ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲತಾಯಿ ಧೋರಣೆ ವಿರೋಧಿಸಿ ಡಿ.1ರಂದು ರಾಜ್ಯದಿ ರೈಲ್ವೆ ಬಂದ್‌

By Staff
|
Google Oneindia Kannada News

ಮಲತಾಯಿ ಧೋರಣೆ ವಿರೋಧಿಸಿ ಡಿ.1ರಂದು ರಾಜ್ಯದಿ ರೈಲ್ವೆ ಬಂದ್‌
ರಾಜ್‌ಕುಮಾರ್‌, ವಿಷ್ಣುವರ್ಧನ್‌ ಕುರಿತು ಪಾಟೀಲ ಪುಟ್ಟಪ್ಪ ಕಟುಟೀಕೆ

ಹುಬ್ಬಳ್ಳಿ : ಕೇಂದ್ರ ಸರ್ಕಾರ ಮತ್ತು ರೈಲ್ವೆ ಮಂಡಳಿಯಿಂದ ಕನ್ನಡಿಗರಿಗೆ ಆಗುತ್ತಿರುವ ತಾರತಮ್ಯ ನೀತಿಯನ್ನು ವಿರೋಧಿಸಿ ಡಿಸೆಂಬರ್‌ 1ರ ಬುಧವಾರ ರಾಜ್ಯದಲ್ಲಿ ರೈಲ್ವೆ ಬಂದ್‌ಗೆ ಕರ್ನಾಟಕ ಅಭಿವೃದ್ಧಿ ವೇದಿಕೆ ಕರೆ ನೀಡಿದೆ.

ಡಿಸೆಂಬರ್‌ 1ರಂದು ರಾಜ್ಯ ರೈಲ್ವೆಬಂದ್‌ಗೆ ಕರೆ ನೀಡಲಾಗಿದೆ. ಹುಬ್ಬಳ್ಳಿ, ಬೆಂಗಳೂರು, ಮೈಸೂರು ಮತ್ತು ಬಳ್ಳಾರಿ ನಿಲ್ದಾಣಗಳಲ್ಲಿ ರೈಲ್ವೆ ಸಂಚಾರವನ್ನು ನಿಲ್ಲಿಸಲಾಗುವುದು. ಬಂದ್‌ ಶಾಂತಿಯುತವಾಗಿ ನಡೆಯಲಿದೆ ಎಂದು ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಪಾಟೀಲ ಪುಟ್ಟಪ್ಪ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ, ರೈಲ್ವೆ ಮಂಡಳಿ ಮತ್ತು ರೈಲ್ವೆ ಸಚಿವರಿಗೆ ಮನವಿ ಪತ್ರಗಳನ್ನು ಬರೆದು ಸುಸ್ತಾಗಿದ್ದೇವೆ. ಈಗ ಉಳಿದಿರುವುದು ಕೇವಲ ಹೋರಾಟ ಮಾರ್ಗ ಮಾತ್ರ. ಡಿಸೆಂಬರ್‌1 ರಂದು ಬೆಳಿಗ್ಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದ ಪಾಪು- ವಿವಿಧ ಕನ್ನಡ ವೇದಿಕೆಗಳು, ಕನ್ನಡ ಪರ ಸಂಘಟನೆಗಳು, ಜನಪ್ರತಿನಿಧಿಗಳು ಮತ್ತು ವಿವಿಧ ಸಂಘ- ಸಂಸ್ಥೆಗಳು ಬಂದ್‌ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಬೇಡಿಕೆಗಳು :

  • ನೈರುತ್ಯ ರೈಲ್ವೆ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು.
  • ಸಿ ಮತ್ತು ಡಿ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸದೆ ಕನ್ನಡಿಗರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು. ಹುಬ್ಬಳ್ಳಿಯಿಂದ ಹೊರಡುವ ರೈಲುಗಳಿಗೆ ಕನ್ನಡ ನಾಮಫಲಕಗಳನ್ನು ತಪ್ಪದೆ ಹಾಕಬೇಕು.
  • ರೈಲ್ವೆ ಕಾರ್ಯಾಗಾರವನ್ನು ತ್ವರಿತಗತಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ 6 ಪ್ಲಾಟ್‌ಫಾರಂಗಳನ್ನು ನಿರ್ಮಿಸಬೇಕು.
  • ಬೆಂಗಳೂರಿನಲ್ಲಿರುವ ಆರ್‌ಆರ್‌ಬಿಯನ್ನು (ರೈಲ್ವೆ ರಿಕ್ರುಟ್‌ಮೆಂಟ್‌ ಬೋರ್ಡು) ಹುಬ್ಬಳ್ಳಿಗೆ ಸ್ಥಳಾಂತರಿಸಬೇಕು.
  • ತೋರಣಗಲ್‌ನಿಂದ ಲೋಂಡಾವರೆಗೆ ಡಬಲ್‌ ಲೈನ್‌ ಆಗ ಬೇಕು.ಕೊಟ್ಟೂರು-ಹರಿಹರ ರೈಲ್ವೆ ಮಾರ್ಗ ಆಗಬೇಕು.ಕಲ್ಬುರ್ಗಿ ಮತ್ತು ಮಂಗಳೂರಿನಲ್ಲಿ ರೈಲ್ವೇ ವಿಭಾಗಗಳಾಗಬೇಕು.
  • ಹುಬ್ಬಳ್ಳಿಯಲ್ಲಿ ವ್ಯಾಗನ್‌ ಕಾರ್ಖಾನೆ ಆಗಬೇಕು. ದಕ್ಷಿಣ-ಮಧ್ಯ ರೈಲ್ವೆ ಬದಲಿಗೆ ನೈರುತ್ಯ ರೈಲ್ವೇವಲಯ ಎಂಬ ನಾಮಫಲಕ ಹಾಕಬೇಕು.
ಚಿತ್ರೋದ್ಯಮ ಹೋರಾಟಕ್ಕೆ ವಿರೋಧ : ಚಿತ್ರೋದ್ಯಮ ಬಂದ್‌ಗೆ ತಮ್ಮ ವಿರೋಧ ಸೂಚಿಸಿರುವ ಪಾಟೀಲಪುಟ್ಟಪ್ಪ , ಬಂದ್‌ಗೆ ಕರೆ ನೀಡಿರುವ ವರನಟ ರಾಜ್‌ಕುಮಾರ್‌ ಹಾಗೂ ವಿಷ್ಣುವರ್ಧನ್‌ರ ನಾಡುನುಡಿ ಬದ್ಧತೆಯ ಕುರಿತು ಟೀಕಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತುಕತೆಗೆ ಕೂರದೆ, ಮುಖ್ಯಮಂತ್ರಿಗಳು ಕರೆದ ಸಭೆಗೂ ಬರದೆ ಚಿತ್ರೋದ್ಯಮದ ಮಂದಿ ತಪ್ಪುದಾರಿ ತುಳಿಯುತ್ತಿದೆ ಎಂದು ಪಾಪು ಹೇಳಿದ್ದಾರೆ.

ಗಣತಂತ್ರ ವ್ಯವಸ್ಥೆಯಲ್ಲಿ ಅನ್ಯಭಾಷಾ ಚಿತ್ರಗಳಿಗೆ ನಿಷೇಧ ಹೇರುವುದು ಸಾಧ್ಯವಿಲ್ಲ ಎಂದು ಪಾಟೀಲ ಪುಟ್ಟಪ್ಪ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X