ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ: ಟೆಕ್ಕಿಗಳಿಗೆ ಬೆಟರ್ ಲಕ್ ನೆಕ್ಸ್ಟ್ ಟೈಮ್!

By Staff
|
Google Oneindia Kannada News

ಬೆಂಗಳೂರು, ಮೇ 27 : ರಾಜ್ಯ ವಿಧಾನಸಭಾ ಚುನಾವಣೆಗೆ ಹೈಟೆಕ್ ಸ್ಪರ್ಶ ನೀಡಿದ್ದ,ಲೋಕ್ ಪರಿತ್ರಾಣ್ ಪಕ್ಷ ಹಾಗೂ ಐಟಿ ರಂಗದ ಇತರ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲವು ಸಾಧಿಸುವಲ್ಲಿ ಯಶಸ್ವಿಯಾಗಿಲ್ಲ.

ಮತದಾರರು ಐಟಿರಂಗದ ಅಭ್ಯರ್ಥಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಚುನಾವಣೆಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ವೆಬ್ ಸೈಟ್ ಮೂಲಕ ಪ್ರಚಾರ, ಎಸ್ ಎಂಎಸ್ ಪ್ರಚಾರವನ್ನು ಲೋಕ್ ಪರಿತ್ರಾಣ ಸೇರಿದಂತೆ ಹಲವಾರು ಟೆಕ್ಕಿಗಳು ಮಾಡಿದರು. ಇದು ನಂತರ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೂ ಹಬ್ಬಿತು. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಹದೇವಪುರ ಕ್ಷೇತ್ರದ ಅಭ್ಯರ್ಥಿ ಅರವಿಂದ ಲಿಂಬಾವಳಿ ವೆಬ್ ಸೈಟ್ ಮೂಲಕ ಪ್ರಚಾರ ಮಾಡಲು ಆರಂಭಿಸಿ ಯಶಸ್ಸನ್ನು ಕಂಡರು. ಕಾಂಗ್ರೆಸ್ ಪಕ್ಷದ ವೆಬ್ ಸೈಟ್ ಗೆ ಕೂಡ ತಿಂಗಳಿಗೆ ಲಕ್ಷಕ್ಕೂ ಅಧಿಕ ಜನ ಬಂದು ಹೋಗಿದ್ದಾರೆ ಎಂದು ಕೆಪಿಸಿಸಿಯ ವಕ್ತಾರ ಉಗ್ರಪ್ಪ ಹೇಳಿದ್ದಾರೆ.

ವೆಬ್ ಮೂಲಕ ಪ್ರಚಾರ ಆರಂಭಿಸಿದವರಲ್ಲಿ ಐಟಿ ರಂಗದ ಎನ್ನಾರೈ ರವಿಕೃಷ್ಣಾರೆಡ್ಡಿ ಪ್ರಮುಖರು. ಇವರು ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಜನರಿಂದ ಹಣ ಪಡೆದು, ಅದನ್ನು ಜನತೆಗೆ ತಲುಪಿಸುತ್ತೇನೆ ಎಂದು ನುಡಿದಿದ್ದ ರವಿರೆಡ್ಡಿ ಅವರು, ವೆಬ್ ಸೈಟ್ ಮೂಲಕ ಹಾಗೂ ಇತರ ಮಾಧ್ಯಮಗಳ ಮೂಲಕ ಸುಮಾರು ನಾಲ್ಕೂವರೆ ಲಕ್ಷ ರು (ಸ್ವಂತವಾಗಿ 23,000 ರು)ಸಂಗ್ರಹಿಸಿದರು. ಅಷ್ಟು ಹಣವನ್ನು ಚುನಾವಣೆಗೆ ಬಳಸಿ, ಚುನಾವಣಾ ಆಯೋಗ ನೀಡಿರುವ 10 ಲಕ್ಷ ರು ಮಿತಿಯನ್ನು ದಾಟಿಲ್ಲ ಎಂದು ಹೆಮ್ಮೆಯಿಂದ ಹೇಳಿದ್ದರು. ಮೌಲ್ಯಾಗ್ರಹದ ಹೆಸರಿನಲ್ಲಿ ಮೂರು ದಿನಗಳ ಸಾಂಕೇತಿಕ ಉಪವಾಸ ಕೈಗೊಂಡು,ಭ್ರಷ್ಟ ರಾಜಕೀಯದ ವಿರುದ್ಧ ಸಮರಕ್ಕೆ ನಾಂದಿ ಹಾಡಿದರು.

ಆದರೆ, ಮತದಾನದ ಸಮಯದಲ್ಲಿ ಚುನಾವಣಾ ಆಯೋಗ ಮಾಡಿದ ಗೊಂದಲದಿಂದ ಅವರು ಬಯಸಿದ್ದ 'ನಗಾರಿ' ಚಿನ್ಹೆ ಬದಲಾಗಿ' ತಬಲ' ಚಿನ್ಹೆ ಕಾಣಿಸಿಕೊಂಡಿತು. ಇದರಿಂದ ಅನ್ಯಾಯವಾಗಿದೆ. ಮರು ಮತದಾನ ಮಾಡಿಸಬೇಕು ಎಂದು ಆಯೋಗಕ್ಕೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಒಟ್ಟಿನಲ್ಲಿ ಪ್ರಜ್ಞಾವಂತ ಮತದಾರರನ್ನು ಎಚ್ಚರಿಸುವಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಸಾಧಿಸಿದ ತೃಪ್ತಿಯಿದೆ. ವ್ಯವಸ್ಥೆಯ ಸುಧಾರಣೆಗೆ ಇದು ಮೊದಲ ಹೆಜ್ಜೆ ಎಂದು ಹೇಳಿ ರವಿ ರೆಡ್ಡಿ ಅಮೆರಿಕದ ತಮ್ಮ ನಿವಾಸಕ್ಕೆ ತೆರಳಿದರು. ಇವರು ಜಯನಗರ ಕ್ಷೇತ್ರದಲ್ಲಿ ಗಳಿಸಿದ ಮತ 244.

ಲೋಕ್ ಪರಿತ್ರಾಣದಿಂದಜಯನಗರದಲ್ಲಿ ಸ್ಪರ್ಧಿಸಿದ್ದ ಮತ್ತೊಬ್ಬ ಐಟಿ ಅಭ್ಯರ್ಥಿ ಅನುಜ್ ಕುಮಾರ್ ಪರಿಸ್ಥಿತಿ ಕೂಡ ಇದರಿಂದ ಹೊರತಾಗಿಲ್ಲ. ಇವರು ಚುನಾವಣೆ ವೆಚ್ಚ ಸುಮಾರು 30 ಸಾವಿರ ರು. ಆದರೆ ಗಳಿಸಿದ ಮತಗಳು 474. ಪ್ರಚಾರ ವೈಖರಿಯೂ ಭಿನ್ನ. ದಿನಾಗಲೂ ಕಚೇರಿಯಿಂದ ತಮ್ಮ ಹಿನ್ನೆಲೆ ಹಾಗೂ ಉದ್ದೇಶದ ಪ್ರಣಾಳಿಕೆಯ ಪ್ರಿಂಟ್ ಔಟ್ ತೆಗೆದುಕೊಂಡು ಜಯನಗರದ ಎಲ್ಲಾ ಪಾರ್ಕ್ ಗಳಲ್ಲಿ ಕುಳಿತು ಜನರೊಡನೆ ಸಂಭಾಷಣೆ ನಡೆಸಿ, ಮತಯಾಚಿಸಿದ್ದಾರೆ. ಜೆ.ಪಿ .ನಗರದ ನಿವಾಸಿಯಾಗಿರುವ ಇವರು ಬಿಹಾರ ಮೂಲದವರು. ಮುಂದೆ ಬಿಹಾರಕ್ಕೆ ತೆರಳಿ ಅಲ್ಲಿ ಕೂಡ ಚುನಾವಣೆ ಸ್ಪರ್ಧಿಸುವ ಆಲೋಚನೆಯಲ್ಲಿದ್ದಾರೆ.

ಇವರಂತೆ ಕಣಕ್ಕೆ ಇಳಿದ ಐಟಿ ಅಭ್ಯರ್ಥಿಗಳ ಮತಗಳಿಕೆ ಮೂರಂಕಿಯನ್ನು ದಾಟಲಿಲ್ಲ ಎಂಬುದು ವಿಷಾದನೀಯ ಸತ್ಯ. ಅಸೆಂಬ್ಲಿ ಪ್ರವೇಶ ಬಯಸಿದ್ದ ಟೆಕ್ಕಿಗಳು:

ಬಿ.ಟಿ.ನಾಗಣ್ಣ(ಕೆ.ಆರ್.ಪುರ-358 ಮತಗಳು) ಬಿ.ಇ .ಮೆಕ್ಯಾನಿಕಲ್ (ಎಸ್ ಎಸ್ ಐಟಿ, ತುಮಕೂರು), ಮಾಡ್ಯುಲರ್ ಕಿಚನ್ ನಲ್ಲಿ ಉದ್ಯೋಗ. ಎನ್. ಕೃಷ್ಣಕುಮಾರ್(ಗೋವಿಂದರಾಜನಗರ-403ಮತಗಳು), ನ್ಯೂಯಾರ್ಕ್ ವಿವಿಯಿಂದ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ನಲ್ಲಿ ಸ್ನಾತಕೋತ್ತರ ಪದವಿ ಕಮ್ಯಾಂಡರ್, ಬಿ ಬಿ ಕಿಲಾರಿ(ಸರ್ವಜ್ಞನಗರ-282 ಮತಗಳು), ಭಾರತೀಯ ನೌಕಾ ದಳದಲ್ಲಿ ವಿವಿಧ ಇಂಜಿನಿಯರಿಂಗ್ ಹುದ್ದೆಯಲ್ಲಿದ್ದವರು. ನಳಿನ್ ಜೈನ್ (ಗಾಂಧಿನಗರ-108 ಮತಗಳು), ಡಿಫಾರ್ಮಾ. ಸ್ವಂತ ಔಷಧ ಉತ್ಪಾದನಾ ಕಂಪನಿ ಹೊಂದಿದ್ದಾರೆ.

ಡಾ. ಕೇಶವಕುಮಾರ್(ಶಾಂತಿನಗರ-436 ಮತಗಳು), ದಂತ ವೈದ್ಯ, ಅಂಬೇಡ್ಕರ್ ಮೆಡಿಕಲ್ ಕಾಲೇಜು. ಚಿನ್ನಪ್ಪ ಗೌಡ (ಹೆಬ್ಬಾಳ-329ಮತಗಳು), ಸಿಎ ಪದವೀಧರ. ಪ್ರಮೋದ್ ಹಳಕಟ್ಟಿ, (ಪದ್ಮನಾಭನಗರ-208 ಮತಗಳು), ಬಿಕಾಂ, ಆಡಿಟರ್. ಪಿ. ಕೆ. ಶಾನುಭಾಗ್(ರಾಜಾಜಿನಗರ-118), ಬಿ.ಇ. ಎಂ.ಟೆಕ್ ಐಐಟಿ ಕಾನ್ ಪುರ್ . ಪ್ರಭಾಕರ ಹೊನ್ನಾಳಿ(ಬಿಟಿಎಂ ಲೇಔಟ್-437), ಬಿಇ, ಸುರತ್ಕಲ್, ಬೆಂಗಳೂರಿನ ಎಂಎನ್ ಸಿ ಕಂಪೆನಿ ಉದ್ಯೋಗಿ ಅನುಜ್ ಕುಮಾರ್, ಜಯನಗರ, ಬಿಇ, ದಾವಣಗೆರೆ, ಬೆಂಗಳೂರಿನ ಎಂಎನ್ ಸಿ ಕಂಪೆನಿ ಉದ್ಯೋಗಿ. ಇದಲ್ಲದೆ ದಿ.ಗಾಯಕ ಜಿ.ವಿ. ಅತ್ರಿ ಅವರ ಸೋದರ ಜಿ. ಬಾಲಕೃಷ್ಣ ಅತ್ರಿ (ಐಟಿ ಉದ್ಯೋಗಿ-699ಮತಗಳು)ಪದ್ಮನಾಭನಗರ ಕ್ಷೇತ್ರದಲ್ಲಿ ಬಿಎಸ್ ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X