ಏಕದಿನ ತಂಡ ಪ್ರಕಟಣೆಯ ವೇಳೆ ಸರಿಯಿಲ್ಲ : ಕುಂಬ್ಳೆ
ಅಡಿಲೇಡ್, ಜ.23 : ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮುಗಿಯುವ ಮೊದಲೇ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಬಾರದಿತ್ತು ಎಂದು ಟೆಸ್ಟ್ ತಂಡದ ನಾಯಕ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ತಂಡ ಪ್ರಕಟಿಸಿದ ಸಮಯ ಸರಿಯಿಲ್ಲದಿದ್ದರೂ ಕತ್ತರಿಗೊಳಗಾದ ಹಿರಿಯ ಆಟಗಾರರು ಜನವರಿ 24ರಿಂದ ಆರಂಭವಾಗುತ್ತಿರುವ ನಾಲ್ಕನೇ ಟೆಸ್ಟ್‌ನತ್ತ ಗಮನಹರಿಸುತ್ತಾರೆಂದು ಆಶಿಸುತ್ತೇನೆ ಎಂದು ಬುಧವಾರ ಹೇಳಿದರು.
ಆಯ್ಕೆಯಾಗುವುದು ಬಿಡುವುದು ನಮ್ಮ ಕೈಯಲ್ಲಿಲ್ಲ. ನಾನು ಇಂಥದೆಲ್ಲವನ್ನೂ ಅನುಭವಿಸಿದ್ದೇನೆ. ಏನೂ ಮಾಡಲಾಗುವುದಿಲ್ಲ. ನಿರಾಶೆಯನ್ನು ಬದಿಗೊತ್ತಿ ಮುಂದಿನದಕ್ಕೆ ಗಮನವನ್ನು ಕೇಂದ್ರೀಕರಿಸಬೇಕು ಎಂದು ಅವರು ಹಿರಿಯ ಆಟಗಾರರಿಗೆ ಹಿತನುಡಿ ಹೇಳಿದರು.
ಏಕದಿನ ಪಂದ್ಯಗಳಿಗೆ ಅನ್‌ಫಿಟ್ ಎಂದು ತರಬೇತಿದಾರ ಕಿಂಗ್‌ರಿಂದ ಪರಿಗಣಿಸಿರುವ 'ಮಹಾರಾಜ' ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನು ಕೈಬಿಟ್ಟಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಪಶ್ಚಿಮ ಬಂಗಾಳದ ಗಂಗೂಲಿ ಭಕ್ತರು ಹಲ್ಲಾಗುಲ್ಲಾ ಮಾಡುತ್ತಿದ್ದಾರೆ. ಆಯ್ಕೆಯಾಗುವ ವಿಶ್ವಾಸ ಹೊಂದಿದ್ದ ದ್ರಾವಿಡ್‌ಗೂ ನಿರಾಶೆಯಾಗಿದೆ. ಅದಲ್ಲದೇ, ಹಿರಿಯರು ಬೇಡವೆಂದು ಎಮ್ಎಸ್‌ಡಿ ಮತ್ತು ಯುವಿ ಪಟ್ಟುಹಿಡಿದಿರುವುದರಿಂದ ಡ್ರೆಸ್ಸಿಂಗ್ ರೂಂನಲ್ಲಿ ಹಿರಿಕಿರಿಯರ ನಡುವೆ ದೃಷ್ಟಿಯುದ್ಧಗಳು ಸಹಜವಾಗಿಯೇ ನಡೆದಿವೆ.
ಆದರೆ ಏನೂ ನಡೆದಿಲ್ಲವೆಂಬಂತೆ ಎಲ್ಲ ಆಟಗಾರರು ನಾಳೆಯ ಆಟಕ್ಕೆ ಸಿದ್ಧರಾಗುತ್ತಿದ್ದಾರೆ. ಕಳೆದ ಬಾರಿಯ ಸರಣಿಯಲ್ಲಿ ಅಡಿಲೇಡ್‌ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿತ್ತು. ಆಸೀಸ್ ಗಂಟಲಿನ ಕೊಕ್ಕೆಯಂತಿರುವ 'ವೆರಿ ವೆರಿ ಸ್ಪೆಷಲ್' ಲಕ್ಷ್ಮಣ್ ನಾಲ್ಕು ವರ್ಷದ ಹಿಂದೆ ನಡೆದ ಪಂದ್ಯದಲ್ಲಿ 148 ರನ್ ಗಳಿಸಿ ಭಾರತದ ಜಯಕ್ಕೆ ಕಾರಣರಾಗಿದ್ದರು. ಇಲ್ಲಿಯ ಪಿಚ್ ಪರ್ಥ್‌ಗಿಂತ ನಿಧಾನವಾಗಿದ್ದು ಕಡೆಯ ಮೂರು ದಿನ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಲಿದೆ. ಆದರೆ, ಚೆಂಡು ಎದೆಮಟ್ಟಕ್ಕಿಂತ ಜಾಸ್ತಿ ಏಳದ ಕಾರಣ ರನ್ ಹೊಳೆ ಹರಿಯಲಿದೆ ಎಂಬುದು ಪಂಡಿತರ ಅಭಿಪ್ರಾಯ.
ಆದರೂ, ಈ ಪಂದ್ಯವನ್ನು ಭಾರತ ಗೆಲ್ಲಲೇಬೇಕಾಗಿರುವುದರಿಂದ ಫಾರ್ಮ್‌ನಲ್ಲಿ ಇಲ್ಲದ ಜಾಫರ್‌ರನ್ನು ಕೈಬಿಟ್ಟು ಹರ್‌ಭಜನ್‌ರನ್ನು ಆಡಿಸುವ ಯೋಚನೆಯಲ್ಲಿ ಕುಂಬ್ಳೆ ಇದ್ದಾರೆ.
(ಏಜೆನ್ಸೀಸ್)












Click it and Unblock the Notifications