ತಾರಕಕ್ಕೇರಿದ ಕೊನೆಯ ಹಂತದ ಕಸರತ್ತು
ಬೆಂಗಳೂರು, ಮೇ 20: ಮೂರನೇ ಹಾಗೂ ಕೊನೆಯ ಹಂತದ ಚುನಾವಣೆಗೆ ಮತದಾರರನ್ನು ಓಲೈಸಲು ಮಂಗಳವಾರ (ಮೇ 20) ಕೊನೆಯ ದಿನ. ಇಂದು ಸಂಜೆ 5ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
ಮೂರನೆ ಹಂತದ ಚುನಾವಣೆ ಒಟ್ಟು 69 ಕ್ಷೇತ್ರಗಳಲ್ಲಿ ನಡೆಯಲಿದೆ. ಉತ್ತರ ಕರ್ನಾಟಕದ 8 ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ, ಬೀದರ್, ಗುಲ್ಬರ್ಗ,ಬಿಜಾಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳೂ ಮೇ 22ರ ಕೊನೆಯ ಹಂತದ ಚುನಾವಣೆಗೆ ಸಜ್ಜಾಗುತ್ತಿವೆ. ಈ ಜಿಲ್ಲೆಗಳಲ್ಲಿ ರಾಜಕೀಯ ನಾಯಕರ ಅಬ್ಬರದ ಪ್ರಚಾರ ಇಂದು ಕೊನೆಗೊಳ್ಳಲಿದೆ.
ಕಾಂಗ್ರೆಸ್ ಪರವಾಗಿ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಧರ್ಮಸಿಂಗ್, ಸಿದ್ದರಾಮಯ್ಯ, ಬಿಜೆಪಿ ಪರವಾಗಿ ಬಿ.ಎಸ್.ಯಡಿಯೂರಪ್ಪ, ಎಲ್.ಕೆ.ಅಡ್ವಾಣಿ, ನರೇಂದ್ರ ಮೋದಿ, ಅನಂತಕುಮಾರ್ ಹಾಗೂ ಜೆಡಿಎಸ್ ಪರವಾಗಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರು ಅಬ್ಬರ ಪ್ರಚಾರದಲ್ಲಿ ಮಗ್ನರಾಗಿದ್ದಾರೆ.
ಮೇ 16ರಂದು ರಾಯಚೂರು, ಕೊಪ್ಪಳ, ಉತ್ತರ ಕನ್ನಡ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇ 60ರಷ್ಟು ಮತದಾನ ದಾಖಲಾಗಿತ್ತು. ಹಾಗೆಯೇ ಮೇ 10ರಂದು 89 ಕ್ಷೇತ್ರಗಳಲ್ಲಿ ನಡೆದ ಮೊದಲ ಹಂತದ ಚುನಾವಣೆಗೆ ಶೇ.66ರಷ್ಟು ಮತದಾನ ದಾಖಲಾಗಿತ್ತು. ಮೇ 25ರಂದು ಮತ ಎಣಿಕೆ ನಡೆಯಲಿದ್ದು ಪಕ್ಷಗಳ ಹಾಗೂ ಕೆಲವು ಪ್ರಭಾವಿ ಅಭ್ಯರ್ಥಿಗಳ ಭವಿಷ್ಯ ಅಂದು ನಿರ್ಧಾರವಾಗಲಿದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications