ವಿಕೃತಗಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ನೀಡೋದು ತಪ್ಪಾ?
ಬೆಂಗಳೂರು, ಡಿ.15 : ಉಮೇಶ್ ರೆಡ್ಡಿ ಎಂದರೆ ಒಂದು ಕಾಲದಲ್ಲಿ ಹೆಂಗಸರು ಹೆದರುತ್ತಿದ್ದರು. ಆತನ ವಿಕೃತ ಪುರಾಣ ಕೇಳಿದರೆ ಎಂಥವರಿಗೂ ಆತಂಕ ಸಹಜವೇ. ಆತನ ಪಾಪಕ್ಕೆ ಗಲ್ಲು ಶಿಕ್ಷೆ ನೀಡಬೇಕೇ ಅಥವಾ ಜೀವಾವಧಿ ಶಿಕ್ಷೆಯೇ ಸಾಕೇ ಎಂಬ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳಲ್ಲಿ ಜಿಜ್ಞಾಸೆ ನಡೆದಿದೆ. ಅಂತಿಮವಾಗಿ ಜ.11ರಂದು ಉಮೇಶ್ ರೆಡ್ಡಿ ಭವಿಷ್ಯವನ್ನು ಹೈಕೋರ್ಟ್ ನಿರ್ಧರಿಸಲಿದೆ.
ಸೆಷನ್ಸ್ ಕೋರ್ಟ್ ಈತನಿಗೆ ಗಲ್ಲುಶಿಕ್ಷೆ ನೀಡಿದ್ದು, ಶಿಕ್ಷೆಯನ್ನು ಖಾಯಂಗೊಳಿಸುವ ಬಗ್ಗೆ ಹೈಕೋರ್ಟ್ ನಲ್ಲಿ ಭಿನ್ನ ಚಿಂತನೆಗೆಳು ಕೇಳಿಬರುತ್ತಿವೆ. ಸಮಾಜದ ನೆಮ್ಮದಿ ಕೆಡಿಸಿದ ದುಷ್ಟ ರೆಡ್ಡಿಗೆ ಒಂದೇ ಸಲ ಸಾವಿನ ಮುಖಾಂತರ ಶಿಕ್ಷೆ ನೀಡಿದರೆ ಸಾಲದು, ಜೀವಾವಧಿ ಜೈಲಲ್ಲಿ ಕೂತು, ಶಿಕ್ಷೆಯ ಅನುಭವಿಸಲಿ ಎಂಬುದು ನ್ಯಾಯಮೂರ್ತಿಯೊಬ್ಬರ ಅನಿಸಿಕೆ. ಇದೀಗ ಪ್ರಕರಣವನ್ನು ಮೂರನೇ ನ್ಯಾಯಮೂರ್ತಿಗೆ ಒಪ್ಪಿಸಲಾಗಿದೆ. ಅವರು ಜ.11ರಂದು ತೀರ್ಪು ಪ್ರಕಟಿಸಲಿದ್ದಾರೆ.
20 ಅತ್ಯಾಚಾರ, ದರೋಡೆ, ಕೊಲೆ ಸೇರಿದಂತೆ ಅನೇಕ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ಒಂಟಿ ಮಹಿಳೆಯರ ಮನೆಗೆ ನುಗ್ಗಿ, ಮೊದಲು ಕೊಲೆ ಮಾಡಿ ನಂತರ ಶವ ಸಂಭೋಗ ನಡೆಸುತ್ತಿದ್ದ ವಿಕೃತಿಯನ್ನು ಉಮೇಶ್ ರೆಡ್ಡಿ ಹೊಂದಿದ್ದ ಎಂದು ಪೊಲೀಸ್ ವರದಿಗಳು ಹೇಳುತ್ತವೆ. ಅನೇಕ ಸಲ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಉಮೇಶ್ ರೆಡ್ಡಿ ಪರಾರಿಯಾದ ಪ್ರಕರಣಗಳು ಸಾಕಷ್ಟಿವೆ. ಹೀಗಾಗಿ ಆತನ ಸುತ್ತ ವ್ಯಾಪಕ ನಿಗಾ ಇಡಲಾಗಿದೆ.
ಕ್ಷಮೆಗೆ ಯಾಚನೆ : ನನ್ನ ತಪ್ಪುಗಳು ನನಗೆ ಮನವರಿಕೆಯಾಗಿವೆ. ನಾನು ಈಗಾಗಲೇ 10ವರ್ಷ ಜೈಲಲ್ಲಿ ಕಳೆದಿದ್ದೇನೆ. ನಾನು ಹೊಸ ಮನುಷ್ಯನಾಗಲು ನ್ಯಾಯಾಲಯ ಅವಕಾಶ ಕೊಡಲಿ ಎಂದು ಉಮೇಶ್ ರೆಡ್ಡಿ ಕೇಳಿಕೊಂಡಿದ್ದಾನೆ. ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಉಮೇಶ್ ರೆಡ್ಡಿ ದಿನ ಕೊಳೆಯುತ್ತಿದ್ದಾನೆ.
(ದಟ್ಸ್ ಕನ್ನಡ ವಾರ್ತೆ)
ಉಮೇಶ್ ರೆಡ್ಡಿ ಕರ್ಮಕಾಂಡ












Click it and Unblock the Notifications