ಮೈತ್ರಿ ಓಕೆ,ಚುನಾವಣೆ ಯಾಕೆ? : ಚಿದಾನಂದಮೂರ್ತಿ
ತುಮಕೂರು, ನ.02 : ರಾಷ್ಟ್ರಪತಿ ಆಳ್ವಿಕೆಯಿಂದ ಅಧಿಕಾರಶಾಹಿಗಳ ಭ್ರಷ್ಟಾಚಾರ ಮಿತಿಮೀರುತ್ತದೆ ಎಂದು ಸಂಶೋಧಕ ಪ್ರೊ.ಚಿದಾನಂದ ಮೂರ್ತಿ ಎಚ್ಚರಿಸಿದ್ದಾರೆ.
ತುಮಕೂರು ವಿವಿಯ ಸ್ನಾತಕೋತ್ತರ ಕೇಂದ್ರ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಚುನಾಯಿತ ಪ್ರತಿನಿಧಿಗಳಿಲ್ಲದೆ ರಾಜ್ಯ ಅಭಿವೃದ್ಧಿ ಕಾರ್ಯಗಳಲ್ಲಿ ಹಿಂದುಳಿಯುತ್ತದೆ. ಪ್ರತಿಯೊಂದು ಇಲಾಖೆಯ ಕಾರ್ಯಚಟುವಟಿಕೆಗಳನ್ನು ಗಮನಿಸುವುದು ರಾಜ್ಯಪಾಲರಿಗೆ ಅಸಾಧ್ಯವಾದ ಕೆಲಸ. ಇದರಿಂದ ಅಧಿಕಾರಿಗಳು ದುಡ್ಡು ಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಒಂದು ವೇಳೆ ಸರಕಾರ ಇದ್ದಿದ್ದರೆ ಮುಖ್ಯಮಂತ್ರಿಗಳು ಪ್ರತಿನಿಧಿಗಳನ್ನು ಕೇಂದ್ರಕ್ಕೆ ಕಳುಹಿಸಿ ಪ್ರಾಚೀನ ಭಾಷೆಯ ಸ್ಥಾನಮಾನಕ್ಕಾಗಿ ಶ್ರಮಿಸುತ್ತಿದ್ದರು. ಬಿಜೆಪಿ ಹಾಗೂ ಜೆಡಿಎಸ್‌ನ 129 ಶಾಸಕರಿಗೆ ರಾಜ್ಯಪಾಲರು ಸರಕಾರ ರಚಿಸಲು ಅನುವು ಮಾಡಿಕೊಡಬೇಕು ಎಂದ ಅವರು, ಸಾಹಿತಿಗಳಾದ ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಕೆ.ಬಿ.ಸಿದ್ಧಯ್ಯ ಮತ್ತು ದೇವನೂರು ಮಹದೇವರ ವಿಧಾನಸಭೆ ವಿಸರ್ಜಿಸಬೇಕು ಎಂಬ ಬೇಡಿಕೆ ವೈಯಕ್ತಿಕ ಉದ್ದೇಶದಿಂದ ಕೂಡಿದ್ದು ಎಂದರು.
ಬಹಳಷ್ಟು ಜನ ಚುನಾವಣೆಯನ್ನು ಬಯಸುತ್ತಿಲ್ಲ. ಇದರಿಂದ ತೆರಿಗೆ ಪಾವತಿದಾರರು ಮತ್ತಷ್ಟು ಸಂಕಷ್ಟಕ್ಕೀಡಾಗುತ್ತಾರೆ. ಮಹಾರಾಷ್ಟ್ರದೊಂದಿಗಿನ ಜಲವಿವಾದ ಹಾಗೂ ಗಡಿ ವಿವಾದಗಳು ಮತ್ತೆ ನೆನೆಗುದಿಗೆ ಬೀಳುತ್ತವೆ ಎಂದು ಚಿಮೂ ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ತುಮಕೂರು ವಿವಿ ಉಪಕುಲಪತಿಗಳಾದ ಓ.ಅನಂತರಾಮಯ್ಯ ಹಾಗೂ ವಿವಿ ಕುಲಸಚಿವರಾದ ರಂಗನಾಥ್ ಉಪಸ್ಥಿತರಿದ್ದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications