ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವೇರಿಯಲ್ಲಿ ಗೋಲಿಬಾರ್, ಒಬ್ಬ ರೈತನ ಬಲಿ

By Staff
|
Google Oneindia Kannada News

North Karnataka ಹಾವೇರಿ, ಜೂ. 10 : ಬಿತ್ತನೆಬೀಜ ಮತ್ತು ರಸಗೊಬ್ಬರ ಕೊರತೆ ಖಂಡಿಸಿ ಪ್ರತಿಭಟನೆಗಳು ಮುಂದೆವರೆದಿವೆ. ಇಂದು ನಗರದಲ್ಲಿ ನಡೆದ ರೈತರ ಪ್ರತಿಭಟನೆ ಅಕ್ಷರಶಃ ಹಿಂಸಾರೂಪಕ್ಕೆ ತಿರುಗಿದೆ. ಕೆಎಸ್ಆರ್ ಪಿ ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿದ ರೈತರ ಗುಂಪನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದು, ಇದರಿಂದ ಒಬ್ಬ ರೈತ ಮೃತಪಟ್ಟಿದ್ದಾನೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ. ಹಾಗೂ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ರೊಚ್ಚಿಗೆದ್ದ ರೈತರು ನಾಲ್ಕು ಬಸ್ಸುಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಲಾಠಿ ಪ್ರಹಾರ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಾದ್ಯಂತ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

ರಸಗೊಬ್ಬರಕ್ಕಾಗಿ ಕಳೆದ ಎಂಟು ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆಗಳು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಸೋಮವಾರ ಇದೇ ಕಾರಣಕ್ಕೆ ಹೊತ್ತಿ ಉರಿದಿದ್ದು ಧಾರವಾಡ, ಇಂದು ಅದೇ ಪರಿಸ್ಥಿತಿ ಹಾವೇರಿಗೆ ವರ್ಗಾವಣೆಯಾಗಿದೆ. ಜಿಲ್ಲೆಯ ಬಂಕಾಪುರ, ಶಿಗ್ಗಾಂವಿ, ರಾಣೆಬೆನ್ನೂರು, ಮೋಟೆಬೆನ್ನೂರಿನಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ತಾಳಿವೆ.

ಮಧ್ಯಾಹ್ನದ ನಂತರ ಹಾವೇರಿಯಲ್ಲಿ ಪ್ರತಿಭಟನೆ ಕಾವು ತೀವ್ರಗೊಂಡಿತು. ರೈತರು ಕಲ್ಲ ತೂರಾಟ ಆರಂಭಿಸಿದರು. ತಡೆಯಲು ಪೊಲೀಸರು ಮುಂದಾದಾಗ ಉದ್ರಿಕ್ತ ರೈತರ ಗುಂಪು ಪೊಲೀಸರ ಮೇಲೆ ದಾಳಿ ನಡೆಸಿದರು. ಇದರಿಂದ ರೈತರು ಮತ್ತು ಪೊಲೀಸರ ನಡುವೆ ತೀವ್ರವಾದ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ರೈತರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಗುಂಪು ಚದುರಿಸಲು ಹಾಗೂ ಪ್ರಾಣ ಭಯದಿಂದ ಪೊಲೀಸರು ರೈತರ ಮೇಲೆ ಗುಂಡು ಹಾರಿಸಿದ್ದಾರೆ.

ರೋಹಿಣೆ ಮಳೆಗೆ ಬಿತ್ತನೆ

ರಸಗೊಬ್ಬರಕ್ಕಾಗಿ ರೈತರು ಪ್ರತಿಭಟನೆಗೆ ಇಳಿಯಲು ಮುಖ್ಯ ಕಾರಣ ಉತ್ತಮ ತತಿಗೆ ಬಿತ್ತನೆ ಮಾಡಬೇಕು ಎನ್ನುವುದು ನಿಯಮವಿದೆ. ರೋಹಿಣೆ ಮಳೆಗೆ ಬಿತ್ತನೆ ಮಾಡಿದರೆ ಅರ್ಧ ಬೆಳೆ ಬೆಳೆದ ಹಾಗೆ. ಈ ಕಾರಣಕ್ಕಾಗಿ ರೈತರು ಬೀಜ ಮತ್ತು ರಸಗೊಬ್ಬರಕ್ಕೆ ನೀಡಬೇಕೆಂದು ಒತ್ತಾಸಿಯಿದ್ದಾರೆ. ಈಗಾಗಲೇ ಮೃಗಶಿರಾ ಮಳೆ ಮುಗಿಯುತ್ತಾ ಬಂದರೂ ಬೀಜಗಳು ಸಿಗುತ್ತಿಲ್ಲ. ಬೆಳೆಯಲು ಬೀಜ ಕೊಡಿ, ರಸಗೊಬ್ಬರಗಳನ್ನು ಕೊಡಿ ಎನ್ನುವುದು ಅನ್ನದಾತರ ಬೇಡಿಕೆ.

ಕೃಷಿ ಸಚಿವರ ಪ್ರತಿಕ್ರಿಯೆ
ಮುಂಗಾರು ಹಂಗಾಮಿಗೆ ರಾಜ್ಯಕ್ಕೆ 110 ಲಕ್ಷ ಟನ್ ರಸಗೊಬ್ಬರ ಬೇಕಿದೆ. ಈಗಾಗಲೇ ಸರ್ಕಾರ 1,21,512 ಲಕ್ಷ ಟನ್ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಆದರೆ ವಿತರಣೆಯಲ್ಲಿ ವಿಳಂಬವಾಗಿದಿಯೇ ಹೊರತು, ಬೇರೆ ಏನು ಅಲ್ಲ. ರೈತರ ಸ್ವಲ್ಪ ಸಹಕರಿಸಬೇಕು. ಇದೇ ತಿಂಗಳ 30ರೊಳಗೆ ಸಮರ್ಪಕವಾಗಿ ರಸಗೊಬ್ಬರ ವಿತರಣೆಯನ್ನು ಮಾಡುತ್ತೇವೆ ಎಂದು ಸಚಿವ ಎಸ್. ಎ. ರವೀಂದ್ರನಾಥ್ ಭರವಸೆ ನೀಡಿದರು. ಸದ್ಯಕ್ಕೆ 400 ಟನ್ ರಸಗೊಬ್ಬರವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಸಚಿವರು ಹೇಳಿದರು.

ರಸಗೊಬ್ಬರ ವಿತರಣೆಯಲ್ಲಿನ ಲೋಪವನ್ನು ತಿಳಿದುಕೊಳ್ಳಲು ಪ್ರಯತ್ನಿಸಲಾಗಿದ್ದು, ತಪ್ಪಿತಸ್ಥ ಅಧಿಕಾರಿಗಳಿಗೆ ಉಗ್ರ ಶಿಕ್ಷೆ ನೀಡಲು ಸರ್ಕಾರ ಹಿಂದೆ ಮುಂದು ನೋಡುವುದಿಲ್ಲ ಎಂದು ಅವರು ಹೇಳಿದ್ದಾರೆ. ರೈತರ ಸಮಾಧಾನದಿಂದ ಇದ್ದರೇ ಅಗತ್ಯವಿರುವ ರಸಗೊಬ್ಬರವನ್ನು ಶೀಘ್ರದಲ್ಲಿ ಒದಗಿಸುತ್ತೇವೆ ಎಂದು ಮನವಿ ಮಾಡಿಕೊಂಡರು.

ರೈತ ಮುಖಂಡರ ಆರೋಪ
ರಸಗೊಬ್ಬರ ಕೊರತೆಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸುವ ಸ್ಥಳೀಯ ರೈತ ಮುಖಂಡರು, ರೈತ ಅನ್ನದಾತ, ನೇಗಿಲಯೋಗಿ ಎಂದು ಅಟ್ಟಕ್ಕೇರಿಸಿದ್ದಾರೆ. ಆತ ಎಂದಿಗೂ ಹಿಂಸೆಗೆ ಮನಸ್ಸು ಮಾಡುವವನಲ್ಲ. ಆತನಿಗೆ ಬೇಕಿರುವುದು ಬೀಜ ಮತ್ತು ರಸಗೊಬ್ಬರ ಮಾತ್ರ. ಪ್ರತಿಭಟನೆ ಅಲ್ಲ ಎಂದು ಕಿಡಿ ಕಾರಿದ್ದಾರೆ. ಮುಂಗಾರು ಮಳೆಗೆ ರೈತರಿಗೆ ಬಿತ್ತನೆ ಬೀಜ ಬೇಕು. ಅದನ್ನು ಒದಗಿಸುವುದು ಸರ್ಕಾರ ಕರ್ತವ್ಯ ಎಂದು ಹೇಳುತ್ತಾರೆ. ಹಸಿರು ಕ್ರಾಂತಿ ಹೆಸರಿನಲ್ಲಿ ಸರ್ಕಾರ ಸಂಪೂರ್ಣ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಪಕ್ಷ ನಾಯಕ ಖರ್ಗೆ ಕಿಡಿ
ರಾಜ್ಯದಲ್ಲಿ ರಸಗೊಬ್ಬರ ವಿತರಣೆ ವಿಳಂಬವಾಗಲಿಕ್ಕೆ ರಾಜ್ಯ ಸರ್ಕಾರ ವೈಫಲ್ಯವೇ ಕಾರಣ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ರೈತರು ರಸಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸಿದರೂ, ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅನೇಕ ಸಾವು ನೋವುಗಳು ಸಂಭವಿಸಿದೆ. ಆದರೂ ಕೂಡಾ ಸರ್ಕಾರ ರಸಗೊಬ್ಬರ ದಾಸ್ತಾನು ಇದೆ ಎನ್ನುತ್ತದೆ ಹೊರತು, ಸಮರ್ಪಕವಾಗಿ ವಿತರಣೆ ಯಾಕೆ ಮಾ‌ಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ ಮೇಲೆ ಪ್ರಮಾಣ ವಚನ ಸ್ವೀಕರಿಸಿದರೆ ಸಾಲದು, ಆತನ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಖರ್ಗೆ ಹರಿಹಾಯ್ದರು.

ಸಿಎಂ ಪ್ರತಿಕ್ರಿಯೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಸಗೊಬ್ಬರ ಅಭಾವ ಕುರಿತು ಪ್ರತಿಕ್ರಿಯಿಸಿದ್ದು, ಧಾರವಾಡ, ಹಾವೇರಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ರೈತರು ಹೆಸರಿನಲ್ಲಿ ಹಿತಾಸಕ್ತಿಗಳು ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಿ.ಸಿ.ಪಾಟೀಲ್ ಅನಿಸಿಕೆ
ಸರ್ಕಾರದ ವೈಪಲ್ಯವೇ ಇದಕ್ಕೆ ಸಾಕ್ಷಿ. ಈ ಎಲ್ಲ ಘಟನೆಗೆ ಸರ್ಕಾರವೇ ಹೊಣೆ ಎಂದು ಹಿರೇಕೇರೂರು ಶಾಸಕ ಬಿ.ಸಿ.ಪಾಟೀಲ್ ಆರೋಪಿಸಿದ್ದಾರೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ರೈತರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುವುದು, ಮತ ಗಳಿಸುವ ಗಿಮಕ್ ಅಷ್ಟೆ ಎನ್ನುವುದು ಇಂದು ನಡೆದ ಘಟನೆ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಬಸವರಾಜ ಬೊಮ್ಮಾಯಿ - ಜಲಸಂಪನ್ಮೂಲ ಸಚಿವ
ಸರ್ಕಾರ ರಸಗೊಬ್ಬರ ವಿತರಣೆಗೆ ಸಿದ್ಧವಿದೆ. ಪ್ರತಿಭಟನೆಗಳು ಕೆಲ ರಾಜಕೀಯ ಪಕ್ಷಗಳ ಕುಮ್ಮಕ್ಕಿನಿಂದ ಉದ್ಭವವಾಗಿದೆ.ರೈತರು ಸಮಾಧಾನವಾಗಿದ್ದು, ಸಹಕರಿಸಿದರೆ ಆತೀ ಶೀಘ್ರದಲ್ಲಿ ಅಗತ್ಯ ರಸಗೊಬ್ಬರ ವಿತರಣೆ ಮಾಡುತ್ತೇವೆ ಎಂದು ಹೇಳಿದರು. ರೈತರ ಮೇಲಿನ ಗೋಳಿಬಾರ್ ನ್ನು ತನಿಖೆ ನಡೆಸಿ ಪೊಲೀಸರ ತಪ್ಪಿದ್ದಲ್ಲಿ ಶಿಕ್ಷೆ ನೀಡಲಾಗುವುದು ಎಂದು ಹೇಳಿದರು.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್
ಅನ್ನ ನೀಡುವ ಅನ್ನದಾತನನ್ನು ಗುಂಡಿನಿಂದ ಕೊಲ್ಲುವುದು ನೀಚ ಕೆಲಸ . ಇದಕ್ಕೆ ಸರ್ಕಾರವೇ ಹೊಣೆ. ಶೀಘ್ರದಲ್ಲಿ ರಸಗೊಬ್ಬರ ವಿತರಣೆ ಮಾಡದಿದ್ದರೆ ರೈತ ಸಂಘದ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X