ದಿಲ್ಲಿಯಲ್ಲಿ ಆರ್ಎನ್ ಜಯಗೋಪಾಲರಿಗೆ ಭಾವಪೂರ್ಣ ಶ್ರದ್ಧಾಂಜಲಿ
ನವದೆಹಲಿ, ಮೇ 20: ಚೆನ್ನೈಯಲ್ಲಿ ಮೇ 19ರಂದು ನಿಧನರಾದ ಕನ್ನಡದ ಸುಪ್ರಸಿದ್ಧ ಚಲನಚಿತ್ರ ಗೀತರಚನಕಾರ, ನಿರ್ದೇಶಕ, ನಟ, ಸಂಭಾಷಣೆಕಾರ ಆರ್.ಎನ್. ಜಯಗೋಪಾಲ್ ಅವರಿಗೆ ದಿಲ್ಲಿಯಲ್ಲಿ "ದೆಹಲಿ ಕನ್ನಡಿಗ" ಪತ್ರಿಕೆಯ ಆಶ್ರಯದಲ್ಲಿ ಕನ್ನಡ ಕಲಾವಿದರು, ಸಾಹಿತಿಗಳು, ಪ್ರಾಧ್ಯಾಪಕರು, ಕನ್ನಡ ಕಾರ್ಯಕರ್ತರು ಮೇ 20ರಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಗೀತರಚನಾರಂಗದಲ್ಲಿ ಹೊಸ ಅಧ್ಯಾಯ ಆರಂಭಿಸಿದ ಜಯಗೋಪಾಲ್ ಅವರು ತಮ್ಮದೇ ಆದ ಸರಳ ಹಾಗೂ ಆಡುಭಾಷೆಯ ಸಾವಿರದ ಆರುನೂರು ಹಾಡುಗಳನ್ನು ರಚಿಸಿ ಕನ್ನಡ ಸಿನಿಮಾರಂಗದಲ್ಲೇ ಇತಿಹಾಸ ನಿರ್ಮಿಸಿದ್ದಾರೆ. ಎಂಟು ಸಿನಿಮಾ ಹಾಗೂ ಇಪ್ಪತ್ತೆರಡು ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸಿ ಜಯಗೋಪಾಲ್ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನೂ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದು ಕರ್ನಾಟಕ ಕಲಾರಂಗಕ್ಕೆ ಕೀರ್ತಿ ತಂದಿದ್ದಾರೆಂದು "ದೆಹಲಿ ಕನ್ನಡಿಗ" ಪತ್ರಿಕೆಯ ಸಂಪಾದಕ ಬಾ. ಸಾಮಗ ಅವರು ಗಾನಗಾರುಡಿಗನನ್ನು ನೆನಪಿಸಿಕೊಂಡರು.
ನಟರಾಗಿ, ಸಂಭಾಷಣೆಕಾರರಾಗಿ ಸಿನಿಮಾ ರಂಗದ ಎಲ್ಲ ಕ್ಷೇತ್ರಗಳಲ್ಲೂ ಅನುಭವ ಪಡೆದಿದ್ದ ಜಯಗೋಪಾಲ್ ಅವರ ಸ್ಮಾರಕ ಕರ್ನಾಟಕ ಸರಕಾರ ಬೆಂಗಳೂರಿನಲ್ಲಿ ಕರ್ನಾಟಕ ಚಲನಚಿತ್ರ ಸಂಗ್ರಹಾಲಯವೊಂದನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದ ಸಾಮಗ ಅವರು ಜಯಗೋಪಾಲ್ ರಚಿಸಿದ ಗೀತೆಗಳ ಪುಸ್ತಕವನ್ನು ಪ್ರಕಟಿಸಿ ಎಲ್ಲರಿಗೂ ತಲುಪಿಸಬೇಕೆಂದು ಆಗ್ರಹಿಸಿದರು.
ಚೆನ್ನೈನಲ್ಲಿ ಕನ್ನಡ ಸಂಘ, ಶಾಲೆ ಸ್ಥಾಪಿಸಿ ಹೊರನಾಡಲ್ಲಿ ಕನ್ನಡ ಅಭಿವೃದ್ಧಿಗಾಗಿ ಕಂಕಣಬದ್ಧರಾಗಿ ಸೇವೆ ಸಲ್ಲಿಸಿದ ಜಯಗೋಪಾಲ್ ಅವರಿಗೆ ತಮಿಳುನಾಡು ಸರಕಾರ "ಕಲೈಮಾಮಣಿ" ಪ್ರಶಸ್ತಿ ನೀಡಿ ಗೌರವಿಸಿದೆ. ತಮಿಳುನಾಡು ಸರಕಾರ ಜಯಗೋಪಾಲ್ ನೆನಪಿಗೆ ಚೆನ್ನೈನ ರಸ್ತೆ ಅಥವಾ ಪಾರ್ಕ್ ಒಂದಕ್ಕೆ ಅವರ ಹೆಸರಿಡಬೇಕೆಂದು ಆಗ್ರಹಿಸಿದರು. "ದೆಹಲಿ ಕನ್ನಡಿಗ" ಪತ್ರಿಕೆ ದಿಲ್ಲಿಯಲ್ಲಿ ಜಯಗೋಪಾಲ್ ಗೌರವಾರ್ಥವಾಗಿ ಕನ್ನಡ ಚಲನಚಿತ್ರೋತ್ಸವವನ್ನು ಏರ್ಪಡಿಸುವುದೆಂದು ಸಾಮಗ ಪ್ರಕಟಿಸಿದರು. ಅದಲ್ಲದೆ, ಅವರ ಹೆಸರಿನಲ್ಲಿ ಕನ್ನಡದ ವಿಷಿಷ್ಟ ಗೀತರಚನಕಾರರಿಗೆ ಪ್ರಶಸ್ತಿಯನ್ನು ನೀಡಲಾಗುವುದೆಂದು ಸಾಮಗ ಪ್ರಕಟಿಸಿದರು.
ಕಲಾವಿದೆ ಕೆ. ರಂಗನಾಯಕಿ ಅವರು, ಸಿನಿಮಾ ರಂಗಕ್ಕೆ ಗಮನಾರ್ಹ ಕೊಡುಗೆ ಸಲ್ಲಿಸಿದ ಜಯಗೋಪಾಲ್ ಅವರ ಸ್ಮಾರಕ ರಾಷ್ಟ್ರಮಟ್ಟದಲ್ಲಿ ಕಾರ್ಯಕ್ರಮ ರೂಪಿಸಬೇಕೆಂದರಲ್ಲದೇ ಜಯಗೋಪಾಲರ ಸಾಹಿತ್ಯಶೈಲಿಯನ್ನು ಕನ್ನಡ ಚಲನಚಿತ್ರಕ್ಷೇತ್ರ ಆದರ್ಶವಾಗಿರಿಸಿಕೊಳ್ಳಬೇಕೆಂದರು.
(ದಟ್ಸ್‌ಕನ್ನಡ ವಾರ್ತೆ)
ಪೂರಕ ಓದಿಗೆ
ಎಲ್ಲಿಗೇ ಪಯಣ ಯಾವುದೋ ದಾರಿ: ಸಾಹಿತ್ಯ ನಮನ
ಚಿತ್ರಸಾಹಿತಿ ಆರ್.ಎನ್.ಜಯಗೋಪಾಲ್ ಇನ್ನಿಲ್ಲ












Click it and Unblock the Notifications