ಗ್ರಾಹಕರಿಗೆ ದೀಪಾವಳಿ ಧಮಾಕಾ; ತುಟ್ಟಿಯಾಗಲಿದೆ ಇಂಧನ
ನವದೆಹಲಿ, ನ.06: ಒಂದೆಡೆ ಹಬ್ಬದ ಸಡಗರ. ಮತ್ತೊಂದೆಡೆ ಬೆಲೆ ಏರಿಕೆಯ ಬಿಸಿ. ಸರಕಾರ ಇಷ್ಟರಲ್ಲೇ ಅಡುಗೆ ಅನಿಲ, ಸೀಮೆಎಣ್ಣೆ ಸೇರಿದಂತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಗ್ರಾಹಕರಿಗೆ ದೀಪಾವಳಿ ಧಮಾಕ ನೀಡಲಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ ಒಂದಕ್ಕೆ 96 ಡಾಲರ್ ತಲುಪಿರುವ ಕಾರಣ ಇಂಧನ ಬೆಲೆಯನ್ನು ಅನಿವಾರ್ಯವಾಗಿ ಏರಿಸಬೇಕಾಗಿದೆ. ರಾಜ್ಯ ತೈಲ ಮಾರುಕಟ್ಟೆ ಸಂಸ್ಥೆಗಳಾದ ಹಿಂದೂಸ್ಥಾನ್ ಪೆಟ್ರೊಲಿಯಂ, ಇಂಡಿಯನ್ ಆಯಿಲ್ ಮತ್ತು ಭಾರತ್ ಪೆಟ್ರೋಲಿಯಂ ದಿನಕ್ಕೆ 240ಕೋಟಿ ರೂ. ನಷ್ಟ ಅನುಭವಿಸುತ್ತಿವೆ. ಈ ವಿಚಾರವಾಗಿ ಚರ್ಚಿಸಲು ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವೋರಾ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿಯಾಗಲಿದ್ದಾರೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳು ಸದ್ಯದಲ್ಲೇ ಇರುವ ಕಾರಣ ಕಾಂಗ್ರೆಸ್ ಬೆಲೆ ಏರಿಕೆಯನ್ನು ಖಂಡಿಸುತ್ತಿರುವುದಾಗಿ ತಿಳಿದು ಬಂದಿದೆ. ಸಾಮಾನ್ಯ ಜನಕ್ಕೆ ಹೆಚ್ಚಿನ ಹೊರೆಯಾಗದಂತೆ ಬೆಲೆ ಏರಿಸಲಾಗುವುದು. ಕಚ್ಚಾ ತೈಲಬೆಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರಕಾರ ಬೆಲೆ ಏರಿಸಬೇಕೆಂದು ಮತ್ತೊಂದೆಡೆ ಕಾಂಗ್ರೆಸ್ ಮಕ್ತಾರ ಶಕೀಲ್ ಅಹಮದ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಮೂರು ನಾಲ್ಕು ದಿನ ಚರ್ಚಿಸಿದ ಬಳಿಕ ಬೆಲೆ ಏರಿಕೆಯ ಬಿಸಿ ಗ್ರಾಹಕನಿಗೆ ತಟ್ಟಲಿರುವುದಂತೂ ನಿಜ.
(ಏಜನ್ಸೀಸ್)












Click it and Unblock the Notifications