ಭರವಸೆಗಳ ಮಹಾಪೂರ ಹೊತ್ತು ತಂದ 'ಸೈಕಲ್'
ಬೆಂಗಳೂರು,ಏ.29:ಸಮಾಜವಾದಿ ಪಕ್ಷದ ಚುನಾವಣೆ ಪ್ರಣಾಳಿಕೆಯನ್ನು ಪಕ್ಷದ ನಾಯಕಿ ಬಿ.ಟಿ.ಲಲಿತಾನಾಯಕ್ ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಆಖಾಕ್ಕಿಳಿದಿರುವ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಎಸ್.ಬಂಗಾರಪ್ಪ ವಿರೋಧ ಪಕ್ಷಗಳಲ್ಲಿ ನಡುಕ ಹುಟ್ಟಿಸುವ ರೀತಿಯಲ್ಲಿ ಪ್ರಣಾಳಿಕೆಯನ್ನು ರೂಪಿಸಿದ್ದಾರೆ.ಭಾರೀ ಆಶ್ವಾಸನೆಗಳ ಮಹಾಪೂರವೇ ಇದರಲ್ಲಿ ಅಡಗಿದೆ.
ತಮ್ಮ ಪಕ್ಷವು ಯಾವ ಪಕ್ಷಕ್ಕಿಂತ ಕಡಿಮೆಯೇನಲ್ಲ ಎನ್ನುವುದನ್ನು ಸಾಬೀತುಪಡಿಸಿರುವ ಬಂಗಾರಪ್ಪ, ಮತದಾರರನ್ನು ಸೆಳೆಯಲು ಅನೇಕ ಆಮಿಷಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದಾರೆ. ಪ್ರಮುಖವಾಗಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಅಕ್ಕಿ ವಿತರಣೆ, ಕಲರ್ ಟಿವಿ ನೀಡುವುದು, ಭೂರಹಿತರಿಗೆ ಎರಡು ಎಕರೆ ಜಮೀನು, ಸರ್ಕಾರಿ ಇಲಾಖೆಯಲ್ಲಿ ದಿನಗೂಲಿಗಳಾಗಿ ಕೆಲಸ ನಿರ್ವಹಿಸುತ್ತಿರುವವರ ಸೇವೆ ಖಾಯಂಗೊಳಿಸುವುದು.
ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ, ಐದು ಎಕರೆವರೆಗಿನ ರೈತರ ಜಮೀನಿಗೆ ಉಚಿತ ಬಿತ್ತನೆ ಬೀಜ ನೀಡುವುದು, 55 ವರ್ಷ ಮೀರಿದ ಕೃಷಿಕರಿಗೆ ಮಾಸಿಕ ಭತ್ಯೆ ಹಾಗೂ 10 ಎಚ್ ಪಿ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡುವುದು, ಅಲ್ಪಸಂಖ್ಯಾತರಿಗೆ ಉದ್ಯೋಗದಲ್ಲಿ ಮೀಸಲು ಸೇರಿದಂತೆ ಭಾರೀ ಭರವಸೆಗಳನ್ನು ಹೊಂದಿದ ಪ್ರಣಾಳಿಕೆಯನ್ನು ಇಂದು ತಮ್ಮ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ಸಮಾಜವಾದಿ ಪಕ್ಷದ ಪ್ರಣಾಳಿಕೆ ಬಿಡುಗಡೆಯಾಯಿತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications