ಬನವಾಸಿ ಬಳಗದ ‘ಸಿಂಹಗನ್ನಡಿ’ಗೆ ನಾರಾಯಣರ ಮುನ್ನುಡಿ

ಬನವಾಸಿ ಬಳಗದ 'ಸಿಂಹಗನ್ನಡಿ’ಗೆ ನಾರಾಯಣರ ಮುನ್ನುಡಿ ಅಲ್ಲಿ ಕನ್ನಡದ ವಾತಾವರಣ. ಹಾಯ್‌-ಹಲೋಗಳ ಪಕ್ಕಕ್ಕಿಟ್ಟು , ನಮಸ್ಕಾರ-ನಮಸ್ತೆಗಳ ಮೂಲಕ ಧನ್ಯತೆ ಸವಿಯುವ ಅಪರೂಪದ ಕ್ಷಣ ಅದಾಗಿತ್ತು. ಅದು ಕನ್ನಡಿಗರನ್ನು ಕನ್ನಡಿಗರನ್ನಾಗಿಸುವ ನಿಟ್ಟಿನಲಿ ಬನವಾಸಿ ಬಳಗ ಹಮ್ಮಿಕೊಂಡಿದ್ದ ಒಂದು ಸಾರ್ಥಕ ಪ್ರಯತ್ನ. ಅರ್ಥಪೂರ್ಣ ಕಾರ್ಯಕ್ರಮ.

ಬೆಂಗಳೂರು : ಕನ್ನಡಕ್ಕಾಗಿ ನಾವು ಏನು ಮಾಡಬೇಕು? ಯಾಕೆ ಮಾಡಬೇಕು? ಕನ್ನಡಿಗರ ಜವಾಬ್ದಾರಿಗಳೇನು? ಕನ್ನಡಿಗರು ಮೈಮರೆತು, ಕೈಕಟ್ಟಿ ಕೂತರೆ ಭವಿಷ್ಯ ಹೇಗಿರುತ್ತದೆ? -ಈ ಎಲ್ಲಾ ಪ್ರಶ್ನೆಗಳಿಗೂ ಅಲ್ಲಿ ಉತ್ತರ ಇತ್ತು. ಮಾರ್ಗದರ್ಶನವೂ ಇತ್ತು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಂಭಾಗಣದಲ್ಲಿ ಬನವಾಸಿ ಬಳಗ, ಭಾನುವಾರ ಕನ್ನಡದ ಕೂಗು ಹಾಕಿತ್ತು. ಬಳಗದ 'ಸಿಂಹಗನ್ನಡಿ' ಕನ್ನಡ ಜಾಗೃತಿ ಸರಣಿ ಕಾರ್ಯಕ್ರಮದ ಮೊದಲ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕ-ಪ್ರಾಧ್ಯಾಪಕ ಡಾ.ಪಿ.ವಿ.ನಾರಾಯಣ ಪಾಲ್ಗೊಂಡಿದ್ದರು.

ತಮ್ಮ ಕನ್ನಡಪರ ವಿಚಾರಧಾರೆಯನ್ನು ಹಂಚಿಕೊಂಡ ಅವರು ಮಾತನಾಡುತ್ತ, ಕನ್ನಡದಿಂದ ಮಾತ್ರ ಕನ್ನಡಿಗರು ಬಲಿಷ್ಠರಾಗಲು ಸಾಧ್ಯ ಎಂದರು.

ಭಾಷೆಯೇ ನಮ್ಮ ಅಸ್ತಿತ್ವ. ಕನ್ನಡನಾಡಿನಲ್ಲಿ ಪ್ರತಿಯೋರ್ವರೂ ಕಲಿಯಬೇಕಾದ ಮೊದಲ ಭಾಷೆ ಕನ್ನಡವೇ ಆಗಬೇಕು. ಇದು ಸಾರ್ವಕಾಲಿಕ ಅನಿವಾರ್ಯತೆಯೂ ಹೌದು. ನಮ್ಮ ಬೋಧನೆ-ಸಂಶೋಧನೆ, ಕಲಿಕೆ ಎಲ್ಲವೂ ಕನ್ನಡದಲ್ಲೇ ಆಗಬೇಕು ಎಂದರು.

ಮರ ಆಳವಾಗಿ ಬೇರುಬಿಟ್ಟಷ್ಟೂ ಸಮೃದ್ಧವಾಗುತ್ತದೆ. ಹಾಗಾಗಿ ಕನ್ನಡಿಗರ ಬದುಕು ಸದಾ ಸಮೃದ್ಧವಾಗಬೇಕೆಂದರೆ ಅದು ಕನ್ನಡದಿಂದ ಮಾತ್ರ ಸಾಧ್ಯ. ನಮ್ಮ ಪರಿಸರದ್ದಲ್ಲದ ಭಾಷೆಯನ್ನು ನಮ್ಮ ಮೇಲೆಳೆದುಕೊಂಡಷ್ಟೂ, ನಾವು ಗುಲಾಮರಾಗುತ್ತಾ ಹೋಗುತ್ತೇವೆ. ಬಲಿಷ್ಠರಾಗಬೇಕಾದರೆ, ಸುರಕ್ಷಿತರಾಗಬೇಕಾದರೆ ನಮ್ಮ ಭಾಷೆಯಿಂದ ಮಾತ್ರ ಸಾಧ್ಯ ಎಂದು ನಾರಾಯಣ ಅಭಿಪ್ರಾಯಪಟ್ಟರು.

ಮೂಲ ಸಮಸ್ಯೆ : ಇಂಗ್ಲಿಷ್‌ ಭಾಷೆ ಕಲಿಯುವುದು ಬೇರೆ, ಇಂಗ್ಲಿಷ್‌ ವ್ಯಾಮೋಹ ಬೇರೆ. ನಮ್ಮ ಗಮನ ಸಿಪ್ಪೆಯ ಕಡೆಗಿದೆ. ತಿರುಳಿನ ಕಡೆಗಿಲ್ಲ. ಈಗ ಕೇವಲ ತೇಪೆ ಬಡಿಯುವ ಕೆಲಸ ನಡೆಯುತ್ತಿದೆ. ಮೂಲ ಕೆಲಸ ಆಗುತ್ತಿಲ್ಲ. ಬಡವರಿಗೊಂದು ಶಿಕ್ಷಣ, ಬಲ್ಲಿದರಿಗೊಂದು ಶಿಕ್ಷಣ ಚಲಾವಣೆಯಲ್ಲಿದೆ. ಇದು ಬದಲಾಗಿ, ರಾಜ್ಯದಲ್ಲಿ ಕನಿಷ್ಠ ಒಂದು ಹಂತದವರೆಗೆ ಕೇವಲ ಕನ್ನಡ ಮಾಧ್ಯಮದಲ್ಲೇ ಕಲಿಸುವಂತಾಗಬೇಕು. ಆಗ ಆರೋಗ್ಯಕರ ಸಮಾಜ ಜನ್ಮತಾಳುತ್ತದೆ ಎಂದು ಆಶಿಸಿದರು.

ಸಂವಾದ : ಉಪನ್ಯಾಸದ ನಂತರ ಜಿ.ವಿ.ನಾರಾಯಣರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ನಾಡು-ನುಡಿಯ ಬಗ್ಗೆ ಸಭಿಕರು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಸಮಾಧಾನಗಳನ್ನು ನಾರಾಯಣ ನೀಡಿದರು.

ಬನವಾಸಿ ಬಳಗದ ಆನಂದ್‌.ಜಿ., ಸ್ವಾಗತಿಸಿ ವಂದಿಸಿದರು. ಡಾ.ನಾರಾಯಣ ಅವರಿಗೆ ಫಲ-ಪುಷ್ಪ ನೀಡಿ ಸಂಪಿಗೆ ಶ್ರೀನಿವಾಸ ಗೌರವಿಸಿದರು.

ನಿರಂತರ ಜಾಗೃತಿ : ಕನ್ನಡ ಪರ ಜಾಗೃತಿ ಮೂಡಿಸುವ ಸಿಂಹಗನ್ನಡಿ ಕಾರ್ಯಕ್ರಮ ನಿರಂತರವಾಗಿ ಮುಂದುವರೆಯಲಿದೆ. ನಾಡಿನ ಪ್ರಾಜ್ಞರಿಂದ ಸಲಹೆ ಸೂಚನೆಗಳನ್ನು ಪಡೆಯುವ ಮತ್ತು ಅನುಷ್ಠಾನಗೊಳಿಸುವ ಕಾರ್ಯದಲ್ಲಿ ನಾವು ಉತ್ಸುಕರಾಗಿದ್ದೇವೆ ಎಂದು ಬನವಾಸಿ ಬಳಗ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+