಯಶಸ್ಸುಗಳಿಸಲು ಸಹಾಯ ಮಾಡುತ್ತಿದೆ" ಹೀಗೆನ್ನುತ್ತಾರೆ ಅರುಣ್ ಜೈಟ್ಲಿ.

ಭಾರತೀಯ ಜನತಾ ಪಾರ್ಟಿಯಲ್ಲಿ ವಾಜಪೇಯಿ, ಅಡ್ವಾಣಿ, ಮುರಳೀ ಮನೋಹರ್ ಜೋಶಿ ಮುಂತಾದ ಒಂದು ಹಂತದ ನಾಯಕರೆಲ್ಲಾ ಮುಪ್ಪಿನೆಡೆಗೆ ಸಾಗುತ್ತಿದ್ದಾರೆ. ಹೊಸದೊಂದು ಯುವ ಪಡೆಯ ಅವಶ್ಯಕತೆ ಇದೆ ಎಂಬ ಆಲೋಚನೆ ಪಕ್ಷದ ಕಾರ್ಯಕರ್ತರಲ್ಲಿ ಮೂಡುವ ಹೊತ್ತಿಗೆ ಭರವಸೆ ಮೂಡಿಸುವ ನಾಲ್ಕಾರು ನಾಯಕರು ತಯಾರಾಗಿ ಬಿಟ್ಟಿದ್ದರು. ಆದರೆ ಇಬ್ಬರು ಮಾತ್ರ ಕುಶಾಗ್ರಮತಿಗಳು. ಇಬ್ಬರೂ ಮಾತಿನಲ್ಲಿ ಮೋಡಿ ಮಾಡಬಲ್ಲವರೇ, ಇಬ್ಬರ ನಾಯಕತ್ವ ಗುಣವೂ ಅದ್ಭುತವೆ. ಚುನಾವಣೆಗಳಿರಲಿ, ಚುನಾವಣೆಯ ನಂತರ ಮಿತ್ರ ಪಕ್ಷಗಳನ್ನು ಹಿಡಿದಿಟ್ಟುಕೊಳ್ಳುವ ಕೆಲಸವಾಗಲಿ ತುಂಬ ಚಾಕಚಕ್ಯತೆಯಿಂದ ನಿರ್ವಹಿಸುವಲ್ಲಿ ಎತ್ತಿದ ಕೈ. ಪ್ರಮೋದ್ ಮಹಾಜನ್ ಮತ್ತು ಅರುಣ್ ಜೈಟ್ಲಿ ಇಬ್ಬರದೂ ಆಕರ್ಷಕ ವ್ಯಕ್ತಿತ್ವ. ಸದಾ ಮಂದಹಾಸ. ಹಿಡಿದ ಕೆಲಸದಲ್ಲಿ ಜಯಗಳಿಸುವ ಚಾಣಾಕ್ಷತೆ. ಪ್ರಮೋದ್ ಅಕಾಲ ಮರಣಕ್ಕೆ ತುತ್ತಾಗಬೇಕಾಗಿದ್ದು ದುರಾದೃಷ್ಟ.

ಚುನಾವಣೆ ಘೋಷಣೆಯಾಗುವ ಸಂದರ್ಭ ಬರುತ್ತಿದೆ ಎಂದು ಊಹಿಸುವ ಬಿಜೆಪಿ ಮೊದಲು ಮಾಡುವ ಕೆಲಸ ಜೈಟ್ಲಿಯವರನ್ನ ಆ ರಾಜ್ಯಗಳ ಉಸ್ತುವಾರಿಗೆ ನೇಮಿಸುವುದು. ಹೌದು. ಅರುಣ್ ಜೈಟ್ಲಿ ಎಂದ ಕೂಡಲೆ ನೆನಪಾಗುವುದು ಅವರ ಬುದ್ದಿವಂತಿಕೆ, ತಂತ್ರಗಾರಿಕೆ ಮತ್ತು ಯಶಸ್ಸು. ಅವರು ಚುನಾವಣಾ ಉಸ್ತುವಾರಿ ವಹಿಸಿಕೊಂಡ ಎಲ್ಲೆಡೆ ಒಂದು ಮ್ಯಾಜಿಕ್ ಆಗುತ್ತದೆ. ಸಮೀಕ್ಷೆಗಳು ತಿಪ್ಪರಲಾಗ ಹಾಕುತ್ತವೆ. ಮತದಾರರ ಮನವನ್ನು ಮುಟ್ಟುವುದು ಹೇಗೆ, ಪ್ರಣಾಳಿಕೆ ಹೇಗಿರಬೇಕು, ಮಾಧ್ಯಮಗಳನ್ನು ಹೇಗೆ ಬಳಸಿಕೊಳ್ಳಬೇಕು, ಮುಖ್ಯವಾಗಿ ಪಕ್ಷದಲ್ಲಿ ಒಗ್ಗಟ್ಟನ್ನು ಕಾಯ್ದುಕೊಳ್ಳುವುದು ಹೇಗೆ, ಪ್ರತಿಪಕ್ಷಗಳ ಕಾರ್ಯತಂತ್ರ ಊಹಿಸಿ ಪ್ರತಿತಂತ್ರ ಹೇಗೆ ರೂಪಿಸಬೇಕು ಎಂಬುದು ಈ ತಂತ್ರಗಾರನಿಗೆ ಕರಗತವಾಗಿ ಹೋಗಿದೆ. ಗುಜರಾತ್(2002), ಮಧ್ಯಪ್ರದೇಶ್(2003), ಕರ್ನಾಟಕ(2004), ಬಿಹಾರ್(2005), ಪಶ್ಚಿಮ ಬಂಗಾಳ(2006), ಪಂಜಾಬ್(2007), ಗುಜರಾತ್(2007) ಮತ್ತು ಕರ್ನಾಟಕ(2008). ಈ ಎಲ್ಲ ಚುನಾವಣೆಗಳಲ್ಲಿ ಬಿಜೆಪಿಯ ಈ ಚುನಾವಣಾ ಚಾಣಕ್ಯನ ತಂತ್ರಗಾರಿಕೆ ಭರವಸೆಯ ಫಲಿತಾಂಶಗಳನ್ನೇ ಕೊಟ್ಟಿದೆ. ಗುಜರಾತ್, ಕರ್ನಾಟಕ ಮತ್ತು ಬಿಹಾರ ಚುನಾವಣೆಗಳಲ್ಲಂತೂ ಜೈಟ್ಲಿ ಜಾದು ಬಿಜೆಪಿಗೆ ಹೊಸ ತಿರುವನ್ನೇ ನೀಡಿದೆ.

ಮೂಲತಃ ದೆಹಲಿಯವರಾದ ಜೈಟ್ಲಿ ಕಾನೂನು ಪದವಿ ಪಡೆದುಕೊಂಡು ಜಯಪ್ರಕಾಶ್ ನಾರಾಯಣರ ಪ್ರಭಾವಕ್ಕೆ ಒಳಗಾಗಿ ರಾಜಕೀಯಕ್ಕೆ ಧುಮುಕಿದವರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ಕಾರ್ಯನಿರ್ವಹಿಸಿ ನಾಯಕತ್ವ ಗುಣವನ್ನ ಸಾಬೀತುಪಡಿಸಿದ ಅರುಣ್ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದವರಲ್ಲಿ ಒಬ್ಬರು. ಸರ್ವೋಚ್ಚ ನ್ಯಾಯಾಲಯದಲ್ಲಿ ಮತ್ತು ಅನೇಕ ರಾಜ್ಯಗಳ ಉಚ್ಚನ್ಯಾಯಲಯಗಳಲ್ಲಿ ಹಲವಾರು ದಾವೆಗಳನ್ನು ಮುನ್ನಡೆಸಿದ ಜೈಟ್ಲಿ ಪ್ರಚಂಡ ವಾಗ್ಮಿ ಮತ್ತು ಉತ್ತಮ ವಕೀಲ. ಹಲವಾರು ಖಾಸಗೀ ಕಂಪನಿಗಳಿಗೆ ಕಾನೂನು ಸಲಹೆಗಾರರಾಗಿ ಕೂಡ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದ ಅತಿಹೆಚ್ಚು ತೆರಿಗೆ ಕಟ್ಟುವವರ ಪಟ್ಟಿಯಲ್ಲಿ ಜೈಟ್ಲಿಯವರ ಹೆಸರು ಇದೆ. ಬಿಜೆಪಿಯ ವಕ್ತಾರರಾಗಿ ಎನ್‌ಡಿಎ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿ, ಕ್ಯಾಬಿನೆಟ್ ದರ್ಜೆಯ ಕಾನೂನು ಸಚಿವರಾಗಿ ಆ ಸ್ಥಾನಗಳಿಗೆ ನ್ಯಾಯ ಒದಗಿಸಿದ್ದಾರೆ. ಇದೀಗ ಎಲ್ಲೇ ಚುನಾವಣೆ ಘೋಷಣೆಯಾಗಲಿ ಅಲ್ಲಿ ಅರುಣ್ ಜೈಟ್ಲಿ ಇರಲೇಬೇಕು. ಅವರಿದ್ದಲ್ಲಿ ಗೆಲುವು ನಮ್ಮದೇ ಎನ್ನುವ ವಿಶ್ವಾಸ ಭಾಜಪದ ಹಿರಿಯರದ್ದು. ಅಷ್ಟರ ಮಟ್ಟಿಗೆ ಅವರು ಹೈಕಮಾಂಡಿನ ವಿಶ್ವಾಸಗಳಿಸಿದ್ದಾರೆ.

ಕರ್ನಾಟಕದ ಮಟ್ಟಿಗೆ ನಡೆದಿದ್ದೂ ಅದೇ : 2004ರಲ್ಲಿ ಎಸ್.ಎಂ. ಕೃಷ್ಣ ಅತಿಯಾದ ಆತ್ಮವಿಶ್ವಾಸದಿಂದ ಅವಧಿಗೆ ಮೊದಲೆ ಚುನಾವಣೆಗೆ ಹೋಗುವ ನಿರ್ಧಾರ ಪ್ರಕಟಿಸಿದರು. ಚುನಾವಣಾ ದಿನಾಂಕ ನಿಗದಿಯಾಗುತ್ತಿದ್ದಂತೆ ಜೈಟ್ಲಿಯ ಉಸ್ತುವಾರಿಯಲ್ಲಿ ಬಿಜೆಪಿ ಚುನಾವಣೆಯನ್ನು ಎದುರಿಸಲು ಸಿದ್ದವಾಗತೊಡಗಿತು. ಕೃಷ್ಣ ಸರ್ಕಾರದ ವೈಫಲ್ಯ, ರೈತರ ಆತ್ಮಹತ್ಯೆ, ಬರ, ರಾಜ್ ಅಪಹರಣ, ನಕ್ಸಲರ ಹಟ್ಟಹಾಸ ಎಲ್ಲವನ್ನೂ ಪ್ರಸ್ಥಾಪಿಸುತ್ತಾ ಪ್ರಚಾರ ಯಾತ್ರೆ ಆರಂಭಿಸಿದ ಯಡಿಯೂರಪ್ಪ ನೇತೃತ್ವದ ಭಾಜಪ ನಾಯಕರುಗಳು ತಮ್ಮ ಪಕ್ಷ ಕೇವಲ ಕೆಲವೇ ಭಾಗಕ್ಕೆ, ಕೆಲವೇ ಜನಾಂಗಕ್ಕೆ ಸೀಮಿತ ಎನ್ನುವ ಅಪವಾದವನ್ನು ಕಿತ್ತೆಸೆಯುವಲ್ಲಿ ಸಫಲರಾದರು. ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆಗೆ ಚುನಾವಣೆ ನಡೆದದ್ದರಿಂದ ವಾಜಪೇಯಿ ಅಲೆ ಕೂಡ ಕೆಲಸ ಮಾಡಿತ್ತು. ನಲವತ್ತರ ಆಸು ಪಾಸಿನಲ್ಲಿ ತಿಣುಕುತ್ತಿದ್ದ ಪಕ್ಷ ಒಮ್ಮೆಲೆ ಎಂಬತ್ತರ ಸನಿಹ ಬಂದು ನಿಂತಿತು. ಪ್ರಣಾಳಿಕೆಯಿಂದ ಹಿಡಿದು ಅಭ್ಯರ್ಥಿಯ ಆಯ್ಕೆಯವರೆಗೆ ಜೈಟ್ಲಿ ತಮ್ಮ ಚಮತ್ಕಾರವನ್ನು ತೋರಿಸಿದ್ದರು.

ಲಾಲೂರನ್ನೇ ಮಲಗಿಸಿದ ಚಾಲೂ : ನಂತರ ನಡೆದ ಬಿಹಾರ ಚುನಾವಣೆಯಲ್ಲಿ ಭಾಜಪ ಮತ್ತು ಮಿತ್ರ ಪಕ್ಷ ಜೆಡಿಯು ಅಧಿಕಾರಕ್ಕೆ ಬರುತ್ತದೆಂದು ಯಾರು ಕೂಡ ಊಹಿಸಿರಲಿಲ್ಲ. ಅರಾಜಕತೆಗೆ ಹೆಸರಾದ ಬಿಹಾರದಲ್ಲಿ ಲಾಲುರನ್ನ ಎದರಿಸಿಸುವವರಿಗೆ ಎಂಟೆದೆ ಇರಲೇಬೇಕು. ಒಂದುವೇಳೆ ಪ್ರತಿಪಕ್ಷದ ಅಭ್ಯರ್ಥಿ ಗೆಲ್ಲುವನೆಂಬ ಸೂಚನೆ ಕಂಡರೂ ಸಾಕು ಮತಗಟ್ಟೆಗಳನ್ನು ಅಪಹರಿಸುವ ಪುಂಡರಾಜ್ಯ ಬಿಹಾರ. ಭಾಜಪದ ಪರ ರಾಜ್ಯದ ಹೊಣೆ ಹೊತ್ತ ಅರುಣ್ ಮೊದಲು ಶೇಕಡವಾರು ಮತದಾರರ ವರ್ಗದ ಮೇಲೆ ನಿಗಾವಹಿಸಿದರು. 11% ಇದ್ದ ಯಾದವರ ಮೇಲೆ ಮತ್ತು 15% ಇದ್ದ ಮುಸ್ಲಿಮ್ ಮತಗಳ ಮೇಲೆ ಆರ್‌ಜೆಡಿ ಹಿಡಿತ ಸಾಧಿಸಬಹುದೆಂದು ಊಹಿಸಿದರು. ಯುಪಿಎ ಕೂಡ ನೆಚ್ಚಿಕೊಂಡಿರುವುದು ಅದೇ ಹಿಂದುಳಿದ ಅಲ್ಪಸಂಖ್ಯಾತರ ಮತಗಳ ಮೇಲೆ. ಆದ್ದರಿಂದ ಆ ಎರಡು ಪಕ್ಷಗಳಿಗೆ ಈ ವರ್ಗಗಳ ಮತಗಳು ಹಂಚಿ ಹೋಗುತ್ತವೆ. ಆದ್ದರಿಂದ ಭಾಜಪ-ಜೆಡಿಯು4% ಇರುವ ಕುರ್ಮಿಸ್, 4% ಇರುವ ಕೊರ್ಯಿಸ್, 5% ಇರುವ ಬ್ರಾಹ್ಮಣ, 2% ಇರುವ ಕೈಸ್ಥಾಸ್, ಮತ್ತು 10% ಇರುವ ಬನಿಯಾಸ್‌ಗಳ ಮತಗಳನ್ನು ಗಳಿಸುವತ್ತ ಹೆಜ್ಜೆ ಇಡಬೇಕೆಂದು ನಿರ್ದರಿಸಿ ಕಾರ್ಯತಂತ್ರ ರೂಪಿಸಿದರು.

ಯಾವಾಗಲೂ ಪ್ರಚಾರಕ್ಕೆ ಮಾಧ್ಯಮಗಳ ಮೊರೆ ಹೋಗುವ ಜೈಟ್ಲಿ ಬಿಹಾರದ ಮಟ್ಟಿಗೆ ಅಲ್ಲಿ ಹೆಚ್ಚು ಜನ ಟಿವಿ ನೋಡುವುದಿಲ್ಲವಾದ್ದರಿಂದ(ಪವರ್ ಅಂಡ್ ಪಾವರ್ಟಿ ಪ್ರಾಬ್ಲಂ) ಕೇವಲ ಪತ್ರಿಕೆಗಳ ಮೊರೆ ಹೋದರು. ಒಂದು ತಿಂಗಳ ಕಾಲ ಬಿಹಾರದ ದೈನಿಕಗಳಾದ ಪ್ರಭಾತ್ ಖಾಬರ್ ಮತ್ತು ದೈನಿಕ್ ಜಾಗರಣ್ ಪತ್ರಿಕೆಗಳನ್ನು ಬಳಸಿಕೊಂಡು ಮತದಾರನ ಮನ ತಲುಪುವಲ್ಲಿ ಯಶಸ್ವಿಯಾದರು. ಬಿಜೆಪಿಯ ಬಿಹಾರದ ಚುನಾವಣೆಯ ಆಪರೇಷನ್ ವಿಜಯ್ ಅನ್ನು ಮಾಧ್ಯಮಗಳಿಂದ ಹಿಡಿದು ಕಾಂಗ್ರೆಸ್ ಕೂಡ ಟೀಕೆ ಮಾಡಿತ್ತು ಮತ್ತು ಲಘುವಾಗಿ ಪರಿಗಣಿಸಿತ್ತು. ಅಂತವರಿಗೆಲ್ಲಾ ಫಲಿತಾಂಶ ಅಚ್ಚರಿ ಉಂಟುಮಾಡಿತ್ತು. 243 ಕ್ಷೇತ್ರಗಳ ಪೈಕೆ 146 ಕ್ಷೇತ್ರಗಳನ್ನು ಭಾಜಪ+ಜೆಡಿಯೂ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. 15 ವರ್ಷಗಳ ಲಾಲು ಕುಟುಂಬದ ದುರಾಡಳಿತ ಅಲ್ಲಿಗೆ ಅಂತ್ಯಗೊಂಡಿತ್ತು.

