ಮೋನಿಷಾ ಮಾಡಿದ ತಪ್ಪಾದರೂ ಏನು?
ಬೆಂಗಳೂರು, ಡಿ.26: ವಿಜಯನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಗೇಶ್ (37) ಮತ್ತು ಸುಧಾ (26) ದಂಪತಿಗಳು ಸೋಮವಾರ (ಡಿ.24) ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆಯಾದರೂ ದಂಪತಿಗಳ ಮಗಳು ಮೋನಿಷಾ(5) ಸಾವಿನಿಂದ ಪಾರಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ನಾಗೇಶ್ ಮೊದಲು ನೇಣಿಗೆ ಶರಣಾಗಿದ್ದಾರೆ. ಆ ದೃಶ್ಯವನ್ನು ನೋಡಿದ ಸುಧಾ ತಮ್ಮ 5ವರ್ಷದ ಮಗು ಮೋನಿಷಾ ಉಸಿರುಗಟ್ಟಿಸಿ ತಾವೂ ನೇಣಿಗೆ ಶರಣಾಗಿದ್ದಾರೆ. ಮಗು ಸತ್ತಿದೆ ಎಂದು ತಾಯಿ ತಿಳಿದಿದ್ದರು ಆದರೆ ಅದೃಷ್ಟವಶಾತ್ ಬಾಲಕಿ ಉಸಿರುಗಟ್ಟಿಸಿದ್ದರಿಂದ ಪ್ರಜ್ಞೆ ತಪ್ಪಿದ್ದಳು. ಈಗ ಬಾಲಕಿ ಅನಾಥೆ.
ಡಕ್‌ವರ್ತ್ ಇಂಡಿಯಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ ಹಾಗೂ ಸುಧಾ ಅವರ ಆತ್ಮಹತ್ಯೆಯಿಂದ ಮೋನಿಷಾ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದು ಎಚ್ಚರ ಬಂದಾಗಲೆಲ್ಲಾ ಕಿರುಚಿ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಾಳೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಸರಿಸುಮಾರು 36 ಗಂಟೆಗಳ ಕಾಲ ತಂದೆತಾಯಿ ಹೆಣಗಳ ಮಧ್ಯೆ ಹೆಣಗಿದ ಮೋನಿಷಾ ಘಟನೆಯಿಂದ ಇನ್ನೂ ಚೇತರಿಸಿಕೊಂಡಿಲ್ಲ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications