ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಗೆ-ಹಗೆಗೆ ತಾತ್ಕಾಲಿಕ ಉಪಶಮನ

By Staff
|
Google Oneindia Kannada News

TN puts on hold Hogenakkal project till K'taka pollsಬೆಂಗಳೂರು, ಏ.5: ಕನ್ನಡಿಗರ ಅವಿರತ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಹೊಗೇನಕಲ್ ಜಲ ಯೋಜನೆಯನ್ನು ತಮಿಳುನಾಡು ತಾತ್ಕಾಲಿಕವಾಗಿ ನಿಲ್ಲಿಸಿದೆ. ಯೋಜನೆ ಸ್ಥಗಿತವಾಗಿದ್ದರಿಂದ ಸಮಸ್ತ ಕನ್ನಡಿಗರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ತಾತ್ಕಾಲಿಕ ನಿಲ್ಲಿಸುತ್ತಿರುವುದಾಗಿ ತಮಿಳುನಾಡು ಸರ್ಕಾರ ಶನಿವಾರ ಘೋಷಿಸಿದೆ. ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾಗಿರುವುದರಿಂದ ನಮಗೆ ಹಿಂಸಾಚಾರ ಅಗತ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಹೇಳಿದ್ದಾರೆ.

ಕೇಂದ್ರ ಮಧ್ಯಪ್ರವೇಶಿಸಿ ವಿವಾದಕ್ಕೆ ಪರಿಹಾರ ಸೂಚಿಸಬೇಕೆಂದು ಪ್ರಧಾನಿಯನ್ನು ಭೇಟಿ ಮಾಡಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಎಸ್.ಎಂ.ಕೃಷ್ಣ ಅವರು, ಸರ್ಕಾರದ ಸೂಚನೆಯ ಮೇರೆಗೆ ತಮಿಳುನಾಡು ಹೊಗೇನಕಲ್ ಕಾಮಗಾರಿಯನ್ನು ನಿಲ್ಲಿಸುತ್ತಿದೆ. ಕರುಣಾನಿಧಿ ಪ್ರಬುದ್ಧ ನಿರ್ಧಾರ ಕೈಗೊಂಡಿದ್ದಾರೆ. ಅವರಿಗೆ ಕೃತಜ್ಞನಾಗಿರುವುದಾಗಿ ಪ್ರತಿಕ್ರಿಯಿಸಿದ್ದಾರೆ.

ತಮಿಳುನಾಡು ಸರ್ಕಾರ ಅಕ್ರಮವಾಗಿ ಹೊಗೇನಕಲ್‌ನಲ್ಲಿ ಕುಡಿಯುವ ನೀರಿನ ಯೋಜನೆ ಪ್ರಾರಂಭಿಸಿದ್ದರಿಂದ ಕರ್ನಾಟಕದಾದ್ಯಂತ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ಚಾಮರಾಜನಗರ ಜಿಲ್ಲೆ ಮತ್ತು ರಾಜ್ಯದ ಎಲ್ಲೆಡೆ ಕನ್ನಡಪರ ಸಂಘಟನೆಗಳು ಯೋಜನೆ ತಕ್ಷಣ ನಿಲ್ಲಿಸಬೇಕು ಎಂದು ಪ್ರತಿಭಟನೆಗೆ ಇಳಿದಿದ್ದವು. ಕರ್ನಾಟಕದ ಹೋರಾಟಕ್ಕೆ ಪ್ರತಿಯಾಗಿ ತಮಿಳುನಾಡಿನಲ್ಲಿಯೂ ಪ್ರತಿರೋಧ ವ್ಯಕ್ತವಾಗಿತ್ತು.

ಈ ನಿಟ್ಟಿನಲ್ಲಿ ಏ.10ರಂದು ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿದ್ದವು. ಈಗ ಹೊಗೇನಕಲ್ ಯೋಜನೆಯನ್ನು ತಮಿಳುನಾಡು ಸರ್ಕಾರ ತಾತ್ಕಾಲಿಕವಾಗಿ ನಿಲ್ಲಿಸಿರುವ ಕಾರಣ ಏ.10ರ ಕರ್ನಾಟಕ ಬಂದ್‌ನನ್ನು ರದ್ದು ಪಡಿಸಿರುವುದಾಗಿ ಕನ್ನಡಪರ ಸಂಘಟನೆಗಳು ತಿಳಿಸಿವೆ. ತಮಿಳುನಾಡು ಸರ್ಕಾರ ಹೊಗೇನಕಲ್ ಯೋಜನೆಯನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ಹೋರಾಟ ಮಾಡುತ್ತೇವೆ. ತಮಿಳು ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಹೇಳಿವೆ.

ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಯೋಜನೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದವು. ಯೋಜನೆಗೆ ವಿರುದ್ಧವಾಗಿ ಕನ್ನಡ ಚಿತ್ರೋದ್ಯಮ ಕೂಡ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿತ್ತು. ತಮಿಳುನಾಡಿನ ಡಿಎಂಕೆ ಪಕ್ಷ ಕೇಂದ್ರದ ಯುಪಿಎ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಕೊಟ್ಟಿರುವುದರಿಂದ ತಮಿಳುನಾಡಿಗೆ ಕೇಂದ್ರ ನಿರ್ದೇಶನ ನೀಡಲು ಮೀನಮೇಷ ಎಣಿಸುತ್ತಿತ್ತು. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಳು ಘೋಷಣೆಯಾಗಿರುವುದರಿಂದ ಹೊಗೇನಕಲ್ ವಿವಾದ ಯುಪಿಎ ಸರ್ಕಾರಕ್ಕೆ ಬಿಸಿತುಪ್ಪವಾಗಿತ್ತು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X