ವಂಡರ್ ಬಾಯ್ ಬುಧಿಯಾಗೆ ಕಿರುಕುಳ : ಕೋಚ್ ಬಂಧನ
ಭುವನೇಶ್ವರ್ , ಆಗಸ್ಟ್ 13 : ಮ್ಯಾರಥಾನ್ ಬಾಲಕ ಬುಧಿಯಾ ಸಿಂಗ್‌ಗೆ ಕಿರುಕುಳ ನೀಡಿದ ಆರೋಪದ ಮೇಲೆ, ತರಬೇತುದಾರ ಬಿರಂಚಿ ದಾಸ್ ಅವರನ್ನು,ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಕೋಚ್ ಬಿರಂಚಿ ದಾಸ್ ನನಗೆ ಬಹುಕಾಲದಿಂದ ಹೊಡೆಯುತ್ತಾರೆ, ಸರಿಯಾಗಿ ಊಟ ನೀಡುತ್ತಿಲ್ಲ,ಕಿರುಕುಳ ನೀಡುತ್ತಿದ್ದಾರೆ ಎಂದು ಬುಧಿಯಾ ಆರೋಪ ಮಾಡಿದ ಹಿನ್ನೆಲೆಯಲ್ಲಿ, ಈ ಬೆಳವಣಿಗೆ ನಡೆದಿದೆ.
ಖಾಸಗಿ ಚಾನೆಲ್ ಗೆ ಸಂದರ್ಶನ ನೀಡಿದ ಬುಧಿಯಾ ಮತ್ತು ಅವನ ತಾಯಿ, ಬಿರಂಚಿ ದಾಸ್ ವರ್ತನೆ ಬಗ್ಗೆ ಅಸಮಾಧಾನ ಪ್ರದರ್ಶಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಿರಂಚಿ ದಾಸ್, ಇದೆಲ್ಲವೂ ಸುಳ್ಳಿನ ಕಂತೆ. ಕೆಲವರ ಮಾತು ಕೇಳಿ ನನ್ನ ವಿರುದ್ಧ ಈ ಆರೋಪಗಳನ್ನು ಮಾಡಿದ್ದಾರೆ ಎಂದಿದ್ದರು.
ಒರಿಸ್ಸಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಪ್ರಮಿಳಾ ಮಲ್ಲಿಕ್, ಬಿರಂಚಿ ದಾಸ್ ಬಂಧನವನ್ನು ಸಮರ್ಥಿಸಿದ್ದಾರೆ. ತಮ್ಮ ಅನುಕೂಲಕ್ಕಾಗಿ ಬುಧಿಯಾ ಎಂಬ ಬಾಲಕನನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಇದು ಸಲ್ಲದು ಎಂದು ಸಚಿವೆ ಅಭಿಪ್ರಾಯಪಟ್ಟಿದ್ದಾರೆ.
ಪುರಿಯಿಂದ ಭುವನೇಶ್ವರದ ವರೆಗಿನ 65ಕಿ.ಮೀ.ದೂರವನ್ನು ಮ್ಯಾರಥಾನ್ ಓಟದ ಮುಖಾಂತರ ಕ್ರಮಿಸಿದ ಐದು ವರ್ಷದ ಬುಧಿಯಾ, ಲಿಮ್ಕಾ ದಾಖಲೆ ಸೃಷ್ಟಿಸಿದ ವಿಚಾರ ಇಲ್ಲಿ ಉಲ್ಲೇಖನೀಯ .
(ಏಜನ್ಸೀಸ್)












Click it and Unblock the Notifications