ಗುಜರಾತ್‌ನಲ್ಲಿ ಚಮತ್ಕಾರ : ಇನ್ನು ಗೋಧ್ರಾ ಹತ್ಯಾಕಾಂಡದ ನಂತರ ಗುಜರಾತ್ ಎದುರಿಸಿದ ಚುನಾವಣೆಯಲ್ಲಿ ಪ್ರತಿಪಕ್ಷಗಳು ಮೋದಿ ಹಟಾವೋ ಆಂದೋಲನವನ್ನೇ ಆರಂಭಿಸಿದ್ದವು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾರಂತು ಮೋದಿಯನ್ನು ಸಾವಿನ ವ್ಯಾಪಾರಿ ಎಂದು ಕರೆದು ಭಾಜಪವನ್ನು ಅಧಿಕಾರದಿಂದ ದೂರವಿಡುವಂತೆ ಪ್ರಚಾರ ಆರಂಭಿಸಿದ್ದರು. ಕಾಂಗ್ರೆಸ್‌ನ ಮುಖವಾಡದಂತಿರುವ ಕೆಲವು ಟಿವಿ ಚಾನಲ್‌ಗಳಂತೂ ಮೋದಿಯ ವಿರುದ್ದ ಕಿಡಿಕಾರುವುದನ್ನೇ ತನ್ನ ದಿನಚರಿಯನ್ನಾಗಿಸಿಕೊಂಡಿತ್ತು. ಇದ್ದಕ್ಕಿದ್ದಂತೆ ಒಂದು ಮಾಧ್ಯಮ ಸಂಸ್ಥೆ ತಾನು ನಡೆಸಿರುವ ರಹಸ್ಯ ಕಾರ್ಯಾಚರಣೆಯ ವಿಡಿಯೋ ಬಿಡುಗಡೆಗೊಳಿಸಿ, ಗೋಧ್ರಾ ನಂತರದ ಕೋಮುಗಲಭೆ ನೇತೃತ್ವವಹಿಸಿದ್ದವರು ಮೋದಿ ಎಂಬ ಆಪಾದನೆ ಮಾಡಿತ್ತು. ಮೋದಿಗೆ ಮತ್ತೊಮ್ಮೆ ಅಧಿಕಾರ ಸಿಗಲು ಸಾಧ್ಯವೇ ಇಲ್ಲ ಎನ್ನುವುದು ಕೆಲವು ರಾಜಕೀಯ ಪಂಡಿತರ ವಿಶ್ಲೇಷಣೆಯಾಗಿತ್ತು ಆದರೆ ಅಂದು ಮೋದಿಯ ಬೆನ್ನೆಲುಬಾಗಿ ನಿಂತವರು ಕೂಡ ಇದೇ ಅರುಣ್ ಜೈಟ್ಲಿ ಎಂಬ ಮಹಾನ್ ತಂತ್ರಗಾರ.

2002ರಲ್ಲಿ ಭಾಜಪ ಹಿಂದುತ್ವವನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿತ್ತು. ಆದರೆ 2007ರ ಚುನಾವಣೆಯಲ್ಲಿ ಕೇವಲ ಹಿಂದುತ್ವಕ್ಕೆ ಅಂಟಿಕೊಂಡರೆ ಹಿನ್ನಡೆಯಾಗಬಹುದೆಂದು ಊಹಿಸಿದ ಜೈಟ್ಲಿ ಹಿಂದುತ್ವದ ಜೊತೆ ಅಭಿವೃದ್ದಿ ಮಂತ್ರವನ್ನೂ ಪಠಿಸುವ ಕಾರ್ಯತಂತ್ರ ರೂಪಿಸಿದರು. ಮೋದಿ ಏಕಮಾತ್ರ ನಾಯಕನಾಗಿ ಅಖಾಡಕ್ಕೆ ಇಳಿದರು. ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗದಂತೆ ಹೇಗೆ ಮತದಾರರನ್ನು ಓಲೈಸಬೇಕು ಎಂಬ ಕಾರ್ಯತಂತ್ರವನ್ನ ರೂಪಿಸಿದರು. ಇಲ್ಲೂ ಕೂಡ ಮಾಧ್ಯಮವನ್ನ ಸಕಾರಾತ್ಮಕವಾಗಿ ಬಳಸಿಕೊಂಡರು ಜೈಟ್ಲಿ. ಪ್ರತಿ ಪಕ್ಷದವರ ಹೇಳಿಕೆಗಳಿಗೆ ತಿರುಗುಬಾಣವಾಗಿ ಬಹಿರಂಗ ಸಭೆಗಳಲ್ಲಿ ಮತದಾರರಿಂದಲೇ ಬಿಜೆಪಿಯ ನಡೆಯನ್ನು ಸಮರ್ಥಿಸುವ ತಂತ್ರ ರೂಪಿಸಿದರು. ಅದರಂತೆಯೇ ಮೋದಿ ಮತದಾರರನ್ನೇ ಬಹಿರಂಗ ಸಭೆಗಳಲ್ಲಿ ಪ್ರಶ್ನಿಸುತ್ತ ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಿದರು. ಕೊನೆಗೆ ಎಡ ಪಕ್ಷಗಳನ್ನು, ಕಾಂಗ್ರೆಸ್ ಅನ್ನು ದೂಳಿಪಟ ಮಾಡಿ 117 ಸೀಟುಗಳಿಸಿಕೊಳ್ಳುವಲ್ಲಿ ಭಾಜಪ ಯಶಸ್ವಿಯಾಯಿತು. ಅಧಿಕಾರದ ಚುಕ್ಕಾಣಿ ಹಿಡಿಯಿತು. ಮೋದಿ ಮೋಡಿಯ ಜೊತೆ ಜೊತೆಗೆ ಜೈಟ್ಲಿ ಜಾದು ಅಲ್ಲಿ ನಡೆದಿತ್ತು.

ಕರ್ನಾಟಕದಲ್ಲಿ ಜೈಟ್ಲಿ ಮಾಡಿದ ಮೋಡಿ : ಇದೀಗ ನಡೆದ ಕರ್ನಾಟಕದ ಚುನಾವಣೆಯಲ್ಲಿ ಭಾಜಪ ಕೂಡ ಅಚ್ಚರಿ ಹುಟ್ಟಿಸುವ ಸಾಧನೆ ತೋರಿದೆ. ಬಿಜೆಪಿಯ ಯಶಸ್ಸಿನ ಬಗ್ಗೆ ಅನೇಕರು ಅನೇಕ ರೀತಿಯಲ್ಲಿ ವ್ಯಾಖ್ಯಾನ ನೀಡಿದ್ದಾರೆ. ಯಡಿಯೂರಪ್ಪ ಲಿಂಗಾಯಿತರಾದ್ದರಿಂದ ರಾಜ್ಯದ ಬಹುಸಂಖ್ಯಾತರಾದ ಲಿಂಗಾಯಿತರ ಓಟು ಗಿಟ್ಟಿಸಲು ಸಾಧ್ಯವಾಯಿತು ಜೊತೆಗೆ ಗಣಿ ಧಣಿಗಳ ಹಣದ ಹೊಳೆಯಿಂದ ಇತರ ಪಕ್ಷಗಳು ಕೊಚ್ಚಿಕೊಂಡು ಹೋದರು. ಇದೇ ಕಾಂಗ್ರಸ್ ವೈಫಲ್ಯಕ್ಕೆ ಕಾರಣ. ಇನ್ನು ಜೆಡಿಎಸ್‌ನಲ್ಲಿ ಮುಖಂಡರ ಕೊರತೆ ಮತ್ತು ಅಧಿಕಾರ ಹಸ್ತಾಂತರದ ರಾದ್ದಾಂತ ಅದರ ವರ್ಚಸ್ಸನ್ನು ಕಡಿಮೆ ಮಾಡಿತು ಆದ್ದರಿಂದ ಗೌಡರ ಪಕ್ಷ ನೆಲ ಕಚ್ಚಿತು. ಇತ್ಯಾದಿ ಇತ್ಯಾದಿ. ಖಂಡಿತಾ ಇವೆಲ್ಲವೂ ಕೆಲಸ ಮಾಡಿವೆ. ಮುಖ್ಯವಾಗಿ ಭಾಜಪದ ಕಾರ್ಯತಂತ್ರ ಯಶಸ್ವಿಯಾಗಿದೆ.

ಯಾವಾಗ ಜೈಟ್ಲಿ ಕರ್ನಾಟಕ ಚುನಾವಣೆಗೆ ಭಾಜಪವನ್ನು ಮುನ್ನಡೆಸುವ ಹೊಣೆ ಹೊತ್ತುಕೊಂಡರೋ ಮೊದಲು ಅವರು ಯಡಿಯೂರಪ್ಪ ಮತ್ತು ಅನಂತಕುಮಾರ್ ಮಧ್ಯ ವಿಶ್ವಾಸ ಮೂಡಿಸುವ ಕೆಲಸ ಮಾಡಿದರು. ಯಡಿಯೂರಪ್ಪನವರನ್ನ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಬಿಂಬಿಸುವ ಕೆಲಸ ಪ್ರಾರಂಭಿಸಿದರು. ಆ ತಂತ್ರದ ಒಂದು ಭಾಗವೇ ದಿನದಲ್ಲಿ 10 ಸರಿ ಯಡಿಯೂರಪ್ಪನವರು ನಾನೇ ಮುಂದಿನ ಮುಖ್ಯಮಂತ್ರಿ ಎಂದು ಜಪಿಸತೊಡಗಿದ್ದು. ಮತದಾರರಿಗೆ ತಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಪದವಿಗೆ ಕಚ್ಚಾಟವಿಲ್ಲ ಎಂದು ಮನವರಿಕೆ ಮಾಡಿಕೊಡುವ ಅಗತ್ಯವಿತ್ತು. ಮುಖ್ಯವಾಗಿ ರಾಜ್ಯದ ಮಟ್ಟಿಗೆ ಬಹುಸಂಖ್ಯಾತರಾದ ಲಿಂಗಾಯಿತರ ಮನವೊಲಿಸುವ ಪ್ರಯತ್ನ ಇದು. ಜೊತೆಗೆ ತಂಡಗಳನ್ನ ರೂಪಿಸಿದರು ಅನಂತಕುಮಾರರಿಗೆ ಬೆಂಗಳೂರಿನ ಪ್ರಚಾರದ ಸಂಪೂರ್ಣ ಹೊಣೆ ನೀಡಿ, ಯಡಿಯೂರಪ್ಪನವರನ್ನ ರಾಜ್ಯ ಪ್ರವಾಸಕ್ಕೆ ಕಳುಹಿಸಿದರು. ರಾಷ್ಟ್ರ ನಾಯಕರನ್ನ ಬಳಸಿಕೊಳ್ಳಬೇಕೆಂದು ಅಡ್ವಾಣಿ, ಮೋದಿ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್‌ರನ್ನ ಅಲ್ಲಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸಿದರು. ಅತಿಹೆಚ್ಚು ಕಡೆಗಳಲ್ಲಿ ಪ್ರಚಾರ ಸಭೆಗಳು ನಡೆದುವು. ಪತ್ರಿಕೆಗಳಲ್ಲಿ, ಟಿವಿ ಮಾಧ್ಯಮದಲ್ಲಿ ಕಾಂಗ್ರೆಸ್, ಜೆಡಿಎಸ್‌ಗಳ ದುರಾಡಳಿತವನ್ನ ಟೀಕಿಸುತ್ತಾ ಬಿಜೆಪಿಯೇ ಪರಿಹಾರವೆನ್ನುವ ಜಾಹಿರಾತು ನೀಡುತ್ತಾ ಬಂದರು. ಮುಖ್ಯವಾಗಿ ಪಕ್ಷದಲ್ಲಿ ಚೂರೂ ಒಡಕು ಮೂಡದಂತೆ, ಇದ್ದರೂ ಎದ್ದುಕಾಣದಂತೆ ನಿಗಾವಹಿಸಿದರು.

ಮೊದಮೊದಲು ಹೋದಲೆಲ್ಲಾ ಜೆಡಿಎಸ್‌ನಿಂದ ದ್ರೋಹ ಎಂಬುದೊಂದನ್ನೇ ಕನವರಿಸುತ್ತಿದ್ದ ಯಡಿಯೂರಪ್ಪನವರಿಗೆ ಜೈಟ್ಲಿ ಕೇವಲ ಮೋಸ ಹೋದದ್ದೊಂದನ್ನೇ ಹೇಳಿದರೆ ಸಾಲದು, ಅನುಕಂಪ ಎಷ್ಟು ದಿನ ಇರಲು ಸಾಧ್ಯ. ಆಗಲೇ ಭಾಜಪ ತನ್ನ ಭಾಷಣವನ್ನು ರೈತನ ಸಮಸ್ಯೆಗಳ ಬಗ್ಗೆ, ಭಯೋತ್ಪಾದನೆ, ಬೆಲೆ ಹೆಚ್ಚಳದ ಬಗ್ಗೆ, ಮಾತನಾಡಲು ಶುರುಮಾಡಿದ್ದು. ಬೆಂಗಳೂರಿನ ಮಟ್ಟಿಗೆ ಟ್ರಾಫಿಕ್, ಮೂಲ ಸೌಕರ್ಯ, ರಿಯಲ್ ಎಸ್ಟೇಟ್ ಮಾಫಿಯಾ ಬಗ್ಗೆ ಪ್ರಸ್ತಾಪಿಸಲು ಪ್ರಾರಂಭಿಸಿದ್ದು.

ತಿಂಗಳು ಪೂರ್ತಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಜೈಟ್ಲಿ ನಾಲ್ಕಾರು ಸೆಲ್‌ಗಳನ್ನ ಮಾಡಿಕೊಂಡರು. ಅಭ್ಯರ್ಥಿಯ ಆಯ್ಕೆ ಬಗ್ಗೆ ಚರ್ಚಿಸುವುದಕ್ಕೆ, ಪ್ರಚಾರಕ್ಕೆ, ಜಾಹಿರಾತಿಗೆ, ಸಭೆಗಳ ಆಯೋಜನೆಗೆ, ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಚರ್ಚಿಸುವುದಕ್ಕೆ. ಹೀಗೆ ಎಲ್ಲ ಸೆಲ್‌ಗಳಿಂದಲೂ ಬೆಳಗ್ಗೆ ಮಾಹಿತಿ ಸಂಗ್ರಹಿಸುವುದು, ಮಾರ್ಗದರ್ಶನ ಮಾಡುವುದು ಸಂಜೆಯ ಹೊತ್ತಿಗೆ ಪ್ರಚಾರಕ್ಕೆ ಹೊರಡುವುದು, ರಾತ್ರಿ ಪುನಃ ದಿನದಲ್ಲಿ ಆದ ಬೆಳವಣಿಗೆಯ ಬಗ್ಗೆ ಚರ್ಚಿಸುವುದು ಆದ ತಪ್ಪುಗಳನ್ನ ಸರಿಪಡಿಸುವುದು. ಇದೇ ಅವರ ದಿನಚರಿಯಾಗಿ ಹೋಗಿತ್ತು. ಈ ಎಲ್ಲ ಕಾರ್ಯತಂತ್ರಗಳ ಫಲವಾಗೇ ಭಾಜಪ 110 ಸ್ಥಾನಗಳನ್ನು ಗಿಟ್ಟಿಸಿ ಭರ್ಜರಿ ಯಶಸ್ಸುಗಳಿಸಲು ಸಾಧ್ಯವಾದದ್ದು.

ಇತ್ತ ಕಾಂಗ್ರೆಸ್ ಒಕ್ಕಲಿಗ ನಾಯಕ ಎಸ್ಎಂ ಕೃಷ್ಣ, ಡಿಕೆ ಶಿವಕುಮಾರ್ ಮತ್ತು ಅಂಬರೀಶ್‌ರಂತಹ ಘಟಾನುಗಟಿಗಳನ್ನ, ಕುರುಬ ಸಮಾಜದ ನಾಯಕರಾದ ಸಿದ್ದರಾಮಯ್ಯರನ್ನ, ಹಿಂದುಳಿದವರ ಪ್ರತಿನಿಧಿಯಾದ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯೆಂದೆ ಬಿಂಬಿತವಾದ ಖರ್ಗೆಯವರನ್ನ, ಉಳಿದಂತೆ ಧರ್ಮಸಿಂಗ್, ಎಂ.ಪಿ ಪ್ರಕಾಶ್, ವಿಶ್ವನಾಥ್, ಮುಂತಾದ ಗಣ್ಯಾತಿಗಣ್ಯ ನಾಯಕರನ್ನು ಇಟ್ಟುಕೊಂಡೂ ನಾವಿಕನಿಲ್ಲದ ಹಡಗಿನಂತೆ ಮುಳುಗಬೇಕಾಯಿತು. ಸೋನಿಯಾ, ರಾಹುಲ್ ಒಂದೆರಡು ಬಾರಿ ಬಂದು ಹೋದರಾದರು ಯಾವ ಪ್ರಯೋಜನವೂ ಆಗಲಿಲ್ಲ. ಮನ ಮೋಹನ್ ಸಿಂಗ್ ಹೀಗೆ ಬಂದು ಹಾಗೆ ಹೋದರು. ಉಸ್ತುವಾರಿ ವಹಿಸಿಕೊಂಡವರು ಸುಸ್ತಾಗಿ ಹೋಗಿದ್ದರು. ಸಮರ್ಥ ನಾಯಕತ್ವದ ಕೊರತೆ ಕಾಂಗ್ರೆಸ್‌ಗೆ ಉಂಟಾಯಿತು. ಜೈಟ್ಲಿಗೆ ಸರಿಸಮನಾಗಿ ತಂತ್ರ ರೂಪಿಸಬಲ್ಲ ಕೃಷ್ಣ ಏಕಾಂಗಿಯಾಗಿ ಹೋದರು.

ಚುನಾವಣೆಗೆ ಮುನ್ನವೇ ಅಧಿಕಾರದ ದಾಹ ಕಾಂಗ್ರೆಸ್ಸಿಗರನ್ನು ಕಾಡಿತು. ಪಕ್ಷ ನೆಲಕಚ್ಚಿತು. ಜೆಡಿಎಸ್ ಪಾಡು ಬೇಡವೇ ಬೇಡ. ಮಹಾನ್ ತಂತ್ರ ಸಾಮ್ರಾಟರಾದ ಗೌಡರ ಹೆಗಲ ಮೇಲೆ ಇರುತ್ತಿದ್ದ ಟವಲ್ ತಲೆ ಮೇಲೆ ಹೋಗಿ ಕುಳಿತಿತು. ಇದ್ದ ನಾಯಕರೆಲ್ಲಾ ಪಕ್ಷ ತೊರೆದು ಹೋಗಿದ್ದಾರೆ, ಉಳಿದಿರುವುದು ಅಪ್ಪ ಮಕ್ಕಳು ಮಾತ್ರ. ಎಸ್ಪಿ, ಬಿಎಸ್ಪಿ, ಜೆಡಿಯುಗಳಿಗೆ ಮತದಾರ ಚರಮ ಗೀತೆ ಹಾಡಿಬಿಟ್ಟಿದ್ದಾನೆ. ಬಂ ಸಿಂ ಗಳಿಬ್ಬರೂ ಢಂ ಆಗಿ ಹೋಗಿದ್ದಾರೆ. ಬಿಜೆಪಿಯ ಗೆಲುವಿನ ಹಿಂದೆ ಅನುಕಂಪವಿದೆ, ಹಣದ ಪ್ರಭಾವವಿದೆ, ಲಿಂಗಾಯಿತರ ಸ್ವಜಾತಿ ಪ್ರೇಮವಿದೆ, ಹಿಂದೂವಾದಿಗಳ ಒಗ್ಗಟ್ಟಿದೆ, ಎಲ್ಲಕ್ಕಿಂತ ಹೆಚ್ಚಾಗಿ ಜೈಟ್ಲಿ ಎಂಬ ಚುನಾವಣಾ ಚಾಣಾಕ್ಷನ ತಂತ್ರಗಾರಿಕೆ ಇದೆ. ಒಟ್ಟಿನಲ್ಲಿ ಸಮೀಕ್ಷೆ ನಡೆಸಿದ ಎಲ್ಲ ಮಾಧ್ಯಮ ಮತ್ತು ಸಂಸ್ಥೆಗಳು ಪಾಠ ಕಲಿತಿವೆ. ಜೈಟ್ಲಿ ಜಾದು ಮುಂದೆ ಶಿರಸಾಸನ ಹಾಕುತ್ತಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X