ರಾಜಕೀಯ ಆಖಾಡದಲ್ಲಿ ಮತ್ತೊಬ್ಬ ಸಾಫ್ಟ್‌ವೇರ್ ತಜ್ಞ
ಧಾರವಾಡ,ಏ.29: ಭ್ರಷ್ಟ ರಾಜಕಾರಣಿಗಳಿಂದ ಬೇಸತ್ತು ಚುನಾವಣಾ ಆಖಾಡಕ್ಕೆ ಧುಮುಕಿರುವ ಸಾಫ್ಟ್ ವೇರ್ ಇಂಜಿನಿಯರ್ ರವಿಕೃಷ್ಣಾರೆಡ್ಡಿ ಅವರ ನಂತರ, ಪ್ರಶಾಂತ್ ಸೂಗೂರು ಎನ್ನುವ ಇನ್ನೊಬ್ಬ ಸಾಫ್ಟ್ ವೇರ್ ಇಂಜನಿಯರ್ ಕಣಕ್ಕಿಳಿದಿದ್ದಾರೆ. ಹುಬ್ಬಳ್ಳಿ ಧಾರವಾಡ ಪಶ್ಚಿಮ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಮತದಾನದ ಮಹತ್ವ ಕುರಿತು ಪ್ರಚಾರ ಹಮ್ಮಿಕೊಂಡು ಯಶಸ್ವಿಯಾಗಿದ್ದ ಪ್ರಶಾಂತ್ ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ದೇಶ ವಿದೇಶಗಳ ಪ್ರತಿಷ್ಠಿತ ಸಾಪ್ಟವೇರ್ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಪ್ರಶಾಂತ್ ಕೆಲ ದಿನಗಳಿಂದ ತವರು ನೆಲವಾದ ಧಾರವಾಡದಲ್ಲಿ ನೆಲೆಸಿದ್ದಾರೆ. ಇದೇ ಸಂದರ್ಭದಲ್ಲಿ ಚುನಾವಣೆಗಳು ಘೋಷಣೆ ಆಗಿರುವ ಹಿನ್ನಲೆಯಲ್ಲಿ ಜನರನ್ನು ಎಚ್ಚರಿಸುವ ಸಲುವಾಗಿ ಮತದಾನ ಮಹತ್ವ ಕುರಿತು ಜಾಗೃತಿ ಅಭಿಯಾನ ಆರಂಭಿಸಿದ್ದರು. ಇದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿರುವ ಪ್ರಶಾಂತ್ ಸಕ್ರಿಯ ರಾಜಕಾರಣಕ್ಕೆ ಧುಮುಕಲು ಪ್ರೇರಣೆಯಾಯಿತು.
ಈ ಕುರಿತು ಮಾತನಾಡಿರುವ ಪ್ರಶಾಂತ್, ಜಾಗೃತಿ ಕಾರ್ಯಕ್ರಮವನ್ನು ಆರಂಭಿಸಿದಾಗಿನಿಂದ ಇಲ್ಲಿವರೆಗೂ ಎರಡು ಸಾವಿರ ದೂರವಾಣಿ ಕರೆಗಳು , 600 ಎಸ್ಎಂಎಸ್ ಗಳು ಹಾಗೂ 25 ಇ-ಮೇಲ್ ಗಳು ಬಂದಿವೆ. ಇದರಲ್ಲಿ ಶೇ. 1 ರಷ್ಟು ಮಂದಿ ಮಾತ್ರ ನಿಮ್ಮಂತವರಿಗೆ ಚುನಾವಣೆ ಏಕೆ ಎಂದು ಪ್ರಶ್ನಿಸಿರುವುದನ್ನು ಬಿಟ್ಟರೆ, ಉಳಿದ ಎಲ್ಲರಿಂದಲೂ ಶುಭ ಹಾರೈಕೆಗಳಿವೆ. ಹೆಚ್ಚಾಗಿ ಕಾಲೇಜ್ ಪ್ರಾಂಶುಪಾಲರು, ವೈದ್ಯರು ಈ ಪಟ್ಟಿಯಲ್ಲಿದ್ದಾರೆ ಎನ್ನುತ್ತಾರೆ ಪ್ರಶಾಂತ್ ಸೂಗೂರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications