ಬಂಜಗೆರೆ ಪುಸ್ತಕ ಗಲಾಟೆ: ಬೀದರ್ ಜಿಲ್ಲಾ ಬಂದ್ ಯಶಸ್ವಿ
ಬೀದರ್, ಜುಲೈ 13 : ಬಂಜಗೆರೆ ಜಯಪ್ರಕಾಶ್‌ರ ಆನುದೇವ ಹೊರಗಣವನು ಕೃತಿ ನಿಷೇಧಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಶುಕ್ರವಾರದ ಬಂದ್ ಕರೆಗೆ, ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಅಲ್ಲಲ್ಲಿ ಕಲ್ಲು ತೂರಿದ ಘಟನೆಗಳನ್ನು ಬಿಟ್ಟರೆ, ಬಂದ್ ಶಾಂತಿಯುತವಾಗಿತ್ತು. ಬೀದರ್, ಭಾಲ್ಕಿ, ಬಸವಕಲ್ಯಾಣ, ಹುಮ್ನಾಬಾದ್, ಔರಾದ್ ಪಟ್ಟಣಗಳಲ್ಲಿ ವಾಣಿಜ್ಯ ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು.
ಬಸವಣ್ಣ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಈ ಪುಸ್ತಕದ ಬಗ್ಗೆ ಗೃಹ ಸಚಿವ ಎಂ.ಪಿ.ಪ್ರಕಾಶ್ ಮೆದು ಧೋರಣೆ ಅನುಸರಿಸುತ್ತಿದ್ದಾರೆ. ಕೂಡಲೇ ಸರ್ಕಾರ ಪುಸ್ತಕ ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನಂತರ ಎಂ.ಪಿ.ಪ್ರಕಾಶ್ ಮತ್ತು ಬಂಜಗೆರೆ ಜಯಪ್ರಕಾಶ್‌ರ ಪ್ರತಿಕೃತಿ ದಹಿಸಿದರು.
ಆಂಧ್ರ ಸಾರಿಗೆ ನಿಗಮದ ಬಸ್‌ಗೆ ಕಿಡಿಗೇಡಿಗಳು ಕಲ್ಲು ತೂರಿದರು. ಬಂದ್ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ, ಬಸ್ ಸಂಚಾರವನ್ನು ಶುಕ್ರವಾರ ಬೆಳಗ್ಗೆಯಿಂದಲೇ ನಿಲ್ಲಿಸಿತ್ತು.
(ಯುಎನ್ಐ)











Click it and Unblock the Notifications