ಚುನಾವಣೆಗೆ ಕರ್ನಾಟಕ ರಾಜಕೀಯ ಪಕ್ಷಗಳ ಸ್ವಾಗತ
ಬೆಂಗಳೂರು, ಏ.3: ಕರ್ನಾಟಕ ವಿಧಾನಸಭೆಗೆ ಮೇ ತಿಂಗಳಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲು ಉದ್ದೇಶಿಸಿರುವುದನ್ನುಜೆಡಿ(ಎಸ್), ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸ್ವಾಗತಿಸಿವೆ. ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸವನ್ನು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ವ್ಯಕ್ತವಾಗಿದೆ.
2004ರ ವಿಧಾನಸಭೆ ಚುನಾವಣೆಯಿಂದ ಅಧಿಕಾರಕ್ಕೆ ಬಂದ ಅಸ್ಥಿರ ಸರ್ಕಾರಗಳಿಂದ ಕರ್ನಾಟಕದ ಜನತೆ ಸಾಕಷ್ಟು ಬಳಲಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದು ಜನತೆಗೆ ಸುಸ್ಥಿರ ಸರ್ಕಾರ ಕೊಡಲಿದೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲದಂತೆ ಜನರ ಬಳಿಗೆ ಹೋಗುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಯೋಗ ಚುನಾವಣೆ ದಿನಾಂಕ ಘೋಷಿಸಿರುವುದನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪೃಥ್ವಿರಾಜ್ ಚವ್ಹಾಣ್, ಮತದಾರರ ಪಟ್ಟಿ ಸಿದ್ಧವಾಗಿಲ್ಲ. ಕ್ಷೇತ್ರಗಳ ಹೊಸ ನಕಾಶೆ ಇನ್ನೂ ಪೂರ್ಣಗೊಂಡಿಲ್ಲ. ಅವಸರದಲ್ಲಿ ಚುನಾವಣೆ ನಡೆಸಲು ಆಯೋಗ ಸಿದ್ಧತೆ ನಡೆಸಿದೆ ಎಂದು ಚುನಾವಣೆ ದಿನಾಂಕದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇದು ಜನತೆಗೆ ಹಾಗೂ ಪ್ರಜಾಪ್ರಭುತ್ವಕ್ಕೆ ಸಂದ ಜಯ. ಚುನಾವಣೆ ಆಯೋಗ ಯಾವ ಒತ್ತಡಕ್ಕೂ ಮಣಿಯದೆ ದಿನಾಂಕ ಪ್ರಕಟಿಸುವ ಮೂಲಕ ಮಾದರಿ ಕೆಲಸ ಮಾಡಿದೆ. ಉಡುಪಿಯ ಶ್ರೀಕೃಷ್ಣನ ಸನ್ನಿಧಿಯಲ್ಲಿದ್ದಾಗ ಚುನಾವಣಾ ದಿನಾಂಕ ಪ್ರಕಟಣೆಯಾದ ಸುದ್ದಿ ಬಂತು ಎಂದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಸಕಾಲದಲ್ಲಿ ಚುನಾವಣೆ ಘೋಷಣೆಯಾಗಿದೆ. ನಮ್ಮ ಬೇಡಿಕೆಗೆ ಸ್ಪಂದಿಸಿರುವ ಚುನಾವಣಾ ಆಯೋಗದ ಕ್ರಮವನ್ನು ಸ್ವಾಗತಿಸುತ್ತೇವೆ ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಮೆಚ್ಚುಗೆ ಸೂಚಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳು ರಾಜ್ಯದಜನತೆಗೆ ಉತ್ತಮ ಆಡಳಿತ ಕೊಡುವಲ್ಲಿ ವಿಫಲವಾಗಿವೆ. ಆದರೆ ಸುದೀರ್ಘ ಇತಿಹಾಸದ ಜನತಾ ಪರಿವಾರ ರಾಜ್ಯದ ಜನತೆಗೆ ಉತ್ತಮ ಆಡಳಿತ ಕೊಡಲಿದೆ. ಪಕ್ಷದ ಆಶಯಕ್ಕೆ ತಕ್ಕಂತೆ ಕೇಂದ್ರ ಚುನಾವಣೆ ಆಯೋಗ ಚುನಾವಣೆ ದಿನಾಂಕ ಪ್ರಕಟಿಸಿರುವುದು ಸ್ವಾಗತಾರ್ಹ. ಈ ಚುನಾವಣೆಯಲ್ಲಿ ಜೆಡಿಎಸ್ ವಿಜಯ ಸಾಧಿಸುವುದು ಖಚಿತ ಎಂದು ಜೆಡಿಎಸ್ ವಕ್ತಾರ ವೈ.ವಿ.ಎಸ್.ದತ್ತ ಗೆಲುವಿನ ನಗೆ ಬೀರಿದ್ದಾರೆ. ಹಲವರು ಚುನಾವಣೆ ಮುಂದೂಡಬೇಕೆಂದು ಆಗ್ರಹಿಸಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರಜಾಪ್ರತಿನಿಧಿಗಳ ಸರ್ಕಾರ ಇರಬೇಕೆಂದು ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಆಯೋಗ ತೆಗೆದುಕೊಂಡಿರುವ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ವಾಗತಿಸಿದ್ದಾರೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications