• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂದಕಾಳೂರು ಹೇಗಿತ್ತು, ಹೇಗಾಯ್ತು ಗೊತ್ತಾ?

By Super
|

ಆಟೋಗಳದೊಂದು ಧಿಮಾಕು!

ವರುಷಕ್ಕೊಮ್ಮೆ ಸಿಂಗಾಪುರದಿಂದ ಬರುವ ನಾವು ಬೆಂಗಳೂರಿನಲ್ಲಿ ಪರಾವಲಂಬಿಗಳು. ಬಸ್‌ ಗೊತ್ತಿಲ್ಲ, ಟ್ಯಾಕ್ಸಿ ಹೆಚ್ಚಿಲ್ಲ, ಆಟೋದವನೇ ಗತಿ. ಅವ್ರ ಆಟಾಟೋಪ ಸಹಿಸಲೇ ಬೇಕು. ರಿಕ್ಷಾದವ ಕರೆದುಕೊಂಡು ಹೋದದ್ದೇ ದಾರಿ. ಶ್ರೀನಗರಕ್ಕೆ ಇತ್ತ ಕಡೆ ಅಲ್ವಾಪ್ಪ ತಿರುಗೋದು ಎಂದು ಗೊತ್ತಿರುವ ದಾರಿ ಕಡೆ ಕೈ ತೋರಿದ್ರೆ ಕಡೆಗಣ್ಣಿನಿಂದ ಒಮ್ಮೆ ಕೆಕ್ಕರಿಸಿ ನೋಡಿ ಇದ್ಯಾವುದೋ ಗುಗ್ಗು ಕೂತಿದೆ ಎಂದುಕೊಂಡು ‘‘ಯಾಕ್ರಿ ಊರಿಗ್‌ ಹೊಸಬ್ರೇನ್ರೀ, ಇದು ಒನ್‌ ವೇ’’ ಎಂದು ಸಿಡುಕುತ್ತಾನೆ.

ಮತ್ತೊರ್ವ ಇದ್ಯಾಕಪ್ಪ ಈ ಕಡೆ ಬಂದ್ರಿ ಅಂದ್ರೆ, ಆ ಕಡೆ ಟ್ರಾಫಿಕ್‌ ಕಣ್ರೀ ಅಂತಾನೆ. ಇನ್ನೊಂದು ಸಲ ಮುಂದೆ ರೋಡ್‌ ಸರಿ ಇಲ್ಲ ಕಣ್ರೀ ಎಂದು ಅರ್ಧದಲ್ಲೇ ಇಳ್ಸಿ ಬಿಟ್ಟ ಮತ್ತೊಬ್ಬ ರಿಕ್ಷಾ ಮಹಾಶಯ. ಇನ್ನು ಕೆಲವರಿಗೆ ನನ್‌ ಮೂತಿ ನೋಡಿ ಅದೇನನ್ನಿಸಿತೋ ಏನೊ ‘‘ಕಿದರ್‌ ಜಾನಾ ಹೈ ಮ್ಯಾಡಮ್‌’’ ಎಂದ್ರು.

ಅಡ್ರೆಸ್‌ ಹುಡುಕುವ ತಾಪತ್ರಯ

ಪರಿಚಯಸ್ಥರ ಮನೆಗೆ ಹೋಗಲು ಅಡ್ರೆಸ್‌ ಹಿಡಿದು, ವರುಷದ ಹಿಂದೆ ನೋಡಿ ಗುರುತಿಟ್ಟುಕೊಂಡ ಅಂಗಡಿಯೋ, ಹೋಟೆಲ್ಲೋ, ಮನೆಯೋ ಇದೆ ಎಂದುಕೊಂಡರೆ ಅದು ಶುದ್ಧ ಮೂರ್ಖತನ. ಆ ಗುರುತಿನ ರೂಪು-ರೇಖೆ ಅಲ್ಲ ಅವಶೇಷವೂ ಇರೋಲ್ಲ. ಅಲ್ಲೊಂದು ದೊಡ್ಡ ಅರಳಿ ಮರ ಇತ್ತಲ್ಲಾ ಎಂದು ಯೋಚಿಸುವಷ್ಟರಲ್ಲೇ ಆ ಅರಳಿಮರ ಉರುಳಿ, ಸೌದೆ, ಇದ್ದಿಲು ಬೂದಿ ಆಗಿರುತ್ತೆ. ದಾರಿ, ಜಾಗ ಕಕ್ಕಾಬಿಕ್ಕಿ ಆದ್ರೆ ಇನ್ನು ಪರಿಚಯದವರನ್ನ ಯಾರನ್ನಾದ್ರು ‘‘ಹೇಗಿದೀರ’’ ಅಂದ್ರೆ, ಓಹ್‌ ಐಯಾಮ್‌ ಫೈನ್‌, ವೆನ್‌ ಡಿಡ್‌ ಯೂ ಕಮ್‌ ಅಂತಾರೆ. ಯಾಕ್ರಿ ಆಟುದ್ದ ಹೇಳೋಕ್ಕೆ ಬದ್ಲ್‌ ‘‘ಯಾವಾಗ್‌ ಬಂದ್ರಿ’’ ಎಂದು ಈಟುದ್ದ ಕೇಳ್‌ಬಾರ್ದೇ.

ಹೊರದೇಶದಲ್ಲಿರುವ ನಾವು ಮಕ್ಕಳಿಗೆ, ಯುವ ಜನತೆಗೆ ನಮ್ಮ ಸಂಸ್ಕೃತಿಯನ್ನು ಕಲಿಸಬೇಕು, ಅರಿವಾಗಬೇಕು ಎಂದು ಪ್ರಯತ್ನಿಸುತ್ತೇವೆ. ಕನ್ನಡ ಓದಲು ಕಲಿಸಿಲ್ಲ ಎಂಬ ಗಿಲ್ಟ್‌ ಫೀಲಿಂಗ್‌ ಬೆಳೆಸಿಕೊಂಡು ಸದ್ಯ ಮಾತನಾಡಲು ಕಲಿಸಿದೆವಲ್ಲಾ ಎಂದು ಸಮಾಧಾನ ಪಟ್ಟುಕೊಳ್ಳುತ್ತೇವೆ. ಕನ್ನಡ ಕಲಿ, ನಮ್ಮ ಭಾಷೆ ಉಳಿಸಿ-ಬೆಳೆಸಿ ಎಂದು ರಜಾದಿನಗಳಲ್ಲಿ ಮಕ್ಕಳನ್ನು ಕನ್ನಡ ಪಾಠ ಹೇಳಿಕೊಡುವ ಸ್ವಯಂ ಸೇವಕರ ಬಳಿ ಕಳಿಸುತ್ತೇವೆ.

ಮಕ್ಕಳು ಒಂದೆರಡು ಪದಗಳ ಕನ್ನಡ ಅಕ್ಷರಗಳನ್ನು ಗುರುತಿಸಿದರೆ, ಬರೆದರೆ, ಓದಿದರೆ ಒಂಥರಾ ಧನ್ಯತಾ ಭಾವ ಪಡೆದು ಪಾಪ ಪ್ರಜ್ಞೆಯಿಂದ ದೂರಾಗಲು ಪ್ರಯತ್ನಿಸುತ್ತೇವೆ. ಇದೇ ಬೆಂಗಳೂರಿನಲ್ಲಿ ಬಂದಾಗ ಸಂಬಂಧೀಕರ ಮಕ್ಕಳ ಕನ್ನಡ ಮಾತು ಕೇಳಿದ್ರೆ ನಮ್ಮ ಮಕ್ಕಳೇ ವಾಸಿ ಕನ್ನಡ ಶುದ್ಧವಾಗಿ ಮಾತನಾಡುತ್ತಾರೆ ಎನಿಸುತ್ತೆ. ಕಂಗ್ಲೀಷ್‌ ಭಾಷೆ ಅದು. ನೂರಿಪ್ಪತ್ತು ಅಂದ್ರೆ ಎಷ್ಟು ಆಂಟಿ, ನಂಗೆ ಕನ್ನಡ ಬರೋಲ್ಲ ಎಂದು ಮುದ್ದಾಗಿ ಮೊದ್ದಾಗಿ ಉತ್ತರಿಸುತ್ತಾರೆ ನೋಡಿ.

ನೂರಿಪ್ಪತ್ತು ಕಷ್ಟ ಆದ್ರೆ ವಿಳಾಸ ಹಿಡಿದು ಈ ಮನೆ ಎಲ್ಲಿ ಇದೆ ಎಂದು ಯಾರನ್ನಾದ್ರೂ ಕೇಳಿ ‘‘ಸ್ಟ್ರೈಟ್‌ ಹೊಗಿ ರೈಟ್‌ ತಿರುಗಿ ಕಾರ್ನರ್ನಲ್ಲಿ ಒಂದು ಬಾಟ ಶಾಪ್‌ ಅಲ್ಲಿಂದ ಲೆಪ್ಟಿಗೆ ಹೋದ್ರೆ ಫೋರ್ತ್‌ ಆರ್‌ ಫಿಪ್ತ್‌ ಹೌಸ್‌, ಯು ಕ್ಯಾನ್‌ ಸೀ ದ ನೇಮ್‌ ಪ್ಲೇಟ್‌’’ ಎಂಬ ಉತ್ತರ.

ಇನ್ನು ನಮ್ಮನ್ನು ಯಾರು ಮನೆಗೆ ಬನ್ನಿ ಎಂದು ಕರೆದರೂ ‘‘ಕಿವಿಗೆ ಬೀಳೋದು ಹೊಸ ಬಡಾವಣೆಯ ಹೆಸರು’’. ಮೊರೆ ಹೋಗಲೇ ಬೇಕು, ದಾರಿ ಯಾವುದಯ್ಯಾ ಆ ಜಾಗಕೆ ದಾರಿ ತೋರಿಸಯ್ಯಾ ಎಂದು. ನನ್ನ ತೌರಿನಲ್ಲಂತೂ ಕೇಳಿದಾಕ್ಷಣ ನನ್ನ ಅಣ್ಣ ಕಾಯ್ತಾನೇ ಇರ್ತಾನೆ..ಛೂ ಬಾಣ ಬಿಡೋಕ್ಕೆ.. ’’ ಅಮ್ಮಾ ತಾಯಿ, ಇದೀನಲ್ಲಾ ನಿನ್ನ ಹುಟ್ಟಿನಿಂದ ಪರ್ಮನೆಂಟ್‌ ಎಸ್ಕಾರ್ಟ್‌, ಎರಡು ದಿನ ರಜ ಹಾಕ್ತೀನಿ ಎಲ್ಲಿಗ್‌ ಹೋಗ್ಬೇಕೋ ಅಲ್ಲಿಗ್‌ ಹೋಗೋಣ. ಅಲ್ಲಿಂದ ಬಂದ್‌ ಇಲ್ಲಿ ಕಳ್ದ್‌, ಗಿಳ್ದ್‌ ಹೋದೀಯಾ. ನಿನ್ನ ವಾಪಸ್‌ ನಿನ್ನೂರಿಗೆ ರವಾನೆ ಮಾಡೋ ತನಕ ನಿನ್ನ ಜವಾಬ್ದಾರಿ ನಂಗೆ’’ ಅಂತಾನೆ. ಅವ್ನ ಮಾತು ನಿಜ ನೋಡಿ, ಹೊರದೇಶದಲ್ಲಿ ನಾವು ಪರದೇಶಿಗಳು ಸರಿ ಆದ್ರೆ ನಮ್ಮೂರಲ್ಲೂ ನಾವು ಪರದೇಶಿಗಳೇ. ನಮ್ಮೂರಲ್ಲೇ ನಾವು ಕಳೆದು ಹೋಗಿದ್ದೇವೆ.

ಸಕತ್ತು ಬೇಸರ ರೀ...

ಸಹಜವಾಗಿದ್ದ ಉದ್ಯಾನ ನಗರಿಯಲ್ಲಿ ಎಲ್ಲವೂ ಅಸಹಜ. ಭಾವೈಕ್ಯದಲಿ ಕೂಡಿ ನಡೆಯುವೆವು ಮುಂದೆ ಸರಿ ಇದು. ನಮ್ಮ ಐತಿಹ್ಯವನ್ನೇ ಕಳೆದುಕೊಳ್ಳುವುದು ಎಷ್ಟು ಸರಿ. ನಮ್ಮೂರು, ನಮ್ಮ ಜನ ಅಭಿಮಾನ ಬೇಕು. ಅದು ನಿರಭಿಮಾನವಾಗಿರಬಾರದು. ಹಿಂದಿಗರೊಡನೆ ಹಿಂದಿ, ತಮಿಳಿಗರೊಡನೆ ತಮಿಳು, ತೆಲುಗರೊಡನೆ ತೆಲುಗು ಮಾತನಾಡಿ ಕನ್ನಡಿಗನೊಡನೆ ಇಂಗ್ಲೀಷ್‌ ಇದಾವ ನ್ಯಾಯ.

ಎಲ್ಲರಿಗೂ ತೃಪ್ತಿ ನೀಡಿ ತಂತಮ್ಮ ಬದುಕಿನತ್ತ ನೆಮ್ಮದಿಯತ್ತ ಸಾಗಲು ಸಹ್ಯವೆನಿಸುವ ನಮ್ಮೂರಿನಲ್ಲಿ ಪರಕೀಯ ಭಾವ ಹೆಚ್ಚಾಗುತ್ತಿದೆ. ಇದರ ಬಗ್ಗೆ ಯೋಚಿಸಲು, ಮುನ್ನಡೆಸಲು, ನಲುಗಿ ಹೋಗುತ್ತಿರುವ ಮಾನವೀಯ ಮೌಲ್ಯಗಳ, ಮನಸ್ಸುಗಳ ಬಗ್ಗೆ ಚಿಂತಿಸಲು ಮಾತ್ರ ಯಾರಿಗೂ ಸಮಯವೇ ಇಲ್ಲ. ಕೆಂಪೇಗೌಡ ಕಟ್ಟಿದ ನಾಡು ಮತ್ತೆ ಮತ್ತೆ ಕಟ್ಟಿಕೊಳ್ಳುತ್ತಲೇ ಇದೆ ನಮ್ಮತನವನ್ನು ಸ್ವಲ್ಪ ಸ್ವಲ್ಪವೇ ಕಳೆದುಕೊಳ್ಳುತ್ತಲೇ ಇದೆ.

ಬೆಳೆಯುತ್ತಿರುವ ಈ ನಗರಿಗೆ ಎಲ್ಲೆ ಇಲ್ಲ. ಕಾಂಕ್ರೀಟ್‌ ಬಕಾಸುರನ ಬಾಯಾರಿಕೆಗೆ ಕೊನೆಯಿಲ್ಲ. ಈಗಾಗಲೇ ನೂರಾರು ಕೆರೆಕಟ್ಟೆಗಳ ನೀರು ಕುಡಿದಿದ್ದಾಯಿತು, ಹಸಿರು ಉದ್ಯಾನಗಳ ನಗರಿಯನ್ನು ಕಬಳಿಸಿ ಕಾಂಕ್ರೀಟ್‌ ಅಧ್ವಾನಗಳ ನಗರಿ ಮಾಡಿದ್ದಾಯಿತು. ನೆರಳಾಗಿದ್ದ ಹಸಿರು ಮರಗಳು ಬುಡಸಮೇತ ನೆಲಕ್ಕುರುಳಿಸಿ ಆಕ್ರಮಿಸಿದ್ದಾಯಿತು. ಇದನ್ನು ತಡೆಗಟ್ಟಲು ನಮಗೆ ಆಗದಿದ್ದರೂ ನಮ್ಮತನ, ನಮ್ಮ ಜನ, ನಮ್ಮ ಭಾಷೆ, ನಮ್ಮ ಸಂಸ್ಕೃತಿಯನ್ನು ಉಳಿಸಲು ನಾವು ಅಷ್ಟೋ ಇಷ್ಟೋ ಪ್ರಯತ್ನಿಸಬಹುದಲ್ಲವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore City is not the city I knew for years. Everytime I visit my native place Bangalore, I see vast changes. I dont think that this type of development is not advised for any city anywhere in the world. Impressions of a Karnataka citizen Vani Ramdas, settled in Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more