ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಂತ್ರ ಸ್ಥಿತಿ ಉಂಟಾದರೆ ಮತದಾರನೇ ನೇರ ಹೊಣೆಗಾರ

By Staff
|
Google Oneindia Kannada News

ಬೆಂಗಳೂರು, ಮೇ 23: ರಾಜ್ಯ ವಿಧಾನಸಭೆ ಚುನಾವಣೆ ಅಂತ್ಯಗೊಂಡಿದ್ದು, ವಿವಿಧ ಮಾಧ್ಯಮಗಳು ತನ್ನದೇ ಆದ ರೀತಿಯಲ್ಲಿ ಫಲಿತಾಂಶದ ಸಮೀಕ್ಷೆ ನಡೆಸಿ ಅಂಕಿಅಂಶಗಳನ್ನು ಬಹಿರಂಗಗೊಳಿಸಿವೆ. ಭಾರತೀಯ ಜನತಾ ಪಕ್ಷ ಸರಳ ಬಹುಮತಕ್ಕೆ ತೀರಾ ಸನಿಹದಲ್ಲಿರುವ ಪಕ್ಷವಾಗಿದೆ. ಜತೆಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಕಾಂಗ್ರೆಸ್ ಮುಳುಗುತ್ತಿರುವ ದೋಣಿಯಂತೆ ಕಂಡುಬಂದಿದ್ದರೆ, ಸರ್ಕಾರ ರಚನೆಯ ಬೀಗ ಜೆಡಿಎಸ್ ಕೈಯಲ್ಲಿದೆ ಎನ್ನುವ ಕೆಟ್ಟ ವಾಸನೆ ದಟ್ಟವಾಗಿದೆ.

ಕನ್ನಡ ಪ್ರಭ-ಸುವರ್ಣ ನ್ಯೂಸ್ ವಾಹಿನಿ ಮತ್ತು ಸಿ-ಫೋರ್ ಸಂಸ್ಥೆ ನಡೆಸಿದ ಚುನಾವಣೆ ಪೂರ್ವ ಮತ್ತು ನಂತರದ ಸಮೀಕ್ಷೆಯಲ್ಲಿ ಭಾರತೀಯ ಜನತಾ ಪಕ್ಷ ಸರಳ ಬಹುಮತದ ಸಮೀಪವಿದೆ. ಒಂದೊಮ್ಮೆ ಸಮೀಕ್ಷೆಯ ಪ್ರತಿಶತ 3 ಮತಗಳನ್ನು ಕಳೆದರೆ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಲಿದೆ. ಬಿಜೆಪಿ ನಾಯಕರು ಕೈಕೈಹಿಚುಕಿಕೊಳ್ಳುವ ಸಂದರ್ಭ ಒದಗಿಬರಬಹುದು.

ಈ ಮೂರು ಸಂಸ್ಥೆಗಳು ನಡೆಸಿದ ಸಮೀಕ್ಷೆ ಪ್ರಕಾರ ಭಾರತೀಯ ಜನತಾ ಪಕ್ಷಕ್ಕೆ 114, ಕಾಂಗ್ರೆಸ್ ಗೆ-74 ಮತ್ತು ಜೆಡಿಎಸ್ ಗೆ -40 ಸೀಟುಗಳು ಲಭಿಸಲಿವೆ ಎಂದು ತಿಳಿಸಿದೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ , ಕರಾವಳಿ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಈ ಭಾರಿಯೂ ಕೆಟ್ಟ ಪ್ರದರ್ಶನದಿಂದ ತೀರಾ ಶೋಚನೀಯ ಸ್ಥಿತಿಯಲ್ಲಿದೆ ಎನ್ನಲಾಗಿದೆ. ಅನೇಕ ನಾಯಕರು ಪಕ್ಷ ತೊರೆದರೂ ದೇವೇಗೌಡರ ಜೆಡಿಎಸ್ ಮತ್ತದೇ ಕಿಂಗ್ ಮೇಕರ್ ಸ್ಥಾನವನ್ನು ಅಲಂಕರಿಸುವ ಎಲ್ಲ ಸಾಧ್ಯತೆಗಳಿವೆ.

ಎನ್ ಡಿಟಿವಿ ನಡೆಸಿದ ಸಮೀಕ್ಷೆ ಪ್ರಕಾರ ಭಾರತೀಯ ಜನತಾ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ. ಬಿಜೆಪಿಗೆ -115, ಕಾಂಗ್ರೆಸ್ ಗೆ-75 ಮತ್ತು ಜೆಡಿಎಸ್ ಗೆ -55 ಸೀಟುಗಳು ಬರುತ್ತವೆ ಎಂದು ಲೆಕ್ಕ ಹಾಕಿದೆ. ಮೇಲೆ ಹೇಳಿದ ಹಾಗೆ ಇಲ್ಲಿಯೂ ಕೂಡ ಅತಂತ್ರ ಸರ್ಕಾರದ ವಾಸನೆ ದಟ್ಟವಾಗಿದೆ.

ಇನ್ನು ಸಿಎನ್ಎನ್ -ಐಬಿಎನ್ ಮತ್ತು ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಸಹಯೋಗದಲ್ಲಿ ನಡೆಸಲಾಗಿರುವ ಸಮೀಕ್ಷೆಯ ತದ್ವಿರುದ್ಧ ಫಲಿತಾಂಶ ನೀಡಿದೆ. ಇಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಕಾಂಗ್ರೆಸ್ ಗೆ -114, ಬಿಜೆಪಿಗೆ-79 ಮತ್ತು ಜೆಡಿಎಸ್ ಗೆ- 45 ಸೀಟುಗಳು ದೊರಕಲಿವೆ ಎಂದು ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ. ಇಲ್ಲಿ ಪಕ್ಷ ಬದಲಾವಣೆಯಾಗಿದೆ ಹೊರತು ಸಂಖ್ಯಾ ದೃಷ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದನ್ನ ಗಮನಿಸಬೇಕಾದ ಸಂಗತಿ. ಮತ್ತೆ ಅತಂತ್ರ ಸರ್ಕಾರದತ್ತ ಅನಿವಾರ್ಯವಾಗಿ ಮುಖಮಾಡಬೇಕಾದ ಎಲ್ಲ ಲಕ್ಷಣಗಳು ಗೋಚರಿಸುತ್ತದೆ.

ಆದರೆ ಕಳೆದ ಐವತ್ತು ವರ್ಷಗಳಿಂದ ನಡೆಸಿದ ಸಮೀಕ್ಷೆಗಳ ಬಗ್ಗೆ ಹೇಳುವುದಾದರೆ, ಯಾವ ಸಮೀಕ್ಷೆಗಳು ಯಶಸ್ವಿಯಾಗಿಲ್ಲ. ಉತ್ತರ ಪ್ರದೇಶ, ಗುಜರಾತ, ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಮೇಲೆ ಗಮನ ಹರಿಸುವುದಾದರೆ ಸಮೀಕ್ಷೆಗಳ ಪ್ರಕಾರ ಫಲಿತಾಂಶ ಬಂದಿಲ್ಲ. ಕರ್ನಾಟಕದ ಚುನಾವಣೆ ಕೂಡಾ ಇದರಿಂದ ಹೊರತಾಗಿಲ್ಲ. ಮತದಾರನ ಕೊನೆ ಹಂತದ ಮನಸ್ಥಿತಿ ತಿಳಿದುಕೊಳ್ಳುವುದು ತುಂಬಾ ಕಷ್ಟದ ಕೆಲಸ. ಆದ್ದರಿಂದ ಸಮೀಕ್ಷೆಗಳ ಫಲಿತಾಂಶ ಅಂತಿಮವಲ್ಲ ಎನ್ನುವುದು ಸ್ಪಷ್ಟವಾದ ಮಾತು.

ಆದರೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪ್ರಶ್ನಾತೀತ ನಾಯಕರಾದ ಎಲ್.ಕೆ.ಅಡ್ವಾಣಿ, ಸೋನಿಯಾ ಗಾಂಧಿ ಮತ್ತು ಎಚ್.ಡಿ.ದೇವೇಗೌಡ ತಮ್ಮ ವಿವಿಧ ಪ್ರದೇಶಗಳ ಪ್ರಚಾರ ಭಾಷಣದಲ್ಲಿ ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈಗ ಅತಂತ್ರ ಸ್ಥಿತಿ ನಿರ್ಮಾಣದ ಸಾಧ್ಯತೆಗಳಿವೆ. ಸಾರ್ವಜನಿಕವಾಗಿ ಮಾತು ಕೊಟ್ಟ ಈ ಮೊರು ಮಹಾನ್ ನಾಯಕರು ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರಯೇ, ಅಥವಾ ಅಧಿಕಾರಕ್ಕಾಗಿ ಜನರಿಗೆ ಸುಳ್ಳು ಭರವಸೆ ನೀಡಿ ಮತ ಲೂಟಿ ಮಾಡಿದರಾ ? ಈ ಪ್ರಶ್ನೆಗೆ ಭಾನುವಾರದ ನಂತರ ಉತ್ತರ ಸಿಗಲಿದೆ. ಮಾಡಿದ್ದುಣ್ಣೋ ಮಹರಾಯ ಎಂಬ ಗಾದೆಯಂತೆ ಅತಂತ್ರ ಸ್ಥಿತಿ ಉಂಟಾದರೆ ರಾಜ್ಯಕ್ಕೆ ಬಹು ದೊಡ್ಡ ನಷ್ಟವಾಗುವುದಂತೂ ಸೂರ್ಯನಷ್ಟೆ ಸತ್ಯ. ಇದು ಪಕ್ಷಗಳ ಸೋಲಲ್ಲ, ಮತದಾರನ ಸೋಲು ಎಂದು ಖಡಾಖಂಡಿತವಾಗಿ ಹೇಳಬಹುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X