ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರಿಗೆ ‘ಮಾಸ್ತಿ ಪ್ರಶಸ್ತಿ’
ಬೆಂಗಳೂರು : ನಾಡಿನ ಹೆಸರಾಂತ ಕವಿ, ಅನುವಾದಕ 71ರ ಹರೆಯದ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರಿಗೆ 2007ನೇ ಸಾಲಿನ ಮಾಸ್ತಿ ಪ್ರಶಸ್ತಿ ಸಂದಿದೆ.
ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ ಸಮಿತಿ ನೀಡುವ ಈ ಪ್ರಶಸ್ತಿಯು 25ಸಾವಿರ ರೂ. ನಗದನ್ನು ಒಳಗೊಂಡಿದೆ. ಮಾವಿನಕೆರೆ ರಂಗನಾಥನ್, ಪ್ರೊ.ಎಲ್.ಎಸ್.ಶೇಷಗಿರಿ ರಾವ್, ಪ್ರೊ.ಎಂ.ಎಚ್.ಕೃಷ್ಣಯ್ಯ, ಜಿ.ಎನ್.ರಂಗನಾಥರಾವ್, ಡಾ.ಗೀತಾ ರಾಮಾನುಜಮ್ ಮತ್ತು ಉಷಾಕೇಸರಿ ಅವರನ್ನು ಒಳಗೊಂಡ ಆಯ್ಕೆ ಸಮಿತಿ, ಲಕ್ಷ್ಮೀನಾರಾಯಣ ಭಟ್ಟರನ್ನು ಆಯ್ಕೆ ಮಾಡಿದೆ.
ಭಟ್ಟರ ಬಗ್ಗೆ ಎರಡು ಮಾತು...
ಭಾವಗೀತೆಗಳ ಮೂಲಕ ಜನಮನಗೆದ್ದ ಲಕ್ಷ್ಮೀನಾರಾಯಣ ಭಟ್ಟರು ಶಿವಮೊಗ್ಗೆಯಲ್ಲಿ ಜನಿಸಿದರು. ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಆರ್ಟ್ಸ್ ಫ್ಯಾಕಲ್ಟಿಯ ಡೀನ್ ಆಗಿ ದುಡಿದಿರುವ ಅವರು, ಸಾಹಿತಿಯಾಗಿ ಹೆಸರು ಮಾಡಿದ್ದಾರೆ.
ಭಟ್ಟರು ವೃತ್ತ, ಸುಳಿ, ಚಿತ್ರಕೂಟ ಮೊದಲಾಗಿ ಎಂಟು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ದೀಪಿಕಾ, ಭಾವಸಂಗಮ, ನೀಲಾಂಜನ ಮುಂತಾದ ಮಧುರ ಭಾವಗೀತೆಗಳ ಸಂಕಲನಗಳನ್ನು ರಚಿಸಿದ್ದಾರೆ. ವಿವೇಚನ, ಹೊರಳು ದಾರಿಯಲ್ಲಿ ಕಾವ್ಯ -ಇತ್ಯಾದಿ ವಿಮರ್ಶನ ಗ್ರಂಥಗಳಿಂದ ಅವರು ಖ್ಯಾತರು. ಷೇಕ್ಸ್‌ಪಿಯರ್, ಎಲಿಯಟ್ ಮತ್ತು ಯೇಟ್‌ರಂಥ ಜಗತ್ಪ್ರಸಿದ್ಧ ಲೇಖಕರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಅಮೆರಿಕನ್ನಡಿಗರ ಕೋರಿಕೆ ಮೇರೆಗೆ ಅವರು ‘ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ’ ಎಂಬ ನಾಲ್ಕು ಸೀಡಿಗಳ ಸಂಪುಟದಲ್ಲಿ ಕನ್ನಡ ಸಾಹಿತ್ಯವನ್ನು ಪರಿಚಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications