ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುಗುರು ನಿದ್ದೆಯಲ್ಲಿ ಸಿಎಂ ಹುದ್ದೆಯ ಹಗಲುಗನಸು

By Staff
|
Google Oneindia Kannada News

ಬೆಂಗಳೂರು, ಮೇ 9 : ಮುಖ್ಯಮಂತ್ರಿ ಅಭ್ಯರ್ಥಿಯೆಂದು ಕಾಂಗ್ರೆಸ್ ಹೈಕಮಾಂಡ್‌ನಿಂದ ಘೋಷಿತರಾಗಿರದಿದ್ದರೂ ಮೊದಲ ಬಾರಿ ಕರ್ನಾಟಕವನ್ನು ಮುನ್ನಡೆಸುವ ಅತ್ಯಂತ ಮಹತ್ತರ ಹುದ್ದೆಯನ್ನೇರುವ ಕನಸು ಕಾಣುತ್ತಿರುವ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಬಗ್ಗೆ 'ಚಿಂತನೆ' ನಡೆಸುತ್ತಿರುವ ಭಂಗಿಯಿದು.

ಕಾಂಗ್ರೆಸ್ ಪರ ಪ್ರಚಾರಕ್ಕೆಂದು ಗುರುವಾರ ಮೇ 8ರಂದು ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮನಮೋಹನ ಸಿಂಗ್ ಅವರು ಚೌಡಯ್ಯ ಸ್ಮಾರಕ ಭವನದಲ್ಲಿ ಕರ್ನಾಟಕವನ್ನು ಹಾಡಿಹೊಗಳಿ ಈ ಬಾರಿ ತಮ್ಮ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆಯೆಂದು ಘಂಟಾಘೋಷಿಸುತ್ತಿರುವ ಹೊತ್ತಿನಲ್ಲಿ ಖರ್ಗೆಯವರು ಯೋಚನಾ ಲಹರಿಗೆ ಜಾರಿದ್ದರು.

ಗುರುಮಿಟ್ಕಲ್ ಕ್ಷೇತ್ರ ಕೈಬಿಟ್ಟು ಚಿತ್ತಾಪುರದತ್ತ ಚಿತ್ತ ಹರಿಸಿದ ಸಂದರ್ಭದಲ್ಲಿ ಎಚ್ಚೆತ್ತುಕೊಂಡಿದ್ದ ಖರ್ಗೆಯವರು ಸತತವಾಗಿ ಗೆಲ್ಲಿಸಿದ ಗುರುಮಿಟ್ಕಲ್ ಕ್ಷೇತ್ರ ಮತ್ತು ಜನತೆಯನ್ನು ನೆನೆನೆನೆದು ಗಳಗಳನೇ ಅತ್ತಿದ್ದರು. ಈಗ ಮತ್ತೆ ಸಹಜ ಸ್ಥಿತಿಗೆ ಮರಳಿದ್ದಾರೆ!

ಚುನಾವಣಾ ಆಯೋಗ ಪ್ರಚಾರಕ್ಕೆ ರಾಜಕಾರಣಿಗಳು ಕೈಕಾಲಾಡಿಸದಷ್ಟು ನಿರ್ಬಂಧಗಳನ್ನು ಹೇರಿರುವುದರಿಂದ ಅಭ್ಯರ್ಧಿಗಳೆಲ್ಲರೂ ಸ್ವತಃ ಮತದಾರರನ್ನು ಭೇಟಿಯಾಗದೇ ಗತ್ಯಂತರವೇ ಇಲ್ಲ ಎಂಬಂತಹ ಸ್ಥಿತಿ ಏರ್ಪಟ್ಟಿದೆ. ಇತ್ತೀಚೆಗೆ ರಾಹುಲ್ ಗಾಂಧಿ 'ಡಿಸ್ಕವರ್ ಇಂಡಿಯಾ' ಅಭಿಯಾನದಲ್ಲಿ ಕರ್ನಾಟಕಕ್ಕೆ ಬಂದಿದ್ದಾಗ ಖರ್ಗೆಯವರು ರಾಹುಲ್ ಹಿಂದಿಂದೆ ಸಾಕಷ್ಟು ಅಲೆದಿದ್ದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿದ್ರಾಭಂಗಿ ಜಗತ್ಪ್ರಸಿದ್ಧ. ಇತ್ತೀಚೆಗೆ ಸಿದ್ದರಾಮಯ್ಯ, ಧರಂಸಿಂಗ್, ಜನಾರ್ಧನ ಪೂಜಾರಿ ಮೊದಲಾದ ಕಾಂಗ್ರೆಸ್ ನಾಯಕರು, ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಕೂಡ ನಿದ್ರಾಭಂಗಿಯಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು. ಇವರೆಲ್ಲ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವವರೇ! ಚುನಾವಣಾ ಪ್ರಚಾರಕ್ಕಾಗಿ ಸಿಕ್ಕಾಪಟ್ಟೆ ಎಡತಾಕಬೇಕಾಗಿರುವುದರಿಂದ ಇದ ಸಹಜವಲ್ಲದೆ ಮತ್ತೇನು?

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X