ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತಷ್ಟು ಜೀವಗಳನ್ನು ನುಂಗುತ್ತಲೇ ಇದೆ ಕಳ್ಳಭಟ್ಟಿ

By Staff
|
Google Oneindia Kannada News

ಬೆಂಗಳೂರು, ಮೇ 20 : ಕಳ್ಳಭಟ್ಟಿ ಸೇವಿಸಿ ಜವರಾಯನ ಪಾದ ಸೇರುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕೋಲಾರ, ಬೆಂಗಳೂರು, ಕೃಷ್ಣಗಿರಿ, ಹೊಸೂರಿನ ಜೊತೆಗೆ ಈಗ ಆನೇಕಲ್ ಮತ್ತು ಹೊಸಕೋಟೆಗಳು ಹೊಸದಾಗಿ ಸೇರ್ಪಡೆಯಾಗಿವೆ. ಕಳ್ಳಭಟ್ಟಿ ಸೇವಿಸಿ ಇದುವರೆಗೂ ಒಟ್ಟು 108 ಮಂದಿ ಅಮಾಯಕರು ಬಲಿಯಾಗಿದ್ದಾರೆ.

ಸೋಮವಾರ 80 ಮಂದಿಯನ್ನು ಆಹುತಿ ತೆಗೆದುಕೊಂಡ ಕಳ್ಳಭಟ್ಟಿ ಇಂದು ಮುಂಜಾನೆ ವೇಳೆಗೆ ಆನೇಕಲ್‌ನಲ್ಲಿ 9, ಹೊಸಕೋಟೆಯಲ್ಲಿ 7 ಮತ್ತು ಕೋಲಾರದಲ್ಲಿ 3 ಹೆಣಗಳನ್ನ್ನು ಉರುಳಿಸಿದೆ. ಕಳ್ಳಭಟ್ಟಿ ಸೇವಿಸಿ ಅಸ್ವಸ್ಥಗೊಂಡವರ ಸಂಖ್ಯೆ ಲೆಕ್ಕ್ಕಕ್ಕೆ ಸಿಗುತ್ತಿಲ್ಲ.

ಕೋಲಾರದಲ್ಲಿ ಕಳ್ಳಭಟ್ಟಿ ಕುಡಿದು ಸಾವಿಗೆ ಶರಣಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದುವರೆಗೂ ಕೋಲಾರದಲ್ಲಿ 26 ಮಂದಿ ಸಾವನ್ನಪ್ಪಿದ್ದಾರೆ. ಇಂದು ಕಳ್ಳಭಟ್ಟಿಗೆ ನರಸಾಪುರದ ನಾಗಮ್ಮ, ಟೇಕಲ್‌ನ ಮುನಿಯಪ್ಪ, ಬಂಗಾರಪೇಟೆಯ ಪುಷ್ಪರಾಜ್, ಗಾಂಧಿ, ಗೌರಮ್ಮ ಮತ್ತು ಎಂ.ರಾಮಚಂದ್ರ ಬಲಿಯಾಗಿದ್ದಾರೆ.

ಆನೇಕಲ್‌ನಲ್ಲಿ ಕಳ್ಳಭಟ್ಟಿ ಕುಡಿದು ಇದುವರೆಗೂ ಒಟ್ಟು 12 ಮಂದಿ ದುರಂತ ಸಾವನ್ನಪ್ಪಿದ್ದಾರೆ. ರಾತ್ರಿಯಿಂದ ಈಚೆಗೆ ತಿರುಮಗೊಂಡಹಳ್ಳಿಯ ಯಲ್ಲಪ್ಪ (65), ಸುದರ್ಶನ್ (40), ಪೆರುಮಾಳ್ (60), ಪುಟ್ಟಮ್ಮ (50), ಆದಿಗೊಂಡನ ಹಳ್ಳಿಯ ಮುನಿಯಮ್ಮ (45), ಪುಟ್ಟಪ್ಪ (48) ಕಳ್ಳಭಟ್ಟಿ ಸೇವಿಸಿ ಮೃತಪಟ್ಟಿದ್ದಾರೆ.

ತಿರುಮಗೊಂಡನ ಹಳ್ಳಿಯ ಸುತ್ತಮುತ್ತಲ ಗ್ರಾಮಗಳಿಗೆ ಡಿವೈಎಸ್‌ಪಿ, ಶಂಕರಪ್ಪ, ಇನ್ಸ್‌ಪೆಕ್ಟರ್ ಹೋಬಳೇಶ್ ಮತ್ತು ಪಿಎಸ್‌ಐಗಳಾದ ಜಗದೀಶ್, ನಿತೀಶ್ ಶಿಲ್ಪ, ವಿಜಯಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಕಳ್ಳಭಟ್ಟಿ ಸರಬರಾಜು ಮಾಡಿದ್ದಾರೆ ಎನ್ನಲಾದ ನಾಗೇಶ್, ಲೋಕೇಶ್ ಮತ್ತು ಮುನಿರೆಡ್ಡಿ ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಹೊಸಕೋಟೆ ಸಮೀಪದ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದುವರೆಗೂ 5 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ನಾರಾಯಣ(27) ಹಾಗೂ ಕೃಷ್ಣಪ್ಪ(56) ಎಂದು ಗುರುತಿಸಲಾಗಿದೆ. ಉಳಿದವರ ಹೆಸರುಗಳು ತಿಳಿದುಬಂದಿಲ್ಲ. ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಏರುತ್ತಿದ್ದು ಇದುವರೆಗೂ 45 ಮಂದಿಯ ಪ್ರಾಣವನ್ನು ಕಳ್ಳಭಟ್ಟಿ ಕಸಿದುಕೊಂಡಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಗಳನ್ನು ಅಲ್ಲಗಳೆಯಲಾಗದು.

(ದಟ್ಸ್‌ಕನ್ನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X