ನಗರದಲ್ಲಿ ಮಾಜಿ ಕ್ರೀಡಾಪಟುಗಳ ಬೀದಿ ಕಾಳಗ
ಬೆಂಗಳೂರು, ಮೇ 20: ಕಾರ್ಯದರ್ಶಿಯಿಂದ ಹಣ ದುರ್ಬಳಿಕೆಯಾಗಿದೆ ಎಂದು ಇಬ್ಬರು ಮಾಜಿ ಕ್ರೀಡಾಪಟುಗಳು ಬಹಿರಂಗವಾಗಿ ಸಿನಿಮೀಯ ರೀತಿಯಲ್ಲಿ ಹೊಡೆದಾಡಿದ ಅಸಹ್ಯಕರ ಪ್ರಸಂಗ ಮಂಗಳವಾರ ಕಂಠೀರವ ಮೈದಾನದಲ್ಲಿ ಜರುಗಿದೆ.
ರಾಜ್ಯ ಅಥ್ಲೆಟಿಕ್ಸ್ ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಮತ್ತು ಕಾರ್ಯದರ್ಶಿ ಸತ್ಯನಾರಾಯಣ ಹೊಡೆದಾಡಿದ ಕ್ರೀಡಾಪಟುಗಳು. ಸಂಘದ ಕಾರ್ಯದರ್ಶಿ ಸತ್ಯನಾರಾಯಣ ಸಂಘದ ಹಣವನ್ನು ದುರ್ಬಳಿಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಮಾರಾಮಾರಿಗೆ ಕಾರಣವಾಗಿದೆ.
ಕಂಠೀರವ ಮೈದಾನದಲ್ಲಿ ವಿಶ್ವ ಅಥ್ಲೆಟಿಕ್ಸ್ ದಿನಾಚರಣೆ ಆಚರಿಸಲು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಈ ಇಬ್ಬರು ಮಾಜಿ ಕ್ರೀಡಾಪಟುಗಳು ಬೀದಿಯಲ್ಲಿ ಹೊಡೆದಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮಾತಿನ ಚಕಮಕಿ ತಾರಕಕ್ಕೇರಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಇದರಿಂದ ವೇದಿಕೆ ಅಕ್ಷರಶಃ ರಣರಂಗವಾಗಿ ಪರಿಣಮಿಸಿತು. ವೇದಿಕೆಯಲ್ಲಿದ್ದ ಗಣ್ಯರು ತಡೆಯಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.
ಸಂಘದ ಕಾರ್ಯದರ್ಶಿ ಸತ್ಯನಾರಾಯಣ ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ಗೋಪಾಲಕೃಷ್ಣ ಅವರ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications