ಸಿಬಿಎಸ್‌ಇ-ಐಸಿಎಸ್‌ಇ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ
ಬೆಂಗಳೂರು : ಹೊರದೇಶ ಹಾಗೂ ಹೊರರಾಜ್ಯದಿಂದ ವಲಸೆಬರುವ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ರಾಜ್ಯ ಪಠ್ಯಕ್ರಮಕ್ಕೆ ವರ್ಗಾವಣೆ ಬಯಸಿದರೆ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕೆಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಈ ಕುರಿತು ವಿಚಾರಣೆ ಗುರುವಾರ(ಮಾರ್ಚ್ 08) ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಮಮೋಹನರೆಡ್ಡಿ, ವಿದ್ಯಾರ್ಥಿಗಳು ಎಲ್ಲಿಯವರೆಗೆ ಒಂದು ರಾಜ್ಯದಲ್ಲಿ ಓದುತ್ತಿರುತ್ತಾರೋ ಅಲ್ಲಿಯವರೆಗೆ ಆ ರಾಜ್ಯದ ಭಾಷೆ ಕಲಿಯುವುದು ಕಡ್ಡಾಯ ಎಂದು ಹೇಳಿದರು.
ಸರ್ಕಾರದ ಪರ ವಾದ ಮಂಡಿಸಿದ ವಕೀಲ ಮನೋಹರ, ರಾಜ್ಯಕ್ಕೆ ಬಂದಿರುವ ವಿದ್ಯಾರ್ಥಿಗಳು ಸಿಬಿಎಸ್‌ಇ ಅಥವಾ ಐಸಿಎಸ್‌ಇ ಪಠ್ಯಕ್ರಮದಲ್ಲಿ ಓದದಂತೆ ಸರ್ಕಾರ ತಾಕೀತು ಮಾಡುತ್ತಿಲ್ಲ. ಬದಲಿಗೆ ಕನ್ನಡ ಕಲಿಕೆ ಕಡ್ಡಾಯ ಮಾಡಲಾಗಿದೆ. ಇಂತಹ ವಿದ್ಯಾರ್ಥಿಗಳಿಗೆ 15 ಕೃಪಾಂಕಗಳನ್ನೂ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಹಿನ್ನೆಲೆ : ಹೊರದೇಶ ಹಾಗೂ ಹೊರರಾಜ್ಯದಿಂದ ವಲಸೆಬರುವ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದಲ್ಲಿ ಓದಿದ ವಿದ್ಯಾರ್ಥಿಗಳು, ರಾಜ್ಯಪಠ್ಯಕ್ರಮಕಕ್ಕೆ ವರ್ಗಾವಣೆ ಮಾಡಿಕೊಂಡರೆ ಕಡ್ಡಾಯವಾಗಿ ಕನ್ನಡವನ್ನು ಒಂದು ವಿಷಯವಾಗಿ ಕಲಿಯಬೇಕೆಂದು 2006ರಲ್ಲಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅನೇಕ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications