ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಕ್ಕ’ ಕನ್ನಡ ಸಮ್ಮೇಳನ : ಕಲಾವಿದರ ಆಯ್ಕೆಗೆ ಸೂತ್ರ!

By Staff
|
Google Oneindia Kannada News

ಬೆಂಗಳೂರು : ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ಕೃಪಾಪೋಷಿತ ಕಲಾವಿದರ ಆಯ್ಕೆ ಬಗ್ಗೆ ರಾಜ್ಯ ಸರ್ಕಾರ ಎಚ್ಚೆತ್ತಿದೆ. ಈ ವರ್ಷದಿಂದ ಅಕ್ಕ ಸಂಸ್ಥೆಯ ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಕವಿ, ಕಲಾವಿದ, ಗಾಯಕ, ಗಾಯಕಿಯರಿಗಾಗಿ ವಿಶೇಷ ಮಾರ್ಗಸೂಚಿಯನ್ನು ಸರ್ಕಾರ ಸಿದ್ಧಪಡಿಸಲಿದೆ.

ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಮನೋಹರ್‌ ಮಸ್ಕಿ ಅವರ ಪ್ರಶ್ನೆಗೆ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಮಹದೇವ ಪ್ರಸಾದ್‌ ಈ ವಿಷಯವನ್ನು ಸ್ಪಷ್ಟಪಡಿಸಿದರು.

ಕಳೆದ 2 ವರ್ಷದಲ್ಲಿ ಸರ್ಕಾರದ ಪರವಾಗಿ 4 ಜನ ಅಧಿಕಾರಿಗಳು ಹಾಗೂ 57 ಜನ ಕಲಾವಿದರು ಸಮ್ಮೇಳನಕ್ಕೆ ಹೋಗಿದ್ದರು. 2006 ಇಸವಿಯಲ್ಲಿ ಕಲಾವಿದರ ಖರ್ಚು ವೆಚ್ಚದ ದರ ಸುಮಾರು 32.74 ಲಕ್ಷ ರೂ.ಗಳನ್ನು ಸರ್ಕಾರ ಭರಿಸಿತ್ತು. ಕಲಾವಿದರ ಆಯ್ಕೆಯಲ್ಲಿ ತಾರಾತಮ್ಯವಾಗಿ ಗೊಂದಲವಾಗಿತ್ತು. ಉತ್ತರ ಕರ್ನಾಟಕದ ಕಡೆಯವರನ್ನು ಕಡೆಗಣಿಸಿದ್ದಾಗಿ ಕೆಲವರು ದೂಷಿಸಿದರೆ, ಸಿನೆಮಾ ಹಾಗೂ ನಾಟಕರಂಗದಿಂದ ಕಲಾವಿದರನ್ನು ಆರಿಸಿರಲಿಲ್ಲ ಎಂದು ಇನ್ನು ಕೆಲವರು ಅಪವಾದ ಹೊರಿಸಿದ್ದರು.

ಅಕ್ಕ ಸಮ್ಮೇಳನ ಕೇವಲ ಕೆಲ ಕಲಾವಿದರ ಹಾಗೂ ಅವರ ಮನೆಯವರಿಗೆ ಮಾತ್ರ ಎಟುಕುವ ಸಿಹಿ ದ್ರಾಕ್ಷಿಯಾಗಿದೆ. ಉಳಿದವರಿಗೆ ಅದು ಹುಳಿ ಎಂದು ಕಲಾವಿದ ಮುಖ್ಯಮಂತ್ರಿ ಚಂದ್ರು ಲೇವಡಿ ಮಾಡಿದ್ದರು.

ಇದೆಲ್ಲದರ ಪರಿಹಾರವಾಗಿ ರಾಜ್ಯ ಸರ್ಕಾರ ಪಾರದರ್ಶಕವಾದ ನೀತಿಯನ್ನು ರೂಪಿಸಿ, ಸರಿಯಾದ ಕ್ರಮದಲ್ಲಿ ಕಲಾವಿದರನ್ನು ಆರಿಸಿ, ಕಳಿಸಲಾಗುವುದು ಎಂದು ಸಚಿವ ಮಹದೇವ ಪ್ರಸಾದ್‌ ಹೇಳಿದರು.
(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X