ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಬಂದಿದೆ ‘ಬೆಂಗಳೂರು ಹಬ್ಬ’

By Staff
|
Google Oneindia Kannada News

ಮತ್ತೆ ಬಂದಿದೆ ‘ಬೆಂಗಳೂರು ಹಬ್ಬ’
ಹೈಟೆಕ್‌ ಶೈಲಿಯಲ್ಲಿ ಮಿಂದು ಹೋಗಿರುವ ಬೆಂಗಳೂರು ಸಂಸ್ಕೃತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವ ಉದ್ದೇಶದ ‘ಬೆಂಗಳೂರು ಹಬ್ಬ’ ಡಿ. 5ರಿಂದ 12ರವರೆಗೆ ನಡೆಯಲಿದೆ.

  • ಆರ್‌.ಮಂಜುನಾಥ್‌
ಬೆಂಗಳೂರು : ಕಳೆದ ವರ್ಷ ಪ್ರಥಮ ಬಾರಿಗೆ ‘ಬೆಂಗಳೂರು ಹಬ್ಬ’ ಆಚರಿಸಲಾಯಿತು. ಸ್ಥಳೀಯ ಕಲಾವಿದರಿಗೆ ಪ್ರಮುಖ ವೇದಿಕೆ ಒದಗಿಸಿ ಅವರ ಪ್ರತಿಭೆ ಹೊರಸೂಸಲು ಅನುವಾಗಿದ್ದ ಈ ಹಬ್ಬ, ಈ ಬಾರಿ ಹಲವು ಹೊಸತನಗಳನ್ನು ಮೈಗೂಡಿಸಿಕೊಂಡಿದೆ.

‘ಪರಕೀಯ’ ಎಂದೆನಿಸುವ ಕೆಲವು ಕಾರ್ಯಕ್ರಮಗಳಿಗೆ ಈ ಬಾರಿ ಕೊಕ್‌ ನೀಡಲಾಗಿದ್ದು, ಸ್ಥಳೀಯ ಕಲಾವಿದರಿಗೆ ಪ್ರಮುಖ ವೇದಿಕೆ ಒದಗಿಸಿ ಅವರ ಪ್ರತಿಭೆ ಹೊರಸೂಸಲು ಅನುವಾಗಿರುವ ಬೆಂಗಳೂರು ಹಬ್ಬ , ಈ ಬಾರಿ ಹಲವು ಹೊಸತನಗಳನ್ನು ಮೈಗೂಡಿಸಿಕೊಂಡಿದೆ. ಸ್ಥಳೀಯ ತಿನಿಸುಗಳು ಸೇರಿದಂತೆ ಅಂತರಾಷ್ಟ್ರೀಯ ತಿನಿಸುಗಳನ್ನು ಪರಿಚಯಿಸುವ ‘ಹಬ್ಬದ ಊಟ’ ಏರ್ಪಡಿಸಲಾಗಿದೆ. ಅಲ್ಲದೆ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಸೇರಿದಂತೆ ವೇದಗೋಷ್ಠಿ , ನಾದಸ್ವರ ಆಯೋಜಿಸಲಾಗಿದೆ. ಮಕ್ಕಳ ಚಿತ್ರೋತ್ಸವ ಈ ಬಾರಿಯ ಹೈಲೈಟ್‌.

Bangalore Habba-2004 from Dec. 5-12ಡಿ.5 ರಿಂದ 12ರವರೆಗೆ ಆಯೋಜಿಲಾಗಿರುವ ‘ಬೆಂಗಳೂರು ಹಬ್ಬ’ ನಗರದ ಕಲೆ, ಸಂಸ್ಕೃತಿ, ಆಚರಣೆಯನ್ನು ಎಲ್ಲರಿಗೂ ತಿಳಿಸುವ ಉದ್ದೇಶ ಹೊಂದಿದೆ. ಜತೆಗೆ ಯುವ ಜನಾಂಗಕ್ಕೆ ತಮ್ಮ ಸಂಪ್ರದಾಯದ ಸೊಬಗ ಅರಿವು ಹಾಗೂ ಅದರ ಬಗ್ಗೆ ಹೆಮ್ಮೆ ಪಡುವ ಮನೋಭಾವ ಬೆಳೆಸಲೂ ಸಹಕಾರಿಯಾಗಲಿದೆ ಎಂಬುದು ಆರ್ಟಿಸ್ಟ್‌ ಫೌಂಡೇಶನ್‌ ಫಾರ್‌ ಆರ್ಟ್ಸ್‌(ಆಫಾ)ನ ಸಂಯೋಜಕರ ಅಂಬೋಣ.

ಬೆಂಗಳೂರು ಹಬ್ಬದ ಬಗ್ಗೆ ಮಾಹಿತಿ ನೀಡಿದ ನಂದಿನಿ ಆಳ್ವ ಹಾಗೂ ಪದ್ಮಿನಿ ರವಿ ಹೇಳಿದ್ದಿಷ್ಟು :

ನಗರದ ಸಂಸ್ಕೃತಿ ಹಾಗೂ ಬೆಂಗಳೂರಿಗರು ಆಚರಣೆಯಲ್ಲಿರಿಸಿಕೊಂಡಿರುವ ಕಾರ್ಯಕ್ರಮಗಳನ್ನು ‘ಬೆಂಗಳೂರು ಹಬ್ಬ’ ಪ್ರತಿನಿಧಿಸಲಿದೆ. ಇಂದಿನ ಯುವ ಜನಾಂಗಕ್ಕೆ ತಮ್ಮ ಸಂಸ್ಕೃತಿ, ಕಲೆಗಳ ಬಗ್ಗೆ ಅರಿವೇ ಇಲ್ಲ. ಟಿವಿಯಲ್ಲಿ ಕೆಲವು ಕಲೆ, ಪ್ರದರ್ಶನಗಳನ್ನು ನೋಡುತ್ತಾರೆ. ಆದರೆ ಅದನ್ನು ನೇರವಾಗಿ ಆಸ್ವಾದಿಸುವ ಅವಕಾಶ ಯಾವಾಗಲೂ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಒಂದು ವಾರದ ಅವಧಿಯಲ್ಲಿ ಎಲ್ಲ ಕಲಾವಿದರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಅರಮನೆ ಆವರಣ ಹಬ್ಬದ ಪ್ರಮುಖ ವೇದಿಕೆ. ಏಳು ದಿನಗಳ ಕಾಲ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಅಲ್ಲದೆ ರವೀಂದ್ರ ಕಲಾಕ್ಷೇತ್ರ, ಪುರಭವನದಲ್ಲಿ ನಾಟಕ-ನೃತ್ಯಗಳು ನಡೆಯಲಿದ್ದು, ಚಿತ್ರಕಲಾ ಪರಿಷತ್‌ನಲ್ಲಿ ಕನ್ನಡ ನಾಟಕೋತ್ಸವ ಏರ್ಪಡಿಸಲಾಗಿದೆ.

ಅರಮನೆ ಆವರಣದಲ್ಲಿ ಈ ಬಾರಿ ‘ಹಬ್ಬದ ಊಟ’ ಎಂಬ ಉತ್ಸವ ಏರ್ಪಡಿಸಲಾಗಿದ್ದು, ನಮ್ಮ ಹಬ್ಬದ ತಿನಿಸುಗಳನ್ನು ಕಡಿಮೆ ದರದಲ್ಲಿ ಒದಗಿಸಲಾಗುತ್ತದೆ. ನಮ್ಮೂರ ಹೋಟೆಲ್‌, ಅಡಿಗಾಸ್‌, ಕೂಲ್‌ ಜಾಯಿಂಟ್‌, ಕಾಫಿ ಡೆ ಸಂಸ್ಥೆಗಳು ತಮ್ಮ ಸ್ಟಾಲ್‌ಗಳನ್ನು ಇಲ್ಲಿ ತೆರೆಯಲಿವೆ. ಡಿ.9ರಿಂದ 12ರವರೆಗೆ ನಡೆಯುವ ‘ಹಬ್ಬದ ಊಟ’ ಫುಡ್‌ಕೋರ್ಟ್‌ ಮಾದರಿಯಲ್ಲಿ ರೂಪುಗೊಳ್ಳಲಿದೆ. ಅಂತರಾಷ್ಟ್ರೀಯ ಆಹಾರ ಪರಿಚಯಿಸುವ ಉದ್ದೇಶವೂ ಇದರದ್ದಾಗಿದ್ದು, ಹಲವು ಮಾದರಿಯ ಊಟಗಳು, ಆಹಾರ ತಯಾರಿಕೆ ಬಗ್ಗೆ ಮಾಹಿತಿಗಳೂ ಇಲ್ಲಿ ಲಭ್ಯ.

ಬೆಂಗಳೂರು ಹಬ್ಬದ ವೇಳೆ ನಗರದ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಲು ಮಹಾನಗರ ಪಾಲಿಕೆಯನ್ನು ಕೇಳಿಕೊಳ್ಳಲಾಗಿದೆ. ಇದಕ್ಕೆ ಒಪ್ಪಿರುವ ಪಾಲಿಕೆ ಶುಚಿತ್ವದ ಜತೆಗೆ ಆ ದಿನಗಳಲ್ಲಿ ಉದ್ಯಾನಗಳಲ್ಲಿ ದೀಪಾಲಂಕಾರದ ವ್ಯವಸ್ಥೆ ಮಾಡಲಿದೆ. ಎಲ್ಲ ಉದ್ಯಾನಗಳನ್ನು ಸಿಂಗರಿಸುವ ಉದ್ದೇಶವಿದ್ದರೂ ಅದು ಸಾಧ್ಯವಾದ ಕಾರಣ 11 ಉದ್ಯಾನಗಳನ್ನು ಕೆಲ ವು ಸಂಸ್ಥೆಗಳ ಸಹಯೋಗದಲ್ಲಿ ಸಿಂಗರಿಸಲಾಗುವುದು.

ಗವಿ ಗಂಗಾಧರೇಶ್ವರ ದೇವಾಲಯ ಸೇರಿದಂತೆ ನಾಲ್ಕು ದೇವಸ್ಥಾನಗಳಲ್ಲಿ ವೇದಗೋಷ್ಠಿ, ನಾದಸ್ವರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನಗರದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಿಸಲು ಹಲವು ಸಂಸ್ಥೆಗಳೊಂದಿಗೆ ಯೋಜನೆ ರೂಪಿಸಲಾಗುತ್ತದೆ.

ಪದ್ಮಾ ಸುಬ್ರಹ್ಮಣ್ಯಂ ಅವರ ವಿಶ್ವ ಶಕ್ತಿ ಸ್ವರೂಪ ಭರತನಾಟ್ಯ, ಶಂಕರ್‌ ಮಹದೇವನ್‌ರ ಗಾಯನ ಹಾಗೂ ಪಾಕಿಸ್ತಾನದ ಸ್ಟ್ರಿಂಗ್ಸ್‌ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದೆ. ಇದಲ್ಲದೆ ಶಾಸ್ತ್ರೀಯ ಸಂಗೀತ, ನೃತ್ಯ, ಸಮಕಾಲೀನ ಕಲಾಪ್ರಕಾರಗಳು, ನಾಟಕ, ಚಿತ್ರಕಲೆ, ಜನಪದ, ಮಕ್ಕಳ ಚಿತ್ರಗಳು, ಯುವಕರ ಪಾಪ್‌, ಲೇಜರ್‌ ಪ್ರದರ್ಶನ ‘ಬೆಂಗಳೂರು ಹಬ್ಬ’ದಲ್ಲಿರುತ್ತದೆ. ಕೇಂದ್ರ ಸರಕಾರ ಪ್ರವಾಸೋದ್ಯಮದ ಅಭಿವೃದ್ಧಿ ಹಿನ್ನೆಲೆಯಲ್ಲಿ ಧನಸಹಾಯ ನೀಡಲಿದೆ. ರಾಜ್ಯ ಸರಕಾರದಿಂದ ಯಾವುದೇ ಆರ್ಥಿಕ ಸಹಕಾರವಿರದಿದ್ದರೂ ಪ್ರೋತ್ಸಾಹ ನೀಡಲಿದೆ. ಸಂಘ- ಸಂಸ್ಥೆಗಳ ಹಾಗೂ ಗಣ್ಯರ ನೆರವಿನಿಂದ ಹಬ್ಬಕ್ಕೆ ನಿಧಿ ಸಂಗ್ರಹಿಸಲಾಗುತ್ತಿದೆ.

ಒಟ್ಟಾರೆ ನಗರದ ಮೂಲ ಸಂಸ್ಕೃತಿಯ ಸೊಬಗನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಬೇಕೆಂಬ ಉದ್ದೇಶವಿದ್ದರೂ ಕಾಸ್ಮೊಪಾಲಿಟಿನ್‌ ನಗರವಾದ ಬೆಂಗಳೂರಿನಲ್ಲಿ ವಾಸವಾಗಿರುವ ವಿದೇಶಿಯರು, ಅನ್ಯಭಾಷಿಗರಿಗೂ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ‘ಬೆಂಗಳೂರು ಹಬ್ಬ’ ವನ್ನು ಕೇವಲ ಕಲೆ, ವಿನೋದ, ಸಂಗೀತ ಕಾರ್ಯಕ್ರಮಗಳಿಗಷ್ಟೇ ಮೀಸಲಿಡದೆ, ನಮ್ಮ ಆಹಾರ, ಆಚರಣೆ ಹಾಗೂ ವ್ಯಕ್ತಿತ್ವದ ಆನಾವರಣಕ್ಕೆ ವೇದಿಕೆ ಮಾಡಿಕೊಡುವ ಉದ್ದೇಶವೂ ಆಯೋಜಕರದ್ದಾಗಿದೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X