ಉತ್ತರಕರ್ನಾಟಕದ 12 ಜಿಲ್ಲೆಗಳಿಗೆ ಹಬ್ಬಿದ ಹೈಕೋರ್ಟ್ ಪೀಠದ ಜ್ವರ
ಉತ್ತರಕರ್ನಾಟಕದ 12 ಜಿಲ್ಲೆಗಳಿಗೆ ಹಬ್ಬಿದ ಹೈಕೋರ್ಟ್ ಪೀಠದ ಜ್ವರ
ನ್ಯಾಯಾಲಯದ ಆವರಣದಲ್ಲಿಯೇ ಧಾರವಾಡ ವಕೀಲರ ಸಂಘದಿಂದ ಪ್ರತ್ಯೇಕ ರಾಜ್ಯದ ಧ್ವಜಾರೋಹಣ
ಹೈಕೋರ್ಟ್ ಪೀಠ ಸ್ಥಾಪಿಸಬೇಕು ಅಥವಾ ಪ್ರತ್ಯೇಕ ರಾಜ್ಯಕ್ಕೆ ಅವಕಾಶ ಕಲ್ಪಿಸಿ ಎಂದು ಧಾರವಾಡದಲ್ಲಿ ವಕೀಲರ ಸಂಘ ನ್ಯಾಯಾಲಯದ ಆವರಣದಲ್ಲಿಯೇ ಪ್ರತ್ಯೇಕ ರಾಜ್ಯದ ಬಾವುಟವನ್ನು ಹಾರಿಸಿ ಪ್ರತಿಭಟಿಸಿದೆ. ಕಾನೂನು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಚಳವಳಿಯಲ್ಲಿ ತೊಡಗಿದ್ದಾರೆ.
ಅನಿರ್ದಿಷ್ಟಾವಧಿ ಶಾಲಾ-ಕಾಲೇಜು ಬಂದ್ ಹಾಗೂ ಕೋರ್ಟ್ ಕಲಾಪಗಳ ಬಹಿಷ್ಕಾರ, ರಸ್ತೆತಡೆ, ಪ್ರತ್ಯೇಕ ರಾಜ್ಯದ ಧ್ವಜಾರೋಹಣ, ಸರದಿ ಉಪವಾಸ ಉತ್ತರ ಕರ್ನಾಟಕದಲ್ಲಿ ದಿನನಿತ್ಯದ ಕಾರ್ಯಕ್ರಮಗಳಾಗಿವೆ.
ಹೈಕೋರ್ಟ್ ಪೀಠವಷ್ಟೇ ಅಲ್ಲ , ಈ ಭಾಗದಲ್ಲಿ ಸರ್ಕ್ಯೂಟ್ ಬೆಂಚ್ ಸಹಾ ಅನಗತ್ಯ ಎಂದಿರುವ ನ್ಯಾಯಮೂರ್ತಿ ಎನ್.ಕೆ.ಜೈನ್‌ರನ್ನು ವಜಾಗೊಳಿಸುವಂತೆ ಹುಬ್ಬಳ್ಳಿ ವಕೀಲರ ಸಂಘ ಒತ್ತಾಯಿಸಿದೆ.
ಹದಿನೈದು ದಿನಗಳೊಳಗೆ ಪೀಠ ಸ್ಥಾಪನೆ ಕುರಿತಂತೆ ರಾಜ್ಯ ಸರಕಾರ ಎರಡೂ ಸದನಗಳಲ್ಲಿ ಒಮ್ಮತದ ಗೊತ್ತುವಳಿ ಮಂಡಿಸಿ, ರಾಷ್ಟ್ರಪತಿಗಳಿಗೆ ಸಲ್ಲಿಸಬೇಕು ಎಂದು ಬೆಳಗಾವಿ ಜಿಲ್ಲೆಯ ನ್ಯಾಯವಾದಿಗಳ ಸಂಘ ಆಗ್ರಹಿಸಿದೆ.
ಸರಕಾರಕ್ಕೆ ಮನಸ್ಸಿದೆ: ಉತ್ತರ ಕರ್ನಾಟಕದಲ್ಲಿ ಪೀಠ ಸ್ಥಾಪನೆ ಸಂಕಲ್ಪಕ್ಕೆ ಸರಕಾರ ಬದ್ದವಾಗಿದೆ. ನ್ಯಾಯಕ್ಕಾಗಿ 500-600ಕಿ.ಮೀ ಅಲೆದಾಡುವ ಕಷ್ಟ ನನಗೆ ಗೊತ್ತು. ಸೆಪ್ಟೆಂಬರ್ 6 ರಂದು ಈ ಭಾಗದ ಪ್ರತಿನಿಧಿಗಳ ಸಭೆ ನಡೆಸಲಾಗುವುದು. ಸಭೆಯಲ್ಲಿ ಪೀಠದ ಸ್ಥಳದ ಆಯ್ಕೆ, ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕರೆದೊಯ್ಯುವುದು ಮತ್ತಿತರ ವಿಚಾರಗಳನ್ನು ಚರ್ಚಿಸುವುದಾಗಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು