ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಗಿರಿಯಪ್ಪ’ ಎನ್ನುವ ಒಂದು ನವಿಲಿನ ಕಥೆ

By Staff
|
Google Oneindia Kannada News


ಮನುಷ್ಯನ ದುರಾಸೆಯಿಂದ ಅಮಾಯಕ ಜೀವಿಗಳ ಅವ್ಯಾಹತ ಹತ್ಯೆ ತಡೆಯಲು ಇಂತಹ ಘಟನೆ ನಿಮಗೆ ತಿಳಿದಿರಲಿ ಎಂದು ಹೇಳಿದ್ದೇನೆ. ಇದು ನಿಮ್ಮ ಕಣ್ಣಿನಲ್ಲಿಯೂ ನೀರು ಜಿನುಗಿಸುತ್ತದೆ ಎಂಬುದು ನನಗೆ ಗೊತ್ತು!

A tale of a peacock called Giriyappa‘‘ಗಿರಿಯಪ್ಪಾ.... ಏಯ್‌ ಗಿರಿಯಪ್ಪ.....’’ ಎಂದು ಶ್ರೀಮತಿ ಪ್ರಕಾಶ್‌ ದೊಡ್ಡದಾಗಿ ಕೂಗಿ ಕರೆಯುವುದಕ್ಕೂ, ದೂರದಲ್ಲೆಲ್ಲೊ ‘‘ಟ್ರೊಂಯ್‌... ಟ್ರೊಂಯ್‌’’ ಎಂದು ನವಿಲು ಕೂಗುವುದಕ್ಕೂ ಸಂಬಂಧವಿದೆ ಎಂದು ನನಗೆ ಮೊದಲು ಅನ್ನಿಸಿರಲಿಲ್ಲ.

ಶ್ರೀಮತಿ ಪ್ರಕಾಶ್‌ ಯಾರನ್ನೋ ಕರೆಯುತ್ತಿದ್ದಾರೆ ಎಂದುಕೊಂಡಿದ್ದೆ. ಆದರೆ ನಾವು ಕುಳಿತ ವರಾಂಡಕ್ಕೆ ನವಿಲೊಂದು ಓಡಿ ಬಂದದ್ದು ಕಂಡು ಅವರು ಕರೆದದ್ದು ಮನುಷ್ಯರನ್ನಲ್ಲ ನಮ್ಮ ರಾಷ್ಟ್ರ ಪಕ್ಷಿ ನವಿಲನ್ನು ಎಂದು ತಿಳಿದಾಗ ಒಮ್ಮೆಲೆ ಇದೇನಿದು? ಎಂದು ಅಚ್ಚರಿಯಾಯಿತು.

ಶ್ರೀಮತಿ ಪ್ರಕಾಶ್‌ ಕೈಯಲ್ಲಿ ಹಿಡಿದಿದ್ದ ಭತ್ತದ ಕಾಳುಗಳನ್ನು ಮೂಲೆಯಲ್ಲಿ ಹಾಕಿದಾಗ ಗಿರಿಯಪ್ಪನೆಂಬ ನವಿಲು ಖುಷಿಯಿಂದ ಬಕಬಕನೆ ತಿನ್ನತೊಡಗಿತು. ‘‘ಎಲ್ಲಿ ಅಲೆಯೋಕೆ ಹೊಗಿದ್ಯಾ?, ಕರೆದು ಕರೆದು ಗಂಟಲೆಲ್ಲಾ ಆರಿಹೋಯಿತು.’’ ಎಂದು ಮನೆಯ ಮಗನಿಗೆ ಗದರುವಂತೆ ಅವರು ಹೇಳಿದಾಗ ಗಿರಿಯಪ್ಪ ಕಣ್ಣು ಪಿಳಿ ಪಿಳಿ ಹೊರಳಿಸುತ್ತಾ ಆಚೆ ಈಚೆ ನೋಡಿ ತಿನ್ನುವುದನ್ನು ಮುಂದುವರೆಸಿದ.

ಬೂರ್ಲುಕೆರೆ ಪ್ರಕಾಶ್‌ ದಂಪತಿಗಳಿಗೆ ಗಿರಿಯಪ್ಪ ಮನೆ ಮಗನಂತೆ ಆಗಿದ್ದ. ಮನುಷ್ಯರನ್ನು ಕಂಡರೆ ಮಾರು ದೂರ ಓಡುವ ನವಿಲುಗಳು ಅದು ಹೇಗೆ ಹೀಗೆ ನಿಮಗೆ ಹತ್ತಿರವಾಗಿದ್ದು ಎಂದು ಕೇಳಿದಾಗ ಅವರು ಹೇಳಿದ್ದು ಸ್ವಾರಸ್ಯಕರ ಕಥೆ.

ಪ್ರಕಾಶ್‌, ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ ಹತ್ತಿರದ ಬೂರ್ಲುಕೆರೆಯವರು. ಎರಡು ವರ್ಷಗಳ ಹಿಂದೆ ಒಂದು ದಿನ ಪ್ರಕಾಶ್‌ ತೋಟದ ಮೇಲಿನ ಕಾಡಿನಲ್ಲಿ ಕೆಲ ಹುಡುಗರು ಕೈಯಲ್ಲಿ ದೊಡ್ಡದಾದ ಮೊಟ್ಟೆಯನ್ನು ಹಿಡಿದುಕೊಂಡು ಹೋಗುತ್ತಿದ್ದುದ್ದನ್ನು ಕಂಡರು. ಅದೇನೆಂದು ಅವರ ಬಳಿ ವಿಚಾರಿಸಿದಾಗ ಮೊದಲು ಬಾಯಿ ಬಿಡಲಿಲ್ಲ. ನಂತರ ಗದರಿಸಿದಾಗ ಅದು ನವಿಲಿನ ಮೊಟ್ಟೆಯೆಂದು ಹಾಗೂ ಅದನ್ನು ಬೇಯಿಸಿ ತಿನ್ನಲು ಒಯ್ಯುತ್ತಿರುವುದಾಗಿ ಹೇಳಿದರು.

ಪ್ರಕಾಶ್‌ ಹುಡುಗರಿಗೆ ತಿಳಿ ಹೇಳಿ ಅದನ್ನು ಅವರಿಂದ ಇಸಿದುಕೊಂಡರು. ಆದರೆ ಈಗ ಅವರಿಗೆ ಅದನ್ನು ಏನುಮಾಡಬೇಕು ಸಮಸ್ಯೆ ಕಾಡಿತು. ಹುಡುಗರು ಮೊಟ್ಟೆಯಿದ್ದ ಜಾಗ ಹೇಳಿಲ್ಲ, ಎಲ್ಲೆಲ್ಲೋ ಇಟ್ಟರೆ ತಾಯಿ ನವಿಲಿಗೆ ತಿಳಿಯುವುದಿಲ್ಲ. ಆವಾಗ ಅವರಿಗೆ ಹೊಳೆದದ್ದು ಮನೆಯಲ್ಲಿರುವ ಕೋಳಿಗೂಡಿನಲ್ಲಿಟ್ಟರೆ ಹೇಗೆ ಎಂಬ ಆಲೋಚನೆ. ಆಲೋಚನೆಯನ್ನು ಕಾರ್ಯರೂಪಕ್ಕೆ ಇಳಿಸಿದಾಗ, ಮೊದಲು ಕೋಳಿ, ಗಾತ್ರದಲ್ಲಿ ತನ್ನ ಮೊಟ್ಟೆಗಿಂತ ದೊಡ್ದದಿರುವ ನವಿಲಿನ ಮೊಟ್ಟೆಯನ್ನು ಸ್ವಲ್ಪ ಅನುಮಾನದಿಂದ ನೋಡಿತಾದರೂ ನಂತರ ತಾನೇ ಇಷ್ಟು ದೊಡ್ಡ ಮೊಟ್ಟೆ ಇಟ್ಟಿರಬಹುದೆಂದು ಕಾವು ಕೊಡತೊಡಗಿತು. ಸ್ವಲ್ಪ ದಿವಸದಲ್ಲಿಯೇ ತಾಯಿ ಕೋಳಿಯ ಸಹಾಯದಿಂದ ನವಿಲು ಮರಿ ಹೊರ ಜಗತ್ತಿಗೆ ಬಂತು. ಮನೆಯ ಮಕ್ಕಳಿಂದ ಗಿರಿಯಪ್ಪ ಎಂದು ನಾಮಕರಣವೂ ಆಗಿ ಹೋಯಿತು.

ದಿನಕಳೆದಂತೆ ಮೈದುಂಬಿ ಬೆಳೆದ ಗಿರಿಯಪ್ಪ ರಾಜಗಾಂಭೀರ್ಯದಿಂದ ಓಡಾಡತೊಡಗಿದ. ಬೇಟೆಗಾರರ ಕೆಟ್ಟ ದೃಷ್ಟಿ ಬೀಳದಿರಲಿ ಮತ್ತು ಇದು ಸಾಕಿದ ನವಿಲು ಎಂದು ತಿಳಿಯಲೆಂಬ ಕಾರಣಕ್ಕೆ ಗಿರಿಯಪ್ಪನ ಕಾಲಿಗೆ ಗಿಣಿಗಿಣಿ ಎಂಬ ಸದ್ದು ಮಾಡುವ ಗೆಜ್ಜೆಯಾಂದನ್ನು ಬಿಟ್ಟರೆ ಮತ್ತೆ ಯಾವ ಬಂಧನವೂ ಇರಲಿಲ್ಲ. ಗಿರಿಯಪ್ಪ ಮನೆಯ ಮಗನಂತೆ ಹಾಯಾಗಿ ತಿಂದುಂಡು, ಬೇಸರವಾದಾಗ ಕಾಡು ಅಲೆದು, ಹಾಗೂ ಅಲ್ಲಿನ ಹುಳುಹುಪ್ಪಟೆ ಬೇಸರ ಬಂದಾಗ ಮನೆಯಲ್ಲಿ ಭತ್ತದ ಕಾಳು ತಿನ್ನುತ್ತಾ, ಆರಾಮವಾಗಿ ಇದ್ದ.

ಒಮ್ಮೊಮ್ಮೆ ಎರಡು ಮೂರು ದಿವಸ ನಾಪತ್ತೆ ಯಾಗಿದ್ದರೂ ಮತ್ತೆ ಬಂದು ಮನೆಯ ತಾರಸಿ ಏರಿ ‘ಟ್ರೊಂಯ್ಯಾ.. ’ ಎಂದು ಕೂಗುತ್ತಿದ್ದ. ಅನಾನಸ್‌ ತೋಟದ ಮೂಲೆ ಮೂಲೆಯಲ್ಲಿ ತಿರುಗಾಟ ಗಿರಿಯಪ್ಪನ ನಿತ್ಯ ಕಾಯಕ. ಕೂಗಳತೆಯ ದೂರದಲ್ಲಿ ಎಲ್ಲೇ ಇದ್ದರು ಗಿರಿಯಪ್ಪಾ ಎಂದು ದೊಡ್ಡದಾಗಿ ಕೂಗಿದರೆ ಪ್ರತ್ಯಕ್ಷನಾಗುತ್ತಿದ್ದ. ಪ್ರಕಾಶರ ಮನೆಯ ಸದಸ್ಯನಾಗಿ ಬೆಳೆದಿದ್ದ ಗಿರಿಯಪ್ಪ. ಇಷ್ಟಿದ್ದರೂ ಯಾರೂ ಗಿರಿಯಪ್ಪನನ್ನು ಮುಟ್ಟುವಂತಿರಲಿಲ್ಲ. ಮುಟ್ಟಿದರೆ ಆತನಿಗೆ ಸಿಟ್ಟು ಎಂದು ಪ್ರಕಾಶ್‌ ವಿವರಿಸಿದ್ದರು.

ಗಿರಿಯಪ್ಪನನ್ನು ನೋಡಿಕೊಂಡು ಬಂದು ಒಂದು ವರ್ಷದ ನಂತರ ಪ್ರಕಾಶ್‌ರ ಮನೆಯ ಮುಂದೆಹೋಗುತ್ತಿದ್ದಾಗ ಮತ್ತೆ ಗಿರಿಯಪ್ಪನ ನೆನಪಾಗಿ ಅವರ ಮನೆಯತ್ತ ಬೈಕ್‌ ತಿರುಗಿಸಿದೆ. ಜಗುಲಿಯ ಮೇಲೆ ಹೋಗಿ ಕುಳಿತು ಅರ್ಧ ಘಂಟೆಯಾದರೂ ಗಿರಿಯಪ್ಪನ ಪ್ರವೇಶ ಇರಲಿಲ್ಲ. ಮೊದಲಬಾರಿ ಹೋದಾಗ ಗಿರಿಯಪ್ಪ ಏರಿಕುಳಿತಿದ್ದ ಟೀಪಾಯಿ ಖಾಲಿ ಖಾಲಿ, ಸ್ವಲ್ಪ ಸಮಯ ಕಾಡಿನ ಓಡಾಟಕ್ಕೆ ಹೋಗಿರಬಹುದೆಂದು ವಿಚಾರಿಸಲಿಲ್ಲ, ನಾನು ಹೊರಡುವ ಸಮಯ ಬಂದರೂ ಗಿರಿಯಪ್ಪ ಪತ್ತೆ ಇಲ್ಲ ಮತ್ತು ಪ್ರಕಾಶ್‌ ದಂಪತಿಗಳ ಮಾತಿನ ಮಧ್ಯೆ ನಮ್ಮ ಗಿರಿಯಪ್ಪ ನಮ್ಮ ಗಿರಿಯಪ್ಪ ಎಂದು ಸುದ್ದಿಯನ್ನು ಹೇಳುತ್ತಲೂ ಇಲ್ಲ, ಅನುಮಾನದಿಂದ ಗಿರಿಯಪ್ಪ ಎಲ್ಲಿ? ಎಂದು ಕೇಳಿದೆ. ಶ್ರೀಮತಿ ಪ್ರಕಾಶ್‌ ಒಳಗಡೆ ಎದ್ದು ಹೋದರು. ಪ್ರಕಾಶ್‌ ಮೌನಕ್ಕೆ ಶರಣಾದರು. ನನಗೆ ಅನುಮಾನ ಜಾಸ್ತಿಯಾಯಿತು.

ಸ್ವಲ್ಪ ಹೊತ್ತಿನ ನಂತರ ಪ್ರಕಾಶ್‌, ಗಿರಿಯಪ್ಪನನ್ನು ಬೇಟೆಗಾರರು ಗುಂಡಿಕ್ಕಿ ಕೊಂದರು ಎಂದು ಹೇಳಿದರು. ಅವರ ಕಣ್ಣಂಚಿನಲ್ಲಿ ನೀರು ಜಿನುಗಿತು. ಸ್ವಲ್ಪ ಹೊತ್ತು ನಾನೂ ಮೌನಕ್ಕೆ ಶರಣಾದೆ. ನಂತರ ಪ್ರಕಾಶ್‌ ಮುಂದುವರೆಸಿದರು.

ಹದಿನೈದು ದಿನಗಳ ಹಿಂದೆ ಒಂದುದಿನ ಬೆಳಗ್ಗೆ ಮನೆಯ ಹಿಂದೆ ಕಾಡಿನಲ್ಲಿ ಗುಂಡೇಟಿನ ಶಬ್ದ ಕೇಳಿಸಿತು. ಯಾರೋ ಸೋಬೇಟೆಗೆ ಬಂದಿರಬಹುದು ಎಂದು ಹೇಳಿದೆ. ಇವಳಿಗೆ ತಕ್ಷಣ ಗಿರಿಯಪ್ಪನ ನೆನಪಾಗಿ ಗಿರಿಯಪ್ಪ ಇದ್ದಾನ ನೋಡಿ ಎಂದಳು. ಹೊರಗಡೆ ಬಂದೆ ಗಿರಿಯಪ್ಪ ಎಲ್ಲಿಯೂ ಕಾಣಿಸಲಿಲ್ಲ. ಕೂಗಿದೆ ಆದರು ಪತ್ತೆಯಿಲ್ಲ, ಶಂಕೆ ಜಾಸ್ತಿಯಾಯಿತು.

ಅಷ್ಟರಲ್ಲಿ ಅನಾನಸ್‌ ತೋಟದಿಂದ ಗಿರಿಯಪ್ಪನ ಸವಾರಿ ಮನೆಯತ್ತ ಬರುತ್ತಿರುವುದು ಕಂಡು ಮೊದಲು ಸಮಾಧಾನವಾಯಿತಾದರೂ, ಆತ ತೇಲುತ್ತಾ ಬೀಳುತ್ತಾ ಮನೆಯತ್ತ ಬರುತ್ತಿದ್ದ ರೀತಿ ಆತಂಕ ಹೆಚ್ಚುವಂತೆ ಮಾಡಿತು. ನಾನು ಅವನತ್ತ ಓಡಿದೆ. ನನ್ನ ಅನುಮಾನ ನಿಜವಾಗಿತ್ತು. ಬೇಟೆಗಾರರ ಗುಂಡು ಗಿರಿಯಪ್ಪನ ದೇಹದೊಳಕ್ಕೆ ತೂರಿ ಹೋಗಿತ್ತು. ನಾನು ಹತ್ತಿರ ಹೋಗಿ ಹಿಡಿದುಕೊಂಡು ನೀರು ತರಲು ಕೂಗಿ ಹೇಳಿದೆ. ಆದರೆ ಅಷ್ಟರಲ್ಲಿ ಗಿರಿಯಪ್ಪನ ಪ್ರಾಣಪಕ್ಷಿ ಹಾರಿಹೋಗಿತ್ತು. ನನ್ನ ಕೈಯಲ್ಲಿ ಪ್ರಾಣ ಬಿಡುವುದಕ್ಕಾಗಿ ಕಾಡಿನಿಂದ ಇಲ್ಲಿಯವರೆಗೂ ಬಂದಿದ್ದ ಅಂತ ಕಾಣಿಸುತ್ತದೆ ಎಂದು ಗದ್ಗದಿತರಾಗಿ ಹೇಳಿದ ಪ್ರಕಾಶ್‌ ಮನೆಯ ಮಗನನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣು ಒರೆಸಿಕೊಂಡರು.

ಮನುಷ್ಯನ ದುರಾಸೆಯಿಂದ ಅಮಾಯಕ ಜೀವಿಗಳ ಅವ್ಯಾಹತ ಹತ್ಯೆ ತಡೆಯಲು ಇಂಥಹ ಘಟನೆ ನಿಮಗೆ ತಿಳಿದಿರಲಿ ಎಂದು ಹೇಳಿದ್ದೇನೆ. ಇದು ನಿಮ್ಮ ಕಣ್ಣಿನಲ್ಲಿಯೂ ನೀರು ಜಿನುಗಿಸುತ್ತದೆ ಎಂಬುದು ಗೊತ್ತು. ಇದನ್ನು ಬರೆಯುವಾಗ, ಗಿರಿಯಪ್ಪನ ಫೋಟೋ ನೋಡಿದಾಗ, ನನಗೂ ಕೂಡ ಕಣ್ಣು ತೇವವಾಗುತ್ತದೆ.

ಗಿರಿಯಪ್ಪ ಇನ್ನು ಕೇವಲ ನೆನಪು ಮಾತ್ರ

ನಿಮ್ಮ ಅನಿಸಿಕೆ ಬರೆಯಿರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X