ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಜಿ-ಬಿಜಿ ನಗರ, ಸ್ನೇಹಮಯಿ ನಗರ , ನನ್ನೀ ಶಿವಾಜಿನಗರ..

By Staff
|
Google Oneindia Kannada News


ಎಲ್ಲ ಭಾಷೆ, ಜಾತಿ, ಧರ್ಮಕ್ಕೆ ಸೇರಿದ ನಮ್ಮಜನ ಸಾಮರಸ್ಯದಿಂದ ಬದುಕುವ ಬಡಾವಣೆ ಗಜಿ-ಬಿಜಿನಗರ ಶಿವಾಜಿನಗರ. ನಾವಾಯಿತು ನಮ್ಮ ಪಾಡಾಯಿತು ಎಂದು ಬದುಕುತ್ತಿರುವ ಈ ಜನಸಂಸ್ಕೃತಿಯ ಬಗೆಗೆ ಏಕೀ ತಪ್ಪುಗ್ರಹಿಕೆ? ಒಂದು ಬಡಾವಣೆಯ ಒಡಲಾಳದ ನೋಟ!

A flower shop in Shivajinagar - Image courtesy : Ravikumar, Metrobloggerಮೂವತ್ತು ವರ್ಷದ ಒಬ್ಬ ಮುಸ್ಲಿಮ್‌ ಹದಿನಾರು ವರ್ಷದ ಹಿಂದೂ ಹುಡುಗನೊಂದಿಗೆ ಪೋಲಿಸ್‌ ಸ್ಟೇಷನ್ನಿಗೆ ಕಂಪ್ಲೇಂಟ್‌ ರಿಜಿಸ್ಟರ್‌ ಮಾಡಿಸಲು ಹೋಗುತ್ತಾನೆ. ವಿಷಯ ವಿವರಿಸುತ್ತಾನೆ. ಇವರುಗಳ ಪರಿಚಯವಿಲ್ಲದ ಪೋಲಿಸ್‌ ಪೇದೆ - ’ಅಸಾಲ್ಟ್‌ ಕಂಪ್ಲೈಂಟ್‌ ತಾನೆ?’ ಎಂದು ಕೇಳಿದಾಗ, ಮುಸ್ಲಿಮ್‌ ಹೌದೆನ್ನುತ್ತ ಹಿಂದೂ ಹುಡುಗನನ್ನು ತೋರಿಸಿ ’ಇವನ ಮೇಲೆ ಹಲ್ಲೆ ನಡೆದಿದ್ದು’ ಎನ್ನುತ್ತಾನೆ.

’ಇವನೇನು ನಿನ್ನ ತಮ್ಮನಾ?’
’ಅಲ್ಲ. ಫ‚ೆ್ರಂಡ್‌.’
’ಸರಿ. ಏನ್‌ ಹೆಸರು?’

ಇಬ್ಬರ ಹೆಸರನ್ನೂ ಕೇಳಿದ ಮೇಲೆ ಪೋಲಿಸಿಗೆ ಆಶ್ಚರ್ಯ. ’ಏನ್ರೀ ನೀವು, ಮುಸಲ್ಮಾನರಾಗಿ ಹಿಂದು ಪರವಾಗಿ ಕಂಪ್ಲೇಂಟ್‌ ಕೊಡೋದಕ್ಕೆ ಬಂದಿದ್ದೀರ, ಪರ್ವಾಗಿಲ್ವೆ.’

’ಇಲ್ಲಿ ಅದೆಲ್ಲ ಇಲ್ಲ ಸ್ವಾಮಿ. ಹಿಂದು ಮುಸ್ಲಿಮ್‌ ಎಲ್ಲಾ ಒಂದೇ. ಅದೇನಿದ್ರೂ ಆ ಕಡೆ- ರಾಜಾಜಿನಗರ, ಮಲ್ಲೇಶ್ವರದ ಕಡೆ’ ಎಂದು ಆ ಮುಸ್ಲಿಮ್‌ ಹೇಳಿದಾಗ ಪೋಲೀಸು ಸುಮ್ಮನೆ ಕಂಪ್ಲೇಂಟ್‌ ಬರೆಯಿಸಿಕೊಳ್ಳುತ್ತಾನೆ.

****

ಎಂಟು ವರ್ಷಗಳ ಹಿಂದೆ ನಡೆದ ಈ ಘಟನೆಯಲ್ಲಿ ಹಿಂದೂ ಹುಡುಗನ ಪರವಾಗಿ ನಿಂತ ಮುಸಲ್ಮಾನನ ಹೆಸರು: ಫಾರೂಕ್‌ ಅಹಮದ್‌

ಹಿಂದೂ ಹುಡುಗ: ವಿಕ್ರಮ ಹತ್ವಾರ

ಏರಿಯಾ: ಶಿವಾಜಿನಗರ!

ಎರಡು-ಮೂರು ದಿವಸ ಊರಲ್ಲಿ ಇರದೆ, ನಮ್ಮ ಬೆಂಗಳೂರಿನ ಸುದ್ದಿಯೂ ಕೇಳಿರದೆ ಮನೆಗೆ ಬಂದು ನೋಡಿದರೆ ನಾನು ಹದಿನೆಂಟು ವರ್ಷಗಳ ಕಾಲ ನೆಲೆಸಿದ್ದ ಶಿವಾಜಿನಗರ ಹೊತ್ತಿ ಉರಿಯುತ್ತಿದೆ. ಎಷ್ಟೇ ತಿರುಗಾಟವಿದ್ದರೂ ಏನೇ ಕೆಲಸಗಳಿದ್ದರೂ ಶಿವಾಜಿನಗರದಲ್ಲುಂಟಾದ ಕಂಪನ ಮನಸ್ಸನ್ನು ಕೊರೆಯುತ್ತಲೇ ಇದೆ.

ಇತ್ತೀಚೆಗೆ ಇಮ್ರಾನ್‌ನನ್ನು ಹಿಡಿದು ವಿಚಾರಣೆ ನಡೆಸಿದಾಗ ಕೋಮು ಗಲಭೆ ಎಬ್ಬಿಸುವ ಸಲುವಾಗಿಯೇ ಕೆಲವರು ಕರ್ನಾಟಕದೊಳಕ್ಕೆ ನುಸುಳಿದ್ದಾರೆ ಎನ್ನುವ ಅಂಶ ಬಹಿರಂಗವಾಗಿದೆ. ಎಲ್ಲರಂತೆ ನಾನೂ ಆತಂಕಗೊಂಡೆ. ಮಂಗಳೂರಿನಲ್ಲಿ ಗಲಭೆಯಾಗಿತ್ತು. ಮೊನ್ನೆಯಷ್ಟೆ ಕಾಸರಗೋಡಿನಲ್ಲಿ ಅಯ್ಯಪ್ಪ ಭಕ್ತರ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಯಿತು. ಭಾರತ ಮಾತೆಯ ಭಾವಚಿತ್ರವಿರುವ ಪೋಸ್ಟರ್‌ ಸುಟ್ಟು ಹಾಕಿದರು. ಸಾಕ್ಷಾತ್‌ ಭಾರತಾಂಬೆಯನ್ನೇ ನಗ್ನಳನ್ನಾಗಿ ಚಿತ್ರಿಸಿದರು. ಅಫ್‌ಜಲ್‌ ಗುರುವಿಗೆ ಕ್ಷಮಾದಾನ ನೀಡಿ ಅಂತ ಬೊಬ್ಬೆ ಹೊಡೆದರು. ಶಿವಾಜಿನಗರದಲ್ಲಿ ನಡೆದ ಗಲಾಟೆ, ಅದರ ಹಿನ್ನಲೆ ಅರಿತ ಮೇಲೆ ನಮ್ಮನ್ನು ಒಡೆಯಲು, ನಮ್ಮ ನೆಮ್ಮದಿಯನ್ನು ಹಾಳು ಮಾಡಲು ಈ ರಾಜಕಾರಣಿಗಳು, ಬುದ್ಧಿಜೀವಿಗಳೇ ಸಾಲದೇನು, ಹೊರಗಿನಿಂದ ಬೇರೆ ಜನ ಬರಬೇಕೇನು? ಅಂತ ಅನಿಸತೊಡಗಿದೆ.

ಶಿವಾಜಿನಗರದಲ್ಲಿ ನನ್ನ ಅನೇಕ ಮುಸಲ್ಮಾನ ಗೆಳೆಯರಿದ್ದಾರೆ. ರಸಲ್‌ ಮಾರ್ಕೆಟ್ಟಿನಿಂದ ಆಚೆಗಿರುವ ಏರಿಯಾ ಬಿಟ್ಟರೆ ಇಡಿ ಶಿವಾಜಿನಗರದ ಗಲ್ಲಿಗಲ್ಲಿಗಳೂ ನನಗೆ ಪರಿಚಿತ. ಶಿವಾಜಿನಗರವೆಂದರೆ ಪಕ್ಕದ ಮನೆಯವರು ಯಾರೆಂದು ತಿಳಿದಿರದ, ತಾನು ತನ್ನ ಮನೆ-ಆಫೀಸು ಎನ್ನುವುದಷ್ಟೇ ಪ್ರಪಂಚವಾಗಿರುವ ಏರಿಯಾ ಅಲ್ಲ. ಇವತ್ತಿಗೂ ಅದೊಂದು ರೀತಿಯ ಗ್ರಾಮ್ಯ ಸ್ವಭಾವವುಳ್ಳ ಪ್ರದೇಶ, ಅದೊಂದು ಕುಟುಂಬ. ಅಲ್ಲಿರುವ ಬಹುಪಾಲು ಜನರಿಗೆ ಅಲ್ಲಲ್ಲಿಯೇ ಬಟ್ಟೆ ಅಂಗಡಿ, ಮೆಡಿಕಲ್‌ ಸ್ಟೋರು, ಚಪ್ಪಲಿ ಅಂಗಡಿ, ಟೀ ಸ್ಟಾಲ್‌, ತರಕಾರಿ ವ್ಯಾಪಾರ, ದಿನಸಿ ಅಂಗಡಿ, ಹೊಟೇಲು ಅಂತೆಲ್ಲ ಆ ಪ್ರಪಂಚದೊಳಕ್ಕೇ ಯಾವುದಾದರೊಂದು ವ್ಯವಹಾರ.

ಎಲ್ಲರೊಂದಿಗೂ ಗೆಳತನವಿಲ್ಲದಿದ್ದರೂ ಹೆಚ್ಚುಕಮ್ಮಿ ಎಲ್ಲರೂ ಒಬ್ಬರಿಗೊಬ್ಬರು ಪರಿಚಿತರು. ಬಜ್ಜಿ ಮಾರುವವನ ಕುಟುಂಬದ ವಿವರಗಳು ಪೂರ್ತಿಯಾಗಿ ಗೊತ್ತಿಲ್ಲದಿದ್ದರೂ ಅವರ ಮನೆ ಎಲ್ಲಿ ಎಂದು ಗೊತ್ತಿರುತ್ತದೆ. ಹಿಂದೂಗಳ ಹೋಟೆಲಿನಲ್ಲಿ ಬಟ್ಟೆ ಅಂಗಡಿಗಳಲ್ಲಿ ಮುಸಲ್ಮಾನರದ್ದು, ಮುಸಲ್ಮಾನರ ಗುಜರಿಯ ಅಂಗಡಿಗಳಲ್ಲಿ ಹಿಂದೂಗಳದ್ದು ಕೊಂಡುಕೊಳ್ಳುವ ವ್ಯಾಪಾರವಿರುತ್ತದೆ. ಮುಸಲ್ಮಾನರಿಗು ಹಿಂದೂಗಳಿಗು ವೈಮನಸ್ಸು ಮೂಡುವಂತಹ ಕಮ್ಯೂನಲ್‌ ಟೆಂಶನ್‌ ಹುಟ್ಟಿಸುವಂತಹ ಯಾವುದೇ ಸಮಸ್ಯೆ ಅಲ್ಲಿಲ್ಲ. ಭಾರತದ ಸುವರ್ಣ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಓ.ಪಿ.ಎಚ್‌ ರೋಡ್‌, ಇಬ್ರಾಹಿಮ್‌ ಸಾಹೇಬ್‌ ಸ್ಟ್ರೀಟ್‌, ತಾಜ್‌ ಹೋಟೆಲ್‌ ಸರ್ಕಲ್‌ ಬಳಿ ಇರುವ ಪ್ರತಿಯಾಬ್ಬ ಮುಸಲ್ಮಾನರ ಅಂಗಡಿಯ ಮೇಲೆ ರಾಷ್ಟ್ರಧ್ವಜ ನಲಿಯುತಿತ್ತು. ಇದು ನಮ್ಮ ದೇಶ ಎನ್ನುವ ಅಭಿಮಾನ ಅವರಿಗಿದೆ. ಆದರೆ ಅಲ್ಲೂ ಕೆಲವರು ಪಾಕಿಸ್ತಾನದ ಪರ ನಿಲ್ಲುವವರಿದ್ದಾರೆ. ಅವರನ್ನು ವಿರೋಧಿಸುವ ಮುಸಲ್ಮಾನರೂ ಇದ್ದಾರೆ.

ಶಿವಾಜಿನಗರ ಅಂದಾಕ್ಷಣ ಮುಸ್ಲಿಮ್‌ ಏರಿಯಾ ಅಂತ ಮನಸ್ಸಿಗೆ ಬಂದರೂ ಅಲ್ಲಿನ ಜ್ಯುವೆಲ್ಲರಿ ಸ್ಟ್ರೀಟ್‌, ವೀರಪಿಲ್ಲೈ ಸ್ಟ್ರೀಟ್‌ಗಳಲ್ಲಿ ಮಾರ್ವಾಡಿಗಳೂ ತೆಲುಗರೂ, ನಾರಾಯಣ ಪಿಲ್ಲೈ ಸ್ಟ್ರೀಟ್‌, ಆರ್ಮ್‌ಸ್ಟ್ರಾಂಗ್‌ ರೋಡ್‌, ಕಾಮರಾಜ ರಾಸ್ತೆಗಳಲ್ಲಿ ತಮಿಳರಿದ್ದಾರೆ. ಬಹುಸಂಖ್ಯಾತ ಮುಸಲ್ಮಾನರೇ ಇದ್ದರೂ ಎಂದಿಗೂ ಅವರು ಹಿಂದೂಗಳ ಮೇಲೆ ದ್ವೇಷ ಸಾಧಿಸಿದವರಲ್ಲ. ಬಾಬರ್‌ ಮಸೀದಿ ಧ್ವಂಸವಾದ ಸಂದರ್ಭದಲ್ಲೂ ಭಾರೀ ಅನಾಹುತಗಳು ನಡೆದಿರಲಿಲ್ಲ. ಇದ್ದಕ್ಕಿದ್ದಂತೆ ಪ್ರಚೋದನೆಗೊಂಡು ಅಂಗಡಿ ಲೂಟಿ ಮಾಡಿ ವಾಹನಗಳನ್ನು ಸುಟ್ಟು ಹಾಕುವಷ್ಟು ರೊಚ್ಚು ಅಲ್ಲಿನ ಯಾವ ಜನರಿಗೂ ಇಲ್ಲ. ಅಂತದ್ದರಲ್ಲಿ ಅಲ್ಯಾರೋ ಸದ್ದಾಂ ಹುಸೇನ್‌ನನ್ನು ನೇಣಿಗೆ ಹಾಕಿದರೆ, ಅವನ ತಿಥಿ ಮುಗಿದ ಮೇಲೆ, ಇಲ್ಲಿ ಹಿಂದೂ ಸಮಾವೇಶಕ್ಕೆ ಎರಡು ದಿವಸವಿದೆ ಎನ್ನುವಾಗ ಪ್ರತಿಭಟನೆ ನಡೆಸಿ ಗಲಭೆ ಎಬ್ಬಿಸುತ್ತಾರೆಂದರೆ ಇದರ ಹಿಂದಿರುವವರು ಎಂತಹ ವಿಕಾರ ಮನಸ್ಸಿನವರಿರಬೇಕು?. ಅಲ್ಲಿ ನಡೆದಿರುವ ಗಲಭೆ ನೋಡಿದರೆ ಅದೊಂದು ಪೂರ್ವ ನಿವೋಜಿತ ಸಂಚು ಎಂಬುದು ಮನವರಿಕೆಯಾಗುತ್ತದೆ. ಅದೂ ಸಾಲದೆಂಬಂತೆ ರಾಜಕೀಯದ ಹೋರಿಗಳು ಬೌರಿಂಗ್‌ ಆಸ್ಪತ್ರೆಗೆ ನುಗ್ಗಿ ಒಂದಿಷ್ಟು ಸಗಣಿ ಹಾಕಿ ಬರುತ್ತವೆ.

ಮೊನ್ನೆ ನಡೆದ ಗಲಭೆಯಿಂದಾಗಿ ಶಿವಾಜಿನಗರದ ನೆಮ್ಮದಿಗೆ ಬೆಂಕಿ ಬಿದ್ದರೂ ರಾಜಕೀಯದವರ ಹೊಟ್ಟೆ ಹಾಲಿನಿಂದ ತುಂಬಿದೆ. ಎಲ್ಲಿಯಾದರು ಹಿಂದೂ ಸಮಾವೇಶ ನಡೆದರೆ ಅಲ್ಲೊಂದು ಗಲಾಟೆ ನಡೆಯಲೇ ಬೇಕು ಎಂದು ಶಪಥ ತೊಟ್ಟಿರುವ ’ಸೌಹಾರ್ದ ಪ್ರಿಯ’ರ ಅಭಿಲಾಷೆಯನ್ನು ಪೂರೈಸಿದೆ. ದಟ್ಸ್‌ಕನ್ನಡದ ಓದುಗರೆಲ್ಲ ಸಭ್ಯರಾದ ಕಾರಣ ರಾಜಕೀಯದವರಿಗಿರುವ ಬಿರುದು-ವಿಶೇಷಣಗಳನ್ನೆಲ್ಲ ಬರೆಯಲು ಸಂಕೋಚಪಡುತ್ತ, ಈ ಗಲಭೆಗೆ ಕಾರಣರಾದ ಭಾರತ ಜನನಿಯ ತನುಜಾತೆಯ ನಾಯಕರಿಗೆ ’ಜೈ’ ಎನ್ನುತ್ತ, ನನ್ನ ಸ್ನೇಹಮಯಿ ಶಿವಾಜಿನಗರ ನಾನಿದ್ದಾಗ ಹೇಗಿತ್ತೋ ಎದೆಂದೂ ಹಾಗೆಯೇ ನೆಮ್ಮದಿಯಿಂದಿರಲಿ ಎಂದು ಆಶಿಸುತ್ತ ಈ ಲೇಖನ ಮುಗಿಸುತ್ತೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